Sunday, 24th November 2024

IND vs AUS: ʻತುಂಬಾ ನಿಧಾನವಾಗಿ ಬರುತ್ತಿದೆʼ-ಮಿಚೆಲ್‌ ಸ್ಟಾರ್ಕ್‌ ಕಾಲೆಳೆದ ಯಶಸ್ವಿ ಜೈಸ್ವಾಲ್‌!

IND vs AUS: "Too Slow": Yashasvi Jaiswal Brutally Mocks Mitchell Starc In Perth

ಪರ್ತ್‌: ಆಸ್ಟ್ರೇಲಿಯಾ ವಿರುದ್ದ ಇಲ್ಲಿನ ಆಪ್ಟಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ (IND vs AUS) ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿ ಶತಕವನ್ನು ಪೂರ್ಣಗೊಳಿಸಿದರು. ತಮ್ಮ ಭರ್ಜರಿ ಬ್ಯಾಟಿಂಗ್‌ ಜೊತೆಗೆ ಮತ್ತೊಂದು ಘಟನೆಯಿಂದ ಎಡಗೈ ಬ್ಯಾಟ್ಸ್‌ಮನ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿದ್ದಾರೆ.

ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದ ಯಶಸ್ವಿ ಜೈಸ್ವಾಲ್‌ ಭಾರಿ ನಿರಾಶೆ ಮೂಡಿಸಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಹಾಗೆ ಮಾಡಲಿಲ್ಲ. ಮೊದಲನೇ ದಿನ ಮಾಡಿದ್ದ ತಪ್ಪನ್ನು ತಿದ್ದಿಕೊಂಡು ಕಂಡೀಷನ್ಸ್‌ಗೆ ತಕ್ಕ ಹಾಗೆ ಬ್ಯಾಟ್‌ ಬೀಸಿದರು. ಬಹಳಾ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿದ ಜೈಸ್ವಾಲ್‌ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸಿದರು.

ಎರಡನೇ ದಿನದಾಟಕ್ಕೆ ಅಜೇಯ 90 ರನ್‌ ಗಳಿಸಿದ್ದ ಜೈಸ್ವಾಲ್‌, ಮೂರನೇ ದಿನವೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿ ತಮ್ಮ ಟೆಸ್ಟ್‌ ವೃತ್ತಿ ಜೀವನದ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಕೆಎಲ್‌ ರಾಹುಲ್‌ ಜೊತೆಗೂಡಿ 201 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಯಶಸ್ವಿ ಜೈಸ್ವಾಲ್‌ ಅವರು 297 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 161 ರನ್‌ಗಳನ್ನು ಕಲೆ ಹಾಕಿದರು. ಎಡಗೈ ಬ್ಯಾಟ್ಸ್‌ಮನ್‌ ದ್ವಿಶತಕ ಸಿಡಿಸಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಮಿಚೆಲ್‌ ಮಾರ್ಷ್‌ ಎಸೆತದಲ್ಲಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರು.

Yashasvi Jaiswal: ಸಿಕ್ಸರ್‌ ಬಾರಿಸಿ ವಿಶ್ವ ದಾಖಲೆ ಬರೆದ ಜೈಸ್ವಾಲ್‌

ಮಿಚೆಲ್‌ ಸ್ಟಾರ್ಕ್‌ ಕಾಲೆಳೆದ ಜೈಸ್ವಾಲ್‌

ಅಂದ ಹಾಗೆ ಪಂದ್ಯದ ಎರಡನೇ ದಿನ ಯಶಸ್ವಿ ಜೈಸ್ವಾಲ್‌ ಅವರು ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರ ಕಾಲೆಳೆದಿದ್ದರು. ʻನಿಮ್ಮ ಎಸೆತದಲ್ಲಿ ಚೆಂಡು ತುಂಬಾ ನಿಧಾನವಾಗಿ ಬರುತ್ತಿದೆ!ʼ ಎಂದು ಆಸೀಸ್‌ ವೇಗಿಗೆ ಜೈಸ್ವಾಲ್‌ ಹೇಳಿದ್ದರು. ಇದನ್ನು ಗಮನಿಸಿದ ಮಿಚೆಲ್‌ ಸ್ಟಾರ್ಕ್‌ ನಗು ಮುಖದಲ್ಲಿ ಬೌಲ್‌ ಮಾಡಲು ಹಿಂದಕ್ಕೆ ತೆರಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹರ್ಷಿತ್‌ ರಾಣಾಗೆ ವಾರ್ನಿಂಗ್‌ ಕೊಟ್ಟಿದ್ದ ಸ್ಟಾರ್ಕ್‌

ಯಶಸ್ವಿ ಜೈಸ್ವಾಲ್‌ ಘಟನೆಗೂ ಮುನ್ನ ಟೀಮ್‌ ಇಂಡಿಯಾ ವೇಗಿ ಹರ್ಷಿತ್‌ ರಾಣಾಗೆ ಮಿಚೆಲ್‌ ಸ್ಟಾರ್ಕ್‌ ಎಚ್ಚರಿಕೆ ನೀಡಿದ್ದರು. ಎರಡನೇ ದಿನ ಮೊದಲನೇ ಸೆಷನ್‌ನಲ್ಲಿ ಬ್ಯಾಟ್‌ ಮಾಡುತ್ತಿದ್ದ ಮಿಚೆಲ್‌ ಸ್ಟಾರ್ಕ್‌ಗೆ ಹರ್ಷಿತ್‌ ರಾಣಾ ಬೌನ್ಸರ್‌ ಹಾಕಿದ್ದರು. ಈ ವೇಳೆ ಸ್ಟಾರ್ಕ್‌, ʻಹರ್ಷಿತ್‌, ನಿಮಗಿಂತ ನಾನು ತುಂಬಾ ವೇಗವಾಗಿ ಬೌಲ್‌ ಮಾಡುತ್ತೇನೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ,? ಎಂದು ಯುವ ವೇಗಿಗೆ ವಾರ್ನಿಂಗ್‌ ಕೊಟ್ಟಿದ್ದರು. ಇದಕ್ಕೆ ಹರ್ಷಿತ್‌ ರಾಣಾ ನಗುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಪಂದ್ಯದ ಮೇಲೆ ಹಿಗಿ ಹಿಡಿತ ಸಾಧಿಸಿದ ಭಾರತ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ ಭಾರತ ತಂಡ ಎರಡನೇ ದಿನದಂತೆ ಮೂರನೇ ದಿನವೂ ಕೂಡ ಪರ್ತ್‌ ಟೆಸ್ಟ್‌ ಮೇಲೆ ಬಿಗಿ ಹಿಡಿತವನ್ನು ಸಾಧಿಸಿದೆ. ಮೂರನೇ ದಿನ ಭಾರತ ತಂಡ, 134.3 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 487 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್‌ ಮಾಡಿಕೊಂಡಿತು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 534 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 4.2 ಓವರ್‌ಗಳಿಗೆ ಮೂರು ವಿಕೆಟ್‌ಗಳ ನಷ್ಟಕ್ಕೆ 12 ರನ್‌ ಗಳಿಸಿ ಆರಂಭಿಕ ಆಘಾತ ಅನುಭವಿಸಿದೆ.