ಪರ್ತ್: ಬೌನ್ಸಿ ಮತ್ತು ವೇಗದ ಬೌಲಿಂಗ್ ಪಿಚ್‌ನಲ್ಲಿ ಮುನ್ನುಗ್ಗಿ ಹೋದ ಭಾರತ, ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಬಂತು ನಿಂತಿದೆ. ಗೆಲುವಿಗೆ ಇನ್ನು 7 ವಿಕೆಟ್‌ಗಳ ಅಗತ್ಯವಿದೆ. ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿಯ ಶತಕ ಮೂರನೇ ದಿನದ ಹೈಲೆಟ್ ಆಗಿತ್ತು.
172 ರನ್ ಗಳಿಸಿದ್ದಲ್ಲಿಂದ ಭಾನುವಾರ ಮೂರನೇ ದಿನದಾಟ ಆರಂಭಿಸಿದ ಭಾರತ 6 ವಿಕೆಟ್‌ಗೆ 487 ಬಾರಿಸಿ ಡಿಕ್ಲೇರ್ ಘೋಷಿಸಿತು. ಜವಾಬು ನೀಡುತ್ತಿರುವ ಆಸ್ಟ್ರೇಲಿಯಾ 12 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 522 ರನ್ ಹಿನ್ನಡೆಯಲ್ಲಿದೆ. ಸದ್ಯದ ಸ್ಥಿತಿ ನೋಡುವಾಗ ಆಸೀಸ್‌ಗೆ ಪಂದ್ಯವನ್ನು ಡ್ರಾ ಮಾಡುವ ಸಾಧ್ಯತೆಯೂ ಕಡಿಮೆ. ನಾಳೆಯೇ ಪಂದ್ಯ ಮುಕ್ತಾಯ ಕಂಡು ಭಾರತ ದಾಖಲೆಯ ಗೆಲುವು ಸಾಧಿಸುವ ಸೂಚನೆಯೊಂದು ಕಂಡುಬಂದಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ಪರ ನಾಯಕ ಜಸ್‌ಪ್ರೀತ್ ಬುಮ್ರಾ 2, ಸಿರಾಜ್ 1 ವಿಕೆಟ್ ಕಿತ್ತರು.
90 ರನ್ ಗಳಿಸಿದ್ದ ಜೈಸ್ವಾಲ್ ಇಂದು ಶತಕ ಬಾರಿಸಿ ಮಿಂಚಿದರು. ಇದು ಅವರು ಆಸ್ಟ್ರೇಲಿಯಾದಲ್ಲಿ ಸಿಡಿಸಿದ ಮೊದಲ ಶತಕ ಒಟ್ಟಾರೆಯಾಗಿ ನಾಲ್ಕನೇ ಶತಕ. 23 ವರ್ಷ ತುಂಬುವ ಮುನ್ನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎಂಬ ಸಾಧನೆಯೂ ಜೈಸ್ವಾಲ್ ಪಾಲಾಯಿತು.
ಜೈಸ್ವಾಲ್ ಜತೆ ಉತ್ತಮವಾಗಿ ಆಡುತ್ತಿದ್ದ ಕೆ.ಎಲ್ ರಾಹುಲ್ 77 ರನ್ ಗಳಿಸಿದ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಜೈಸ್ವಾಲ್ ಮತ್ತು ರಾಹುಲ್ ಸೇರಿಕೊಂಡು ಮೊದಲ ವಿಕೆಟ್‌ಗೆ 201 ರನ್ ಒಟ್ಟುಗೂಡಿಸಿದರು. ಈ ವೇಳೆ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಮೊತ್ತದ ಜತೆಯಾಟ ನಡೆಸಿದ ಭಾರತದ ಮೊದಲ ಜೋಡಿ ಎಂಬ ಮೈಲುಗಲ್ಲು ನೆಟ್ಟರು. ಇದಕ್ಕೂ ಮುನ್ನ ಈ ದಾಖಲೆ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಹೆಸರಿನಲ್ಲಿತ್ತು. ಈ ಜೋಡಿ 1986 ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 191 ರನ್ ಬಾರಿಸಿತ್ತು.
ರಾಹುಲ್ ವಿಕೆಟ್ ಪತನದ ಬಳಿಕ ಬ್ಯಾಟಿಂಗ್‌ಗೆ ಇಳಿದ ದೇವದತ್ತ ಪಡಿಕ್ಕಲ್ 25 ರನ್ ಬಾರಿಸಿದರು. ಆದರೆ ಆ ಬಳಿಕ ಬಂದ ರಿಷಭ್ ಪಂತ್ ಮತ್ತು ಜುರೇಲ್ ತಲಾ ಒಂದು ರನ್‌ಗೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಪಂತ್ ಮುನ್ನುಗ್ಗಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಸ್ಟಂಪ್ ಔಟ್ ಆದರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ 8 ರನ್ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಈ ವೇಳೆ ವಿರಾಟ್ ಕೊಹ್ಲಿ ಮತ್ತು ವಾಷಿಂಗ್ಟನ್ ಸುಂದರ್ ಜತೆಗೂಡಿ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ಮತ್ತೆ ತಂಡವನ್ನು ಮೇಲೆತ್ತಿದರು.
ಸುಂದರ್ 94 ಎಸೆತ ಎದುರಿಸಿ 29 ರನ್ ಬಾರಿಸಿದರು. ಸುಂದರ್ ವಿಕೆಟ್ ಪತನದ ಬಳಿಕ ಪದಾರ್ಪಣ ಪಂದ್ಯವನ್ನಾಡುತ್ತಿರುವ ನಿತೀಶ್ ರೆಡ್ಡಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. 143 ಎಸೆತ ಎದುರಿಸಿ ಕೊಹ್ಲಿ ಭರ್ತಿ 100ರನ್ ಗಳಿಸಿ ಶತಕ ಪೂರೈಸಿದರು. ಈ ವೇಳೆ ಭಾರತ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಇದು ಕೊಹ್ಲಿಯ 30ನೇ ಟೆಸ್ಟ್ ಶತಕ. ನಿತೀಶ್ ರೆಡ್ಡಿ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 38 ರನ್ ಬಾರಿಸಿದರು.
ತವರಿನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡು ಮಾಜಿ ಆಟಗಾರರಿಂದ ಭಾರೀ ಟೀಕೆ ಎದುರಿಸಿದ್ದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಆಸೀಸ್‌ನಲ್ಲಿ ಶತಕ ಬಾರಿಸಿ ಎಲ್ಲ ಟೀಕೆಗಳಿಗೂ ತಕ್ಕ ಉತ್ತರ ನೀಡಿದರು. ಇದು ಕೊಹ್ಲಿ ಆಸೀಸ್ ನೆಲದಲ್ಲಿ ಬಾರಿಸಿದ 7ನೇ ಶತಕ. ಈ ವೇಳೆ 6 ಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ಪತನಗೊಂಡಿತು.