ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಏರಿಕೆ ದಾಖಲಿಸುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ (Stock Market Outlook).
ಮಹಾರಾಷ್ಟ್ರ ದೇಶದ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾದ್ದರಿಂದ ಇಲ್ಲಿನ ಬೆಳವಣಿಗೆಗಳು ಷೇರು ಪೇಟೆಯ ಮೇಲೆ ಕೂಡ ಪ್ರಭಾವ ಬೀರುತ್ತವೆ.
ಬಿಜೆಪಿ ಮೈತ್ರಿಕೂಟ ಗೆದ್ದಿರುವುದರಿಂದ ಉದ್ಯಮ ಸ್ನೇಹಿ ಸರ್ಕಾರದ ನೀತಿಗಳು ಮಂದುವರಿಯಲಿವೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರಕ್ಕೂ ಇದು ನೈತಿಕವಾಗಿ ಪುಷ್ಟಿನೀಡಿದೆ. ಹೀಗಾಗಿ ಮೂಲಸೌಕರ್ಯ ಮತ್ತು ಉತ್ಪಾದನೆಯಂತಹ ಬೆಳವಣಿಗೆಗೆ ಮೂಲವಾಗಿರುವ ಕ್ಷೇತ್ರಗಳ ಅಭಿವೃದ್ಧಿ ಅಬಾಧಿತವಾಗಿ ಮುಂದುವರಿಯವ ವಿಶ್ವಾಸವನ್ನು ಹೂಡಿಕೆದಾರರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳ ಪೈಕಿ 228 ಕ್ಷೇತ್ರಗಳಲ್ಲಿ ಭರ್ಜರಿ ಜಯವನ್ನು ಗಳಿಸಿದೆ. ನೂತನ ಮುಖ್ಯಮಂತ್ರಿ ನ. 26ರಂದು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದ್ದು, ಬಳಿಕ ಕೂಡ ಷೇರು ಸೂಚ್ಯಂಕ ಜಿಗಿಯುವ ಸಾಧ್ಯತೆ ಇದೆ. ಜಾರ್ಖಂಡ್ನಲ್ಲಿ ಎನ್ಡಿಎಗೆ ಸೋಲಾಗಿದ್ದರೂ, ಮಹಾರಾಷ್ಟ್ರ ಚುನಾವಣೆಯ ರೀತಿಯಲ್ಲಿ ಷೇರು ಪೇಟೆಯ ಮೇಲೆ ಪರಿಣಾಮ ಬೀರಲಾರದು ಎನ್ನುತ್ತಾರೆ ತಜ್ಞರು.
ಮಹಾರಾಷ್ಟ್ರ ಚುನಾವಣೆಯ ಫಲಿತಾಂಶವು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ. ಅವರು ಸಾಮಾನ್ಯವಾಗಿ ಕೇಂದ್ರದಲ್ಲಿ ಸ್ಥಿರ ಆಡಳಿತವನ್ನು ಬಯಸುತ್ತಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಜಯ ಗಳಿಸಿರುವುದರಿಂದ ಎನ್ಡಿಎಗೆ ಕೂಡ ಹೆಚ್ಚಿನ ಬಲ ಬಂದಂತಾಗಿದೆ.
ನಿಫ್ಟಿಯ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ 24,200 ಅಂಕಗಳ ಮಟ್ಟದಲ್ಲಿ ಸ್ಟ್ರಾಂಗ್ ಸಪೋರ್ಟ್ ಸಿಕ್ಕಿದೆ. ಹೀಗಾಗಿ ನಿಫ್ಟಿ 24,550ರಿಂದ 25,000 ಅಂಕಗಳ ಕಡೆಗೆ ಏರಿಕೆಯಾಗುವ ನಿರೀಕ್ಷೆ ಇದೆ. ಎನ್ಟಿಪಿಸಿ ಗ್ರೀನ್ ಐಪಿಒ ಷೇರುಗಳ ಅಲಾಟ್ಮೆಂಟ್ ಅನ್ನು ಸೋಮವಾರ ನಿರೀಕ್ಷೆ ಮಾಡಲಾಗಿದೆ. ನ. 27ಕ್ಕೆ ಈ ಷೇರು ಲಿಸ್ಟಿಂಗ್ ಆಗಲಿದೆ.
ಈ ವಾರ ನಡೆಯಲಿರುವ ಐಪಿಒಗಳ ಬಗ್ಗೆ ನೋಡೋಣ: ಮೈನ್ ಬೋರ್ಡ್ ಸೆಗ್ಮೆಂಟ್ನಲ್ಲಿ ಹೊಸ ಐಪಿಒ ನಡೆಯುತ್ತಿಲ್ಲ. ಆದರೆ ಮಧ್ಯಮ ವಲಯದ ಕಂಪೆನಿಗಳಾದ ರಾಜೇಶ್ ಪವರ್ ಸರ್ವೀಸ್, ರಜಪುತಾನ ಬಯೊಡೀಎಲ್, ಅಭಾ ಪವರ್ ಆಂಡ್ ಸ್ಟೀಲ್, ಅಪೆಕ್ಸ್ ಇಕೊ ಟೆಕ್ ಸರ್ವೀಸ್, ಗಣೇಶ್ ಇನ್ ಫ್ರಾವರ್ಲ್ಡ್ ಐಪಿಒ ನಡೆಯಲಿದೆ.
ರಾಜೇಶ್ ಪವರ್ ಸರ್ವೀಸ್ನ ಐಪಿಒ ಷೇರು ದರ 167 ರೂ. ಆಗಿದೆ. ಬಯೊ ಡೀಸೆಲ್ ಉತ್ಪಾದಿಸುವ ರಜಪುತಾನ ಬಯೊಡೀಸೆಲ್ ಐಪಿಒ ಷೇರು ದರ 130 ರೂ. ಆಗಿದೆ. ಅಭಾ ಪವರ್ ಆಂಡ್ ಸ್ಟೀಲ್ ಷೇರು ದರ 75 ರೂ. ಆಗಿದೆ. ಅಪೆಕ್ಸ್ ಇಕೊ ಟೆಕ್ ಷೇರು ದರ 73 ರೂ. ಆಗಿದೆ. ಗಣೇಶ್ ಇನ್ ಫ್ರಾವರ್ಲ್ಡ್ ಷೇರು ದರ 83 ರೂ. ಆಗಿದೆ.
ಕಳೆದ 5 ದಿನಗಳಿಂದ ಸತತವಾಗಿ ಲಾಭ ಗಳಿಸಿರುವ 10 ಮಿಡ್ ಕ್ಯಾಪ್ ಸ್ಟಾಕ್ಗಳ ಪಟ್ಟಿ ನೋಡೋಣ:
ವನ್ 97 ಕಮ್ಯುನಿಕೇಶನ್ಸ್ ಷೇರು ಕಳೆದ 5 ದಿನಗಳಲ್ಲಿ 19% ಲಾಭ ಗಳಿಸಿದೆ. ಈ ಷೇರಿನ ದರ 900 ರೂ.
ಗೋದ್ರೇಜ್ ಪ್ರಾಪರ್ಟೀಸ್ ಷೇರು ದರ 11% ಏರಿಕೆಯಾಗಿದೆ. ಈ ಷೇರಿನ ದರ 2,857 ರೂ.
ಯುಪಿಎಲ್ ಷೇರು 5 ದಿನಗಳಲ್ಲಿ 10% ರಿಟರ್ನ್ ಕೊಟ್ಟಿದೆ. ಈ ಷೇರಿನ ದರ 566 ರೂ.
ಮುತ್ತೂಟ್ ಫೈನಾನ್ಸ್ 5 ದಿನಗಳಲ್ಲಿ 9% ಲಾಭ ಗಳಿಸಿದೆ. ಈ ಷೇರಿನ ದರ 1,927 ರೂ.
ಕೋರಮಂಡಲ್ ಇಂಟರ್ ನ್ಯಾಶನಲ್ ಷೇರು 5 ದಿನಗಳಲ್ಲಿ 7% ಲಾಭ ಗಳಿಸಿದೆ. ಈ ಷೇರಿನ ದರ 1,813 ರೂ.
ಎಯು ಸ್ಮಾಲ್ ಫೈನಾನಸ್ ಬ್ಯಾಂಕ್ ಷೇರು ಕಳೆದ 5 ದಿನಗಳಲ್ಲಿ 6% ರಿಟರ್ನ್ ನೀಡಿದೆ. ಈ ಷೇರಿನ ದರ 596 ರೂ.
ಈ ವಾರ ಡಿವಿಡೆಂಡ್ ಘೋಷಣೆ
ಷೇರು ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ಈ ವಾರ ಷೇರುದಾರರಿಗೆ ತಮ್ಮ ಡಿವಿಡೆಂಡ್ ನೀಡಲಿವೆ. ಅವುಗಳಲ್ಲಿ ಪಿಎಫ್ಸಿ, ವಿಆರ್ಎಲ್ ಲಾಜಿಸ್ಟಿಕ್ಸ್, ಹ್ಯಾಪಿಯೆಸ್ಟ್ ಮೈಂಡ್ಸ್ ಇತ್ಯಾದಿ ಪ್ರಮುಖ ಕಂಪನಿಗಳೂ ಇವೆ.
ನ. 25ರಂದು ಪಿಎಫ್ಸಿ ಕಂಪನಿಯು ಹೂಡಿಕೆದಾರರಿಗೆ ಪ್ರತಿ ಷೇರಿಗೆ 3.5 ರೂ. ಡಿವಿಡೆಂಡ್ ವಿತರಿಸಲಿದೆ.ಬಲರಾಂಪುರ್ ಚಿನಿ ಮಿಲ್ಸ್ ಪ್ರತಿ ಷೇರಿಗೆ 3 ರೂ. ಡಿವಿಡೆಂಡ್ ನೀಡಲಿದೆ.
ಇಪ್ಕಾ ಲ್ಯಾಬೊರೇಟರೀಸ್ ಪ್ರತಿ 3.5 ರೂ. ಡಿವಿಡೆಂಡ್ ನೀಡಲಿದೆ.
ನ. 26ರಂದು ಜಿಲೆಟ್ ಇಂಡಿಯಾ ಪ್ರತಿ ಷೇರಿಗೆ 45 ರೂ. ಡಿವಿಡೆಂಡ್ ನೀಡಲಿದೆ.
ಮೋರ್ಗಾನೈಟ್ ಕ್ರೂಸಿಬಲ್ ಪ್ರತಿ ಷೇರಿಗೆ 30 ರೂ. ಡಿವಿಡೆಂಡ್ ನೀಡಲಿದೆ.
ನ. 27ರಂದು ಹ್ಯಾಪಿಯೆಸ್ಟ್ ಮೈಡ್ಸ್ 2.5 ರೂ. ಡಿವಿಡೆಂಡ್ ನೀಡಲಿದೆ.
ನ. 29ರಂದು ವಿಆರ್ಎಲ್ ಲಾಜಿಸ್ಟಿಕ್ಸ್ ಪ್ರತಿ ಷೇರಿಗೆ 5 ರೂ.ಗಳ ಮಧ್ಯಂತರ ಡಿವಿಡೆಂಡ್ ನೀಡಲಿದೆ.
ಈ ನಡುವೆ ಆನ್ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ, ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಪ್ಲೇಸ್ಮೆಂಟ್ (QIP) ಮೂಲಕ 8,500 ಕೋಟಿ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ. ಕ್ಯೂಐಪಿ ಎಂದರೆ ಬ್ಯಾಂಕ್, ಮ್ಯೂಚುವಲ್ ಫಂಡ್ಗಳು ಇತ್ಯಾದಿ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಲಿದೆ. ದೇಶದಲ್ಲಿ ಕ್ವಿಕ್ ಕಾಮರ್ಸ್ ಇಂಡಸ್ಟ್ರಿ ಬೆಳೆಯುತ್ತಿರುವ ವೇಗವನ್ನು ಮತ್ತು ಅಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ಇದು ಬಿಂಬಿಸಿದೆ.
ಈ ಸುದ್ದಿಯನ್ನೂ ಓದಿ: Stock Market: ಈ ಷೇರುಗಳಲ್ಲಿ ಹೂಡಿದ್ರೆ 10-37% ಲಾಭ ಸಾಧ್ಯತೆ!