Sunday, 24th November 2024

Reliance Shares: 24 ವರ್ಷದ ಹಿಂದೆ ರಿಲಯನ್ಸ್‌ ಷೇರಿನಲ್ಲಿ 10,000 ರೂ. ಹೂಡಿದ್ದರೆ ಈಗ ಎಷ್ಟಾಗುತ್ತಿತ್ತು? ಇಲ್ಲಿದೆ ಲೆಕ್ಕಾಚಾರ

Reliance Shares

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನಲ್ಲಿ (Reliance Shares) ನೀವು 2005ರಲ್ಲಿ 10,000 ರೂ. ಹೂಡಿಕೆ ಮಾಡಿರುತ್ತಿದ್ದರೆ, ಇಂದು ಅದರ ಬೆಲೆ ಎಷ್ಟಾಗುತ್ತಿತ್ತು ಗೊತ್ತೇ? ನಿಮಗೆ ಅಚ್ಚರಿಯಾದೀತು. 24 ವರ್ಷ ಹಿಂದೆ ನೀವು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನಲ್ಲಿ 10 ಸಾವಿರ ರೂ. ಇನ್ವೆಸ್ಟ್‌ ಮಾಡಿರುತ್ತಿದ್ದರೆ ಈಗ ಅದರ ಬೆಲೆ ಬರೋಬ್ಬರಿ 2 ಲಕ್ಷ ರೂ.ಗೆ ಏರಿಕೆಯಾಗಿರುತ್ತಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 2005ರಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟಿತ್ತು. ಈಗ 20 ಲಕ್ಷ ಕೋಟಿ ರೂ. ದಾಟಿದೆ. 2019ರಲ್ಲಿ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ. ತಲುಪಿತ್ತು. ಅದಾದ ಬಳಿಕ ವೇಗವಾಗಿ 20 ಲಕ್ಷ ಕೋಟಿ ರೂ.ಗಳ ಗಡಿಯನ್ನೂ ದಾಟಿತ್ತು. ರಿಲಯನ್ಸ್‌ ತನ್ನ ಸಾಲದ ಹೊರೆಯನ್ನು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಇಳಿಸಿದೆ.

ಟಿಸಿಎಸ್‌ ಷೇರಿನಲ್ಲಿ ಭರ್ಜರಿ ಲಾಭ

ನೀವು ಒಂದು ವೇಳೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಅಥವಾ ಟಿಸಿಎಸ್‌ನಲ್ಲಿ 2005ರಲ್ಲಿ 10,000 ರೂ.ಗಳನ್ನು ಹೂಡಿಕೆ ಮಾಡಿರುತ್ತಿದ್ದರೆ, ಈಗ ಅದರ ಮೌಲ್ಯ 4 ಲಕ್ಷದ 76 ಸಾವಿರ ರೂ.ಗೆ ಏರಿಕೆಯಾಗುತ್ತಿತ್ತು. 2004ರಲ್ಲಿ ಷೇರಿನ ದರ 85-90 ರೂ. ಆಸುಪಾಸಿನಲ್ಲಿತ್ತು. ಈಗ 4,200 ರೂ. ಆಸುಪಾಸಿಗೆ ಏರಿಕೆಯಾಗಿದೆ. ಮಾರುಕಟ್ಟೆ ಬಂಡವಾಳ ದೃಷ್ಟಿಯಿಂದ ಭಾರತದ ಎರಡನೇ ಅತಿ ದೊಡ್ಡ ಕಂಪೆನಿ ಇದಾಗಿದೆ. ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಕಂಪನಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಟಾಟಾ ಸಮೂಹದ ಪ್ರಮುಖ ಕಂಪೆನಿಯಾದ ಟಿಸಿಎಸ್‌ ಬಹುತೇಕ ಸಾಲ ಮುಕ್ತವಾಗಿದೆ. ಡಿವಿಡೆಂಡ್‌ ವಿತರಣೆಯಲ್ಲೂ ಉತ್ತಮ ರೆಕಾರ್ಡ್‌ ಹೊಂದಿದೆ.

ಜಗತ್ತಿನ 10ನೇ ಅತಿ ದೊಡ್ಡ ಬ್ಯಾಂಕ್‌ ಎಚ್‌ಡಿಎಫ್‌ಸಿ!

ಭಾರತದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, ಷೇರುಗಳ ಮಾರುಕಟ್ಟೆ ಬಂಡವಾಳ ದೃಷ್ಟಿಯಿಂದ ಜಗತ್ತಿನ 10ನೇ ಅತಿ ದೊಡ್ಡ ಬ್ಯಾಂಕ್‌ ಆಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ 3ನೇ ಅತಿ ಹೆಚ್ಚು ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ ಹೊಂದಿರುವ ಸಂಸ್ಥೆಯಾಗಿದೆ. ಆರ್‌ಬಿಐ ಪ್ರಕಾರ, ಭಾರತದಲ್ಲಿ ಡೊಮೆಸ್ಟಿಕ್‌ ಸಿಸ್ಟಮ್ಯಾಟಿಕ್‌ ಇಂಪಾರ್ಟೆಂಟ್‌ ಬ್ಯಾಂಕ್‌ಗಳಲ್ಲಿ ಕೇವಲ 3 ಮಾತ್ರ ಇವೆ. ಅವುಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಕೂಡ ಒಂದಾಗಿದೆ. ಅಂದರೆ ಈ ಬ್ಯಾಂಕ್‌ ವಿಫಲವಾಗುವ ಸಾಧ್ಯತೆ ಇರುವುದಿಲ್ಲ.

ಭಾರತದ ಈ ಬ್ಯಾಂಕ್‌ಗಳು ದಿವಾಳಿಯಾಗಲ್ಲ!

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಭಾರತದ 3 ಬ್ಯಾಂಕ್‌ಗಳಿಗೆ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್‌ ಬ್ಯಾಂಕ್ಸ್‌ ಎಂಬ ವಿಶೇಷ ಸ್ಥಾನಮಾನ ನೀಡಿದೆ. ಅವುಗಳು ಯಾವುದು ಎಂದರೆ, ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಎಸ್‌ಬಿಐ, ಎರಡನೆಯದಾಗಿ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು 3ನೆಯದಾಗಿ ಐಸಿಐಸಿಐ ಬ್ಯಾಂಕ್.‌ ಈ ಬ್ಯಾಂಕ್‌ಗಳನ್ನು ‘ಟೂ ಬಿಗ್‌ ಟು ಫೇಲ್‌ʼ ಎಂದು ಪರಿಗಣಿಸಲಾಗಿದೆ. ದೇಶದ ಬ್ಯಾಂಕಿಂಗ್‌ ಕ್ಷೇತ್ರದ ಆರೋಗ್ಯಕ್ಕೆ ಈ ಮೂರೂ ಬ್ಯಾಂಕ್‌ಗಳು ಅತ್ಯಂತ ಅವಶ್ಯಕ ಮತ್ತು ನಿರ್ಣಾಯಕವಾಗಿವೆ. ಆದ್ದರಿಂದ ಅವುಗಳಿಗೆ ಈ ವಿಶೇಷ ಮಾನ್ಯತೆಯನ್ನು ನೀಡಲಾಗಿದೆ. ಇದರಿಂದ ಏನು ಪ್ರಯೋಜನವೆಂದರೆ ಒಂದು ವೇಳೆ ಈ ಬ್ಯಾಂಕ್‌ಗಳು ಆರ್ಥಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿದರೆ, ಆಗ ಸಂಭವನೀಯ ಅಪಾಯವನ್ನು ತಡೆಗಟ್ಟಲು, ಸರ್ಕಾರದ ನೆರವನ್ನು ಬ್ಯಾಂಕ್‌ಗಳು ನಿರೀಕ್ಷಿಸಬಹುದು.

ಈಗ ಇನ್ವೆಸ್ಟ್‌ ಮಾಡಲು ಯಾವ ಸ್ಟಾಕ್‌ ಬೆಸ್ಟ್?‌

ಭಾರತದಲ್ಲಿ ಕಳೆದ ಶುಕ್ರವಾರ ಷೇರು ಮಾರುಕಟ್ಟೆ ಚೇತರಿಸಿತ್ತು. ಐಟಿ ಮತ್ತು ಬ್ಯಾಂಕಿಂಗ್‌ ವಲಯದಲ್ಲಿ ಷೇರು ಖರೀದಿಯ ಟ್ರೆಂಡ್‌ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ತಜ್ಞರು 5 ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಅವುಗಳು ಇಂತಿವೆ. ಎಲ್‌ಟಿಐ ಮೈಂಡ್‌ ಟ್ರಿಯನ್ನು ರೆಕಮೆಂಡ್‌ ಮಾಡಲಾಗಿದ್ದು, ಇದರ ಈಗಿನ ದರ 6,120 ರೂ.ಗಳಾಗಿದೆ. ಮಾಸ್‌ಟೆಕ್‌ ಅನ್ನು ರೆಕಮೆಂಡ್‌ ಮಾಡಲಾಗಿದ್ದು, ಇದರ ದರ 3,230 ರೂ.ಗಳಾಗಿದೆ. ಟಾಟಾ ಮೋಟಾರ್ಸ್‌ ಷೇರನ್ನು ಶಿಫಾರಸ್ಸು ಮಾಡಲಾಗಿದ್ದು 800 ಕೋಟಿ ರೂ.ಗಳಾಗಿದೆ. ಸಿಮನ್ಸ್‌ ಷೇರನ್ನು ತಜ್ಞರು ರೆಕಮೆಂಡ್‌ ಮಾಡಿದ್ದು, ಇದರ ದರ 6,850 ರೂ.ಗಳಾಗಿದೆ. ಜ್ಯುಬಿಲಿಯೆಂಟ್‌ ಫುಡ್‌ ವರ್ಕ್ಸ್‌ ಷೇರುಗಳನ್ನು ತಜ್ಞರು ಶಿಫಾರಸು ಮಾಡಿದ್ದು, ಇದರ ದರ 645 ರೂ.ಗಳಾಗಿದೆ.

ಈ ಸುದ್ದಿಯನ್ನೂ ಓದಿ: Stock Market Outlook: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಮಹಾಯುತಿ ಸರ್ಕಾರ; ನಿಫ್ಟಿ, ಸೆನ್ಸೆಕ್ಸ್‌ ಏರಿಕೆಯ ನಿರೀಕ್ಷೆ