Sunday, 24th November 2024

Ration Card: ರದ್ದಾದ ರೇಷನ್‌ ಕಾರ್ಡ್‌ ವಾಪಸ್‌ ನೀಡಲು ಆಹಾರ ಇಲಾಖೆ ಆದೇಶ

Ration Card

ಬೆಂಗಳೂರು: ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನು ರದ್ದು ಮಾಡದಂತೆ ಆಹಾರ ಇಲಾಖೆ (Ration Card) ಆದೇಶ ಹೊರಡಿಸಿದೆ. ಈ ಬಗ್ಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದು, ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆದ್ಯತಾ ಪಡಿತರ ಚೀಟಿಯನ್ನು ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕ್ರಮ ವಹಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಈ ಸಂಬಂಧ ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದಂತೆ ತೆಗೆದುಕೊಂಡಿರುವ ಕ್ರಮವನ್ನು ಮರುಸ್ಥಾಪಿಸಲು ಕೂಡಲೇ ಕ್ರಮ ವಹಿಸಬೇಕು ತಿಳಿಸಿದ್ದಾರೆ.

  1. ಮರುಸ್ತಾಪನೆ ಕಾರ್ಯವನ್ನು ಮಾಡಲು ಆಹಾರ ತಂತ್ರಾಂಶದಲ್ಲಿ ಜಂಟಿ/ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ.
  2. ನೋಡಲ್ ಅಧಿಕಾರಿಗಳು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ಖುದ್ದು ಮೇಲ್ವಿಚಾರಣೆಯನ್ನು ಮಾಡಬೇಕು.
  3. ಮುರುಸ್ಥಾಪನೆಗೊಂಡಿರುವ PHH ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಂಚಿಕೆಯನ್ನು NIC ಸಹಯೋಗದೊಂದಿಗೆ ನ. 25 ರೊಳಗೆ ಜಂಟಿ ನಿರ್ದೇಶಕರು (ಸಂ.ವಿ) ರವರು ಕ್ರಮವಹಿಸಬೇಕು.
  4. ಕುಟುಂಬ ತಂತ್ರಾಂಶದಿಂದ ಬಂದಿರುವ ಆದಾಯ ತೆರಿಗೆ ಪಾವತಿದಾರರು ಪಡಿತರ ಚೀಟಿಗಳ ರದ್ದತಿಯಲ್ಲಿ ಕೇವಲ ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿಗಳನ್ನು ಮಾತ್ರವೇ ರದ್ದು/ಅಮಾನತು/ ಪರಿವರ್ತನೆ ಆಗುವಂತೆ ಆಯಾ ಜಂಟಿ/ಉಪ ನಿರ್ದೇಶಕರು ರವರು ಕ್ರಮವಹಿಸಬೇಕು, ಇದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಪಡೆದು ಪ್ರತಿಯೊಂದು ಪಡಿತರ ಚೀಟಿದಾರರ ದಾಖಲೆಗಳನ್ನು ಕಡತಗಳಲ್ಲಿ ಇರಿಸಬೇಕು.
  5. ಈ ಎಲ್ಲಾ ಕಾರ್ಯಗಳನ್ನು ಜಾಗೃತಿ ವಹಿಸಿ ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯ ವಾಗದಂತೆ ಕ್ರಮ ವಹಿಸುವುದು. ನ. 25ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Industrial growth: ಕೈಗಾರಿಕೆಗಳ ಬೆಳವಣಿಗೆಯಲ್ಲಿ ದೇಶದ ಮೊದಲ 5 ರಾಜ್ಯಗಳಲ್ಲಿ ಕರ್ನಾಟಕಕ್ಕೆ ಸ್ಥಾನ: ಸಚಿವ ದರ್ಶನಾಪುರ

ಎಪಿಎಲ್‌ ಕಾರ್ಡ್‌ಗಳ ರದ್ದತಿಗೆ ನಿರ್ದೇಶನ ನೀಡಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು: ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಮತ್ತು ಈವರೆಗೆ ಯಾವುದೇ ಎಪಿಎಲ್ ಕಾರ್ಡುಗಳನ್ನು (Ration Card) ರದ್ದುಗೊಳಿಸಿಲ್ಲ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡುಗಳು ರದ್ದಾಗಿವೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಕೆಲವು ದಿನಪತ್ರಿಕೆಗಳಲ್ಲಿ ಇ – ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು (APL Card) ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ.

ರಾಜ್ಯದಲ್ಲಿ 2024ರ ಸೆಪ್ಟೆಂಬರ್ 2ರ ವರೆಗೆ 25,13,798 ಎಪಿಎಲ್ ಕಾರ್ಡುಗಳಿದ್ದವು. ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ.

ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿದ್ದು, ಈ ರೀತಿಯ ಕ್ರಮವನ್ನು ಈವರೆಗೆ ಕೈಗೊಂಡಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ ಎಂದು ತಿಳಿಸಿದೆ.