Sunday, 24th November 2024

IPL 2025 Mega Auction: ಆರ್‌ಸಿಬಿಗೆ ಎಂಟ್ರಿ ಕೊಟ್ಟ ಸ್ಪೋಟಕ ಓಪನರ್‌ ಫಿಲ್‌ ಸಾಲ್ಟ್‌!

Royal challengers Bengaluru bought Phil Salt for Rs 11.50 crore and Jitesh Sharma for 11 Crore

ನವದೆಹಲಿ: ಇಂಗ್ಲೆಂಡ್‌ ತಂಡದ ಸ್ಟೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಫಿಲ್‌ ಸಾಲ್ಟ್‌ ಹಾಗೂ ಭಾರತ ತಂಡದ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಅವರನ್ನು ಖರೀದಿಸುವಲ್ಲಿ(IPL 2025 Mega Auction) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಯಶಸ್ವಿಯಾಗಿದೆ. ಫಿಲ್‌ ಸಾಲ್ಟ್‌ ಅವರನ್ನು 11.50 ಕೋಟಿ ರೂ. ಗಳಿಗೆ ಖರೀದಿಸಿದರೆ, ಜಿತೇಶ್‌ ಶರ್ಮಾ ಅವರನ್ನು ಬೆಂಗಳೂರು ಫ್ರಾಂಚೈಸಿ 11 ಕೋಟಿ ಗಳಿಗೆ ಆರ್‌ಸಿಬಿ ಖರೀದಿಸಿದೆ. ಆಸ್ಟ್ರೇಲಿಯಾ ವೇಗಿ ಜಾಶ್‌ ಹೇಝಲ್‌ವುಡ್‌ ಆರ್‌ಸಿಬಿಗೆ ಮರಳಿದ್ದಾರೆ.

ಶನಿವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಫಿಲ್‌ ಸಾಲ್ಟ್‌ ಅವರನ್ನು ಖರೀದಿಸಲು ಕೊನೆಯವರೆಗೂ ಹಾಲಿ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫಾಂಚೈಸಿ ನಡುವೆ ವಿರುದ್ಧ ತೀವ್ರ ಪೈಪೋಟಿ ನಡೆಸಿತ್ತು. ಆದರೆ, ಅಂತಿಮವಾಗಿ ಇಂಗ್ಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಅನ್ನು ಖರೀದಿಸುವಲ್ಲಿ ಬೆಂಗಳೂರು ತಂಡ ಸಫಲವಾಯಿತು.

IPL 2025 Mega Auction: ಆರ್‌ಸಿಬಿ ಸೇರಿದ ಲಿವಿಂಗ್‌ಸ್ಟೋನ್‌, ಗುಜರಾತ್‌ಗೆ ಸಿರಾಜ್‌!

ಕಳೆದ ಮೂರು ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ್ದ ಫಾಫ್‌ ಡು ಪ್ಲೆಸಿಸ್‌ ಅವರನ್ನು ಮೆಗಾ ಹರಾಜಿಗೆ ರಿಲೀಸ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇನಿಂಗ್ಸ್‌ ಆರಂಭಿಸಲು ಸ್ಪೋಟಕ ಬ್ಯಾಟ್ಸ್‌ಮನ್‌ ಅನ್ನು ಖರೀದಿಸಲು ಆರ್‌ಸಿಬಿ ಎದುರು ನೋಡುತ್ತಿತ್ತು. ಅಂದಹಾಗೆ ಆಕ್ಷನ್‌ಗೆ ಬಂದ ಫಿಲ್‌ ಸಾಲ್ಟ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆ ಮೂಲಕ ಮುಂದಿನ ಆವೃತ್ತಿಯಲ್ಲಿ ಫಿಲ್‌ ಸಾಲ್ಟ್‌ ಆರ್‌ಸಿಬಿಗೆ ಸ್ಪೋಟಕ ಆರಂಭ ನೀಡಲಿದ್ದಾರೆಂಬ ನಿರೀಕ್ಷೆ ಇಡಲಾಗಿದೆ.

2024ರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲು ಫಿಲ್‌ ಸಾಲ್ಟ್‌ ಕೂಡ ಮಹತ್ವದ ಕೊಡುಗೆಯನ್ನು ನೀಡಿದ್ದರು. ಇವರು ಕಳೆದ ಆವೃತ್ತಿಯಲ್ಲಿ ಆಡಿದ್ದ 12 ಪಂದ್ಯಗಳಿಂದ 435 ರನ್‌ಗಳನ್ನು ಸಿಡಿಸಿದ್ದರು. ಸುನೀಲ್‌ ನರೇನ್‌ ಜೊತೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡುವ ಮೂಲಕ ಕೆಕೆಆರ್‌ಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಇದರ ಹೊರತಾಗಿಯೂ ಕೋಲ್ಕತಾ ಫ್ರಾಂಚೈಸಿ ಅವರನ್ನು ರಿಲೀಸ್‌ ಮಾಡಿತ್ತು.

ಆರ್‌ಸಿಬಿಗೆ ಜಿತೇಶ್‌ ಶರ್ಮಾ ವಿಕೆಟ್‌ ಕೀಪರ್‌

ಫಿಲ್‌ ಸಾಲ್ಟ್‌ ಅವರನ್ನು ಖರೀದಿಸಿದ ಬೆನ್ನಲ್ಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ಅವರನ್ನು 11 ಕೋಟಿ ರೂ. ಗಳಿಗೆ ಖರೀದಿಸಿದೆ. ಅಂದ ಹಾಗೆ ಜಿತೇಶ್‌ ಶರ್ಮಾ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಆಸಕ್ತಿಯನ್ನು ತೋರಿತ್ತು. ಅಲ್ಲದೆ ಪಂಜಾಬ್‌ ಕಿಂಗ್ಸ್‌ ಕೂಡ ಆರ್‌ಟಿಎಂ ನಿಯಮದಡಿಯಲ್ಲಿ 7 ಕೋಟಿ ರೂ. ಗಳಿಗೆ ಖರೀದಿಸಲು ನಿರ್ಧರಿಸಿತ್ತು. ಆದರೆ, ಬೆಂಗಳೂರು ಫ್ರಾಂಚೈಸಿ 11 ಕೋಟಿ ರೂ. ಗಳಿಗೆ ಜಿತೇಶ್‌ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

ಆರ್‌ಸಿಬಿಗೆ ಮರಳಿದ ಜಾಶ ಹೇಝಲ್‌ವುಡ್‌

ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ಜಾಶ ಹೇಝಲ್‌ವುಡ್‌ ಆರ್‌ಸಿಬಿಗೆ ಮರಳಿದ್ದಾರೆ. ಇವರನ್ನು ಮೆಗಾ ಹರಾಜಿಗೆ ರಿಲೀಸ್‌ ಮಾಡಲಾಗಿತ್ತು. ಆದರೆ, ಜಾಶ್‌ ಹೇಝಲ್‌ವುಡ್‌ ಅವರನ್ನು ಬೆಂಗಳೂರು ಫ್ರಾಂಚೈಸಿ 12.50 ಕೋಟಿ ರೂ. ಗಳಿಗೆ ಖರೀದಿಸಿದೆ. ಆ ಮೂಲಕ ಆರ್‌ಸಿಬಿ ತನ್ನ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಿದೆ.