ಬೆಂಗಳೂರು: ಕೈಗಾರಿಕೆಗಳ ಬೆಳವಣಿಗೆಯಲ್ಲಿ (Industrial growth) ದೇಶದ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವು ಕೂಡ ಒಂದಾಗಿದೆ. ಅಭಿವೃದ್ಧಿಗೆ ಜಾಗತಿಕವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿವೆ ಹಾಗೂ ಉದ್ಯೋಗಗಳನ್ನೂ ಸೃಷ್ಟಿಸುತ್ತಿವೆ. ಇನ್ನು ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರವು ಎಲ್ಲ ರೀತಿಯ ಸೌಲಭ್ಯ ಹಾಗೂ ನೆರವು ನೀಡಲು ಸಿದ್ಧವಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಎಂಎಸ್ಎಂಇ ಮತ್ತು ಮಹಿಳಾ ಉದ್ಯಮಿಗಳ ಒಕ್ಕೂಟದ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿದ್ದ 3ನೇ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ಒಕ್ಕೂಟ (ಉಬುಂಟು) ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಕರ್ನಾಟಕ ಕೈಗಾರಿಕಾ ವಲಯವನ್ನು ಸದೃಢಗೊಳಿಸುವುದಕ್ಕೆ ನೂತನ ಕೈಗಾರಿಕಾ ನೀತಿ 2020-25ಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ. ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ನಾವು ವಿವಿಧ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಮಹಿಳಾ ಉದ್ಯಮಿಗಳನ್ನ ಬೆಳೆಸುತ್ತಿರುವ ಭಾರತದಾದ್ಯಂತ ಮಹಿಳಾ ಉದ್ಯಮಿಗಳನ್ನು ಒಂದುಗೂಡಿಸುವ ಉಬುಂಟು ಉಪಕ್ರಮ ಹೆಮ್ಮೆಯ ಕಾರ್ಯ’ ಎಂದು ಹೇಳಿದರು.
ಉಬುಂಟು ಸಂಸ್ಥಾಪಕಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಉಬುಂಟು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡರು. ‘ವಾಟ್ಸಪ್ ಗ್ರೂಪ್‌ನಿಂದ ಆರಂಭವಾದ ಉಬುಂಟು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಸದ್ಯ ಭಾರತದಾದ್ಯಂತ ಸದ್ಯ 55 ಸಂಸ್ಥೆಗಳಿದ್ದು, ನೂರು ಅಧ್ಯಕ್ಷರನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ. ಉದ್ಯಮ ಕೌಶಲ್ಯಗಳನ್ನು ಬೆಳೆಸುವ ಗುರಿ ಹೊಂದಲಾಗಿದ್ದು, ಈಗಾಗಲೇ 2400 ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ನೀಡಲಾಗಿದೆ. ಸುಮಾರು 10 ಸಾವಿರ ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಫ್ಲಿಪ್ ಕಾರ್ಟ್‌ನ ಕಾರ್ಪೊರೇಟ್ ಕಮ್ಯೂನಿಕೇಷನ್ ಮುಖ್ಯಸ್ಥೆ ಸಾರಾ ಗಿಡಿಯೊನ್ ಮಾತನಾಡಿ, ಭಾರತದಲ್ಲಿ ಮಹಿಳೆಯರು ಉದ್ಯಮದೆಡೆಗೆ ಆಸಕ್ತಿ ತೋರಿಸುತ್ತಿರುವುದರಿಂದಾಗಿ ದೇಶದ ಆರ್ಥಿಕತೆ ಬೆಳವಣಿಗೆ ಹೊಂದುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸದರು. ಪ್ರಸ್ತುತ ಮಹಿಳೆಯರಲ್ಲಿ ಉದ್ಯಮದ ಬಗ್ಗೆ ಹೆಚ್ಚು ಒಲವು ಮೂಡುತ್ತಿದೆ. ಪ್ರಸ್ತುತ ಶೇ. 20ರಷ್ಟು ಉದ್ಯಮಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. 2018-20ರ ನಡುವೆ ಈ ಪ್ರಮಾಣ ಶೇ. 50ರಷ್ಟು ಹೆಚ್ಚಾಗಿದೆ. ಇದೊಂದು ಸಂಭ್ರಮಿಸುವ ಸಂಗತಿ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಇ-ಕಾಮರ್ಸ್ ಬೃಹತ್ತಾಗಿ ಬೆಳೆಯುತ್ತಿದೆ ಮಹಿಳಾ ಉದ್ಯಮಿಗಳು ಇದರ ಲಾಭ ಪಡೆಯಬೇಕು ಎಂದರು.
ಯುಎಸ್ ಕಾನ್ಸುಲೇಟ್ ಚೆನ್ನೈನ ಕೌನ್ಸಿಲರ್ ಫಾರ್ ಕಮರ್ಷಿಯಲ್ ಅಫೇರ್ಸ್ ಕ್ಯಾರಿ ಅರುನ್ ಮಾತನಾಡಿ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿರುವ ಉಬುಂಟು ಕಾರ್ಯ ಶ್ಲಾಘನೀಯ. ಅಮೆರಿಕವು ತಂಡವಾಗಿ ಕಾರ್ಯ ನಿರ್ವಹಿಸುವ ಮನೋಭಾವವನ್ನು ಗೌರವಿಸುತ್ತದೆ. 2025ರ ಮಾರ್ಚ್‌ನಲ್ಲಿ ನಾವು ಬೆಂಗಳೂರಿನಲ್ಲಿ ‘ಎಂಪವರ್ ಏಷ್ಯಾ’ ಎಕ್ಸ್‌ಪೋವನ್ನು ಆಯೋಜಿಸುತ್ತಿದ್ದೇವೆ. ಭಾರತೀಯ ಮಹಿಳಾ ಉದ್ಯಮಿಗಳೊಂದಿಗೆ ಸಂವಹನ ನಡೆಸಲು ಮತ್ತು ಹೆಚ್ಚಿನ ವ್ಯಾಪಾರ ಮತ್ತು ಪ್ರಚಾರಕ್ಕೆ ಇದು ವೇದಿಕೆಯಾಗಲಿದೆ. ಅಎರಿಕಾದಿಂದ ಮಹಿಳಾ ನಿಯೋಗವನ್ನು ಕರೆತರುತ್ತೇವೆ ಎಂದರು.
ಭಾರತ ಸರ್ಕಾರದ ಎಂಎಸ್‌ಎಂಇನ ಜಂಟಿ ನಿರ್ದೇಶಕರಾದ ಮರ್ಸಿ ಇಪಾವೊ ಮಾತನಾಡಿ, 2047ಕ್ಕೆ ವಿಕಸಿತ ಭಾರತ ಸಾಧನೆಯಾಗಬೇಕೆಂದರೆ ಎಂಎಸ್‌ಎಂಇ ಬೆಳೆಯಬೇಕು. ಸಾಕಷ್ಟು ಮಹಿಳಾ ಉದ್ಯಮಿಗಳು ಮುಂದೆ ಬರಬೇಕು. ಕರ್ನಾಟಕದಲ್ಲಿ ಮಹಿಳಾ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮದೆಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಇ-ಮಾರ್ಕೆಟ್ ದೊಡ್ಡದಾಗಿ ಬೆಳೆಯುತ್ತಿದೆ. ಮಹಿಳೆಯರು ಇದರ ಭಾಗವಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಮೆಂಟರ್‌ಶಿಪ್ ಕಾರ್ಯಕ್ರಮ ಕಾರ್ಪೋರೇಟ್ ನೆರವಿನೊಂದಿಗೆ ಇಲಾಖೆ ವತಿಯಿಂದ ಮಾಡಲಾಗುತ್ತಿದೆ.
ಬ್ಯಾಂಕ್‌ಗಳಿಂದ ಕೂಡಾ ಸಾಲ ಸೌಲಭ್ಯಕ್ಕೆ ಸಾಕಷ್ಟು ಅವಕಾಶ ಮಾಡಿಕೊಡಲಾಗುತ್ತಿದೆ, ಎಂದು ಸರ್ಕಾರದ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಉದ್ಯಮ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸುವುದರ ಜತೆಗೆ, ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಶಾಂತಿನಗರ ಶಾಸಕ ಹಾಗೂ ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಮಾತನಾಡಿ, ಸರಿಯಾದ ಸಮಯದಲ್ಲಿ ನೀವಿದ್ದೀರಿ. ಇಂದು ಸಮಾನ ಗೌರವ ಮಹಿಳೆಯರಿಗೆ ಸಿಗುತ್ತಿದೆ. ಅರ್ಧ ದೇಶ ಸದ್ಯ ನಿಮ್ಮ ಜತೆಗಿದೆ. ಅಂಬೇಡ್ಕರ್ ಅವರ ಮಾತುಗಳನ್ನು ನೀವು ಸತ್ಯ ಮಾಡುತ್ತಿದ್ದೀರಿ. ಸಾಕಷ್ಟು ಪ್ರಶಸ್ತಿಗಳನ್ನ ನೀಡಲಾಗುತ್ತಿದೆ. ನಿಮ್ಮ ಸಾಧನಗಳಿಗಿಂತ ತ್ಯಾಗ ದೊಡ್ಡದಿದೆ. ನೀವು ಆ ತ್ಯಾಗದ ಮೂಲಕ ಸಾಧನೆ ಮಾಡುತ್ತಿದ್ದೀರಿ. ರತ್ನಪ್ರಭಾ ಹಾಗೂ ಶಾಲಿನಿ ಅವರು ಮಹಿಳಾ ಉದ್ಯಮಿಗಳಿಗೆ ಸಾಕಷ್ಟು ಸೌಲಭ್ಯ ದೊರೆಯುವುದಕ್ಕೆ ನೆರವಾಗುತ್ತಿದ್ದಾರೆ.
ಬಿಡಿಎದಲ್ಲೂ ಕೂಡ ಮಹಿಳೆಯರಿಗೆ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಅವಕಾಶ ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತೇನೆ. ಒಗ್ಗಟ್ಟಿನಿಂದ ಎಂತಹ ಸಾಧನೆಯನ್ನಾದರೂ ಮಾಡಬಹುದು. ಸರ್ಕಾರ ಹಾಗೂ ಬಿಡಿಎ ಸದಾ ನಿಮ್ಮ ಜತೆಗಿರಲಿದೆ. ನೀವು ಸದೃಢರಾಗಿ ನಿಂತಷ್ಟು ಸಮಾಜ ನಿಮ್ಮ ಜತೆಗೆ ನಿಲ್ಲಲಿದೆ. ಕನಸುಗಳನ್ನು ಬೆನ್ನಟ್ಟಿ ಸಾಧನೆಯಾಗಲಿದೆ. ರಾಜಕೀಯದಲ್ಲಿಯೂ ಮಹಿಳಾ ನಾಯಕತ್ವಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಕೂಡ ಭರ್ತಿ ಮಾಡುವ ಪ್ರಯತ್ನವಾಗಲಿ ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಉಬುಂಟು ಯಶಸ್ಸು ಇರುವುದೇ ಒಬ್ಬರಿಗೊಬ್ಬರು ಸಹಕಾರಿಯಾಗಿರಬೇಕು. ಸರ್ಕಾರ ಇಲ್ಲಿ ಮಹಿಳಾ ಉದ್ಯಮಿಗಳಿಗೆ ನೆರವಾಗುವುದಕ್ಕೆ ನನಗೆ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಮಹಿಳೆಯರು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮನೆ, ಮನೆಗೆ ತೆರಳಿ ಘನ ತ್ಯಾಜ್ಯಸಂಗ್ರಹಿಸುವ ಮೂಲಕ ಶೇ. 90ರಷ್ಟು ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರ್ಯ ಅವರ ಜವಾಬ್ದಾರಿಯನ್ನು ತೋರಿಸುತ್ತಿದೆ. ಅತ್ಯುತ್ಸಾಹದಿಂದ ಮುನ್ನುಗ್ಗುವ ಮೂಲಕ ಮತ್ತಷ್ಟು ಸಾಧನೆ ಮಾಡಬಹದು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Arvind Kejriwal : ಜಾರ್ಖಂಡ್‌ನಲ್ಲಿ ಜೆಎಂಎಂ ಗೆಲವು; ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ ಕೇಜ್ರಿವಾಲ್
ಸಮಾವೇಶದಲ್ಲಿ ರಾಜ್ಯದ ಮೂಲೆ, ಮೂಲೆಯಿಂದ ಬಂದ ಮಹಿಳಾ ಉದ್ಯಮಿಗಳು ವೈವಿಧ್ಯಮಯ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿದರು. ಹಾಗೇ ಮಹಿಳಾ ಉದ್ಯಮಿಗಳ ಜ್ಞಾನ ಹಾಗೂ ಕೌಶಲ್ಯ ವೃದ್ಧಿಗೆ ಹಲವು ಸೆಷೆನ್‌ಗಳನ್ನು ಆಯೋಜಿಸಲಾಗಿತ್ತು.