Sunday, 24th November 2024

Maharashtra Election Results: ನಾಳೆಯೇ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ?

Maharashtra Election Results

ಮುಂಬೈ: ಮಹಾರಾಷ್ಟ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ (Maharashtra Election Results). ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ರಾಜ್ಯದ 288 ವಿಧಾನಸಭಾ ಸ್ಥಾನಗಳಲ್ಲಿ ಮಹಾಯುತಿ ಒಕ್ಕೂಟ 235 ಕಡೆ ಜಯ ಗಳಿಸಿದೆ. ಅದರಲ್ಲಿಯೂ ಬಿಜೆಪಿ ಏಕಾಂಗಿಯಾಗಿ 132 ಕಡೆ ಜಯ ದಾಖಲಿಸಿದೆ. ನಾಳೆಯೇ (ನ. 25) ಸರ್ಕಾರ ರಚನೆಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಸಚಿವ, ಶಿವಸೇನೆಯ ಏಕನಾಥ ಶಿಂಧೆ ಬಣದ ನಾಯಕ ದೀಪಕ್‌ ಕೆಸಾರ್ಕರ್‌ ಈ ಬಗ್ಗೆ ಮಾತನಾಡಿ, ʼʼಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ನಾಳೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಾರೆಲ್ಲ ಕ್ಯಾಬಿನೆಟ್‌ ಸೇರಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

ಯಾರಾಗ್ತಾರೆ ಮುಖ್ಯಮಂತ್ರಿ?

ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಶಿವ ಸೇನೆಯ ಏಕನಾಥ ಶಿಂಧೆ ಸಿಎಂ ರೇಸ್‌ನಲ್ಲಿದ್ದಾರೆ. ಮೈತ್ರಿಕೂಟದ ನಾಯಕರು ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼʼಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮೈತ್ರಿ ನಾಯಕರ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಒಮ್ಮತದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಒಕ್ಕೂಟದ ಮೂರು ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊ‍ಳ್ಳುತ್ತೇವೆʼʼ ಎಂದು ದೇವೇಂದ್ರ ಫಡ್ನವಿಸ್ ಈ ಹಿಂದೆಯೇ ತಿಳಿಸಿದ್ದರು.

ಮಹಾಯುತಿ ಮೈತ್ರಿಕೂಟದ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದಿವೆ. ಸದ್ಯಕ್ಕೆ ಹಾಲಿ ಸಿಎಂ ಏಕನಾಥ್ ಶಿಂಧೆ ಅವರ ನೇತೃತ್ವವನ್ನೇ ಶಿವಸೇನೆ ಪ್ರತಿಪಾದಿಸುತ್ತಿದೆ. ಅವರೊಂದಿಗೇ ಮುಂದುವರಿಯೋಣ ಎಂದು ಹೇಳುವ ಒಂದು ಬಣವೂ ಬಿಜೆಪಿಯಲ್ಲಿದೆ.

ನ.​ 26ರಂದು ಹೇಮಂತ್ ಸೊರೆನ್ ಪ್ರಮಾಣ ವಚನ

ಜಾರ್ಖಂಡನ್‌ನಲ್ಲಿ ಜೆಎಂಎಂ ನೇತೃತ್ವದ ʼಇಂಡಿಯಾʼ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರು ನ. 26ರಂದು 4ನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ʼಇಂಡಿಯಾʼ ಒಕ್ಕೂಟದ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಎಂಎಂ ನೇತೃತ್ವದ ʼಇಂಡಿಯಾʼ ಒಕ್ಕೂಟವು ಸತತ 2ನೇ ಬಾರಿಗೆ ಗೆಲುವು ಸಾಧಿಸಿದೆ. ಜೆಎಂಎಂ 34 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಮೈತ್ರಿಕೂಟದ ಪಾಲುದಾರರಾದ ಕಾಂಗ್ರೆಸ್ ಮತ್ತು ಆರ್‌ಜೆಡಿ ಕ್ರಮವಾಗಿ 16 ಮತ್ತು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 24 ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ಈ ಸುದ್ದಿಯನ್ನೂ ಓದಿ: Maharashtra Election Results: ಯಾರಾಗಲಿದ್ದಾರೆ ಮಹಾರಾಷ್ಟ್ರ ಮುಖ್ಯಮಂತ್ರಿ? ಏಕನಾಥ ಶಿಂಧೆ ಅಥವಾ ದೇವೇಂದ್ರ ಫಡ್ನವಿಸ್?‌