ರಾಂಚಿ: ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜಾರ್ಖಂಡ್ ಮುಕ್ತಿ ಮೋರ್ಚಾ (Jharkhand Mukti Morcha-JMM) ಮೋಡಿ ಮಾಡಿದ್ದು, ಆಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 81 ಸೀಟುಗಳ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ʼಇಂಡಿಯಾʼ ಒಕ್ಕೂಟ 56 ಕಡೆ ಜಯ ಗಳಿಸಿ ಭರ್ಜರಿಯಾಗಿ ಅಧಿಕಾರಕ್ಕೆ ಮರಳಿದೆ. ಜೆಎಂಎಂ ನಾಯಕ ಹೇಮಂತ್ ಸೊರೆನ್ (Hemant Soren) ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಭಾನುವಾರ (ನ. 24) ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ನ. 28ರಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದಕ್ಕೂ ಮೊದಲು ʼಇಂಡಿಯಾʼ ಮೈತ್ರಿಕೂಟದ ನಾಯಕರೆಲ್ಲ ಒಮ್ಮತದಿಂದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹೇಮಂತ್ ಸೊರೆನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
#WATCH | Ranchi: Leaders of INDIA alliance shows unity outside the Raj Bhawan in Ranchi
— ANI (@ANI) November 24, 2024
Hemant Soren tendered his resignation to the Governor and staked a claim to form Government pic.twitter.com/K4CXMmmjkJ
ಸರ್ಕಾರ ರಚಿಸಲು ಹಕ್ಕು ಮಂಡಿಸುವ ಮೊದಲು, ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯಪಾಲರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೊರೆನ್, “ನಾನು ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇನೆ ಮತ್ತು ಮೈತ್ರಿ ಕೂಟದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದೇನೆ. ಅವರು ನಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ನ. 28ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆʼʼ ಎಂದು ತಿಳಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೊರೆನ್ ಅವರು ಬಿಜೆಪಿ ಅಭ್ಯರ್ಥಿ ಗಾಮ್ಲಿಯೆಲ್ ಹೆಂಬ್ರೋಮ್ ಅವರನ್ನು 39,791 ಮತಗಳ ಅಂತರದಿಂದ ಸೋಲಿಸುವ ಮೂಲಕ ಬರ್ಹೈತ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸೊರೆನ್ 95,612 ಮತಗಳನ್ನು ಪಡೆದರೆ, ಹೆಂಬ್ರೋಮ್ 55,821 ಮತಗಳನ್ನು ಪಡೆದರು.
ಜಾರ್ಖಂಡ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹೇಮಂತ್ ಸೊರೆನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಬೋಧ್ ಕಾಂತ್ ಸಹಾಯ್ ಎಎನ್ಐಗೆ ತಿಳಿಸಿದ್ದಾರೆ. “ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ನಾಯಕರ ಬೆಂಬಲದಿಂದ ಹೇಮಂತ್ ಸೊರೆನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತುʼʼ ಎಂದು ಹೇಳಿದ್ದಾರೆ.
81 ಸೀಟುಗಳ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ʼಇಂಡಿಯಾʼ ಒಕ್ಕೂಟ 56 ಕಡೆಗಳಲ್ಲಿ ಜಯ ಗಳಿಸಿದೆ. ಈ ಮೂಲಕ ಸತತ 2ನೇ ಬಾರಿಗೆ ಅಧಿಕಾರ ಹಿಡಿದಿದೆ. ಈ ಪೈಕಿ ಜೆಎಂಎಎಂ 34, ಕಾಂಗ್ರೆಸ್ 16, ಆರ್‌ಜೆಡಿ 4 ಮತ್ತು ಸಿಪಿಐಎಂಎಲ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎ 24 ಸೀಟುಗಳಿಗೆ ತೃಪ್ತಿಪಟ್ಟಿದೆ. ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ 41.
ಹೇಮಂತ್ ಸೊರೆನ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಲಿದ್ದಾರೆ. ಬಿಹಾರದಿಂದ ಬೇರ್ಪಟ್ಟು 2000ರ ನವೆಂಬರ್ 15ರಂದು ಜಾರ್ಖಂಡ್ ಪತ್ಯೇಕ ರಾಜ್ಯವಾಗಿತ್ತು. ವಿಶೇಷ ಎಂದರೆ ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗುತ್ತಿರುವುದು ಇದು 4ನೇ ಬಾರಿ. ನ. 28ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಹುಲ್ ಗಾಂಧಿ ಸಹಿತ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Maharashtra Election Results: ನಾಳೆಯೇ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ?