ಪರ್ತ್: ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾನುವಾರ ಡಬಲ್ ಶತಕದ ಸಂಭ್ರಮ ಆಚರಿಸಿದರು. ಆರಂಭದಲ್ಲಿ ಯಶಸ್ವಿ ಜೈಸ್ವಾಲ್(161) ಆ ಬಳಿಕ ವಿರಾಟ್ ಕೊಹ್ಲಿ(100*) ಬಾರಿಸಿದ ಶತಕದಿಂದ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 533 ಮುನ್ನಡೆ ಸಾಧಿಸಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ 6 ವಿಕೆಟ್‌ಗೆ 487 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಜವಾಬು ನೀಡುತ್ತಿರುವ ಆಸ್ಟ್ರೇಲಿಯಾ ಖಾತೆ ತೆರೆಯುವ ಮುನ್ನವೇ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
172 ರನ್ ಗಳಿಸಿದ್ದಲ್ಲಿಂದ ಭಾನುವಾರ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಶತಕ ಬಾರಿಸಿ ನೆರವಾದರು. ಜೈಸ್ವಾಲ್ ಹ್ಯಾಜಲ್‌ವುಡ್ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಶರಕ ಪೂರೈಸಿದರು. ಶತಕ ಸಾಧನೆಯೊಂದಿಗೆ 23 ವರ್ಷ ತುಂಬುವ ಮುನ್ನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಇದು ಆಸೀಸ್ ನೆಲದಲ್ಲಿ ಅವರು ಬಾರಿಸಿದ ಮೊದಲ ಶತಕ.
ಜೈಸ್ವಾಲ್ ಮತ್ತು ರಾಹುಲ್ ಉತ್ತಮ ಜತೆಯಾಟ ನಡೆಸುವ ಮೂಲಕ ಮೊದಲ ವಿಕೆಟ್‌ಗೆ 201 ರನ್ ಒಟ್ಟುಗೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಕೆ.ಎಲ್ ರಾಹುಲ್ 77 ರನ್ ಗಳಿಸಿದ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಇದೇ ವೇಳೆ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಮೊತ್ತದ ಜತೆಯಾಟ ನಡೆಸಿದ ಭಾರತ ಮೊದಲ ಜೋಡಿ ಎಂಬ ಹಿರಿಮೆಗೆ ರಾಹುಲ್ ಮತ್ತು ಜೈಸ್ವಾಲ್ ಪಾತ್ರರಾದರು.
ಜೈಸ್ವಾಲ್‌ಗೆ ದ್ವಿಶತಕ ಬಾರಿಸುವ ಅವಕಾಶ ಕೂಡ ಇತ್ತು. ಆದರೆ ಅಂತಿಮವಾಗಿ ಅವರು 297 ಎಸೆತಗಳಿಂದ 15 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 161 ರನ್ ಬಾರಿಸಿ ಮಿಚೆಲ್ ಮಾರ್ಷ್‌ಗೆ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಲಿಯಾನ್ ಓವರ್‌ನಲ್ಲಿ ಸ್ಟಂಪ್ ಔಟ್ ಆದರು. ಅವರ ಗಳಿಕೆ 1 ರನ್. ಬಳಿಕ ಬಂದ ಜುರೇಲ್ ಕೂಡ ಒಂದು ರನ್‌ಗೆ ಸೀಮಿತರಾದರು. ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆಗೆ ಔಟ್ ಆಗಿದ್ದ ದೇವದತ್ತ ಪಡಿಕ್ಕಲ್ 25 ರನ್ ಬಾರಿಸಿದರು.
ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಕೊಹ್ಲಿ ಅಜೇಯ ನೂರು ರನ್ ಗಳಿಸಿದರು. ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಭಾರತ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಇದು ಕೊಹ್ಲಿಯ 30ನೇ ಟೆಸ್ಟ್ ಶತಕ. ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ನಿತೀಶ್ ರೆಡ್ಡಿ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 38 ರನ್ ಬಾರಿಸಿದರು.
ತವರಿನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡು ಮಾಜಿ ಆಟಗಾರರಿಂದ ಭಾರೀ ಟೀಕೆ ಎದುರಿಸಿದ್ದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಆಸೀಸ್‌ನಲ್ಲಿ ಶತಕ ಬಾರಿಸಿ ಎಲ್ಲ ಟೀಕೆಗಳಿಗೂ ತಕ್ಕ ಉತ್ತರ ನೀಡಿದರು. ಇದು ಕೊಹ್ಲಿ ಆಸೀಸ್ ನೆಲದಲ್ಲಿ ಬಾರಿಸಿದ 7ನೇ ಶತಕ. ಈ ವೇಳೆ 6 ಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ಪತನಗೊಂಡಿತು.