Sunday, 24th November 2024

Parliament Winter Session: ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ; ಪ್ರತಿಧ್ವನಿಸಲಿದೆ ಮಣಿಪುರ ಸಂಘರ್ಷ

Parliament Winter Session

ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆ (ನ. 25) ಆರಂಭವಾಗಿ ಡಿ. 20ರ ತನಕ ನಡೆಯಲಿದ್ದು, ಬಿಸಿ ಬಿಸಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮಣಿಪುರ ಸಂಘರ್ಷ, ವಕ್ಫ್‌ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ಸೇರಿದಂತೆ 16 ಮಸೂದೆಗಳ ಮಂಡನೆ ಸರ್ಕಾರದ ಕಾರ್ಯಸೂಚಿಯಲ್ಲಿವೆ (Parliament Winter Session).

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 5 ಹೊಸ ಮಸೂದೆಗಳನ್ನು ಪಟ್ಟಿ ಮಾಡಿದೆ. ಒನ್ ನೇಷನ್ ಒನ್ ಎಲೆಕ್ಷನ್ ಬಿಲ್ ಕೂಡ ಮಂಡನೆಯಾಗುವ ನಿರೀಕ್ಷೆಯಿದೆ. ಇದಲ್ಲದೇ ಜಮ್ಮು-ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡುವ ಪ್ರಸ್ತಾವವೂ ಅಂಗೀಕಾರವಾಗುವ ಸಾಧ್ಯತೆ ಇದೆ.

5 ಮಸೂದೆ ಯಾವುದೆಲ್ಲ?

5 ಮಸೂದೆಗಳಲ್ಲಿ ಮರ್ಚೆಂಟ್‌ ಶಿಪ್ಪಿಂಗ್‌ ಬಿಲ್‌, ಕೋಸ್ಟಲ್‌ ಸಿಪ್ಪಿಂಗ್‌ ಬಿಲ್‌, ಇಂಡಿಯನ್‌ ಪೋರ್ಟ್ಸ್‌ ಬಿಲ್‌, ಪಂಜಾಬ್‌ ಕೋರ್ಟ್ಸ್‌ (ತಿದ್ದುಪಡಿ) ಬಿಲ್‌ ಮತ್ತು ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಬಿಲ್‌ ಸೇರಿದೆ. ಇನ್ನು ವಕ್ಫ್ ಮಸೂದೆಯ ವಿವಾದಾತ್ಮಕ ತಿದ್ದುಪಡಿ ಮತ್ತು ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪದ ನಿಬಂಧನೆಗಳು ಈ ಅಧಿವೇಶನದಲ್ಲಿ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ವಕ್ಫ್ ಮಸೂದೆಯ ತಿದ್ದುಪಡಿಗಳನ್ನು ಪ್ರಸ್ತುತ ಆಡಳಿತಾರೂಢ ಬಿಜೆಪಿಯ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ ಅಧ್ಯಯನ ಮಾಡುತ್ತಿದೆ. ಸಮಿತಿಯು ನ. 29ರೊಳಗೆ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಬೇಕಾಗಿದೆ. ಸಮಿತಿಗೆ ನೀಡಲಾದ ಅಂತಿಮ ಗಡುವನ್ನು ವಿಸ್ತರಿಸುವಂತೆ ವಿಪಕ್ಷಗಳು ಈಗಾಗಲೇ ಆಗ್ರಹಿಸಿದ್ದು, ಇದೇ ಕಾರಣಕ್ಕೆ ಕೋಲಾಹಲ ಕಂಡು ಬರಲಿದೆ.

ನ. 26ರಂದು ಸಂವಿಧಾನ ದಿನಾಚರಣೆ

ನ. 26ರಂದು ಸಂವಿಧಾನ ದಿನವನ್ನು ಸಂವಿಧಾನ್ ಸದನದ ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಸ್ಕೃತ ಮತ್ತು ಮೈಥಿಲಿ ಭಾಷೆಗಳ ಸಂವಿಧಾನದ ಪ್ರತಿಗಳ ಜತೆಗೆ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸಂವಿಧಾನದ ವಿವರಣೆಗಳಿಗೆ ಸಮರ್ಪಿತವಾದ ಕಿರುಪುಸ್ತಕದ ಜತೆಗೆ ʼMaking of the Constitution: A Glimpseʼ ಮತ್ತು ʼMaking of the Constitution and its Glorious Journeyʼ ಎಂಬ 2 ಕೃತಿಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ.

ಸರ್ವ ಪಕ್ಷಗಳ ಸಭೆ

ಅಧಿವೇಶನದ ಮುನ್ನ ಕೇಂದ್ರವು ಆಯೋಜಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಣಿಪುರ ಹಿಂಸಾಚಾರ ಮತ್ತು ಸಮಸ್ಯೆಯನ್ನು ಕೊನೆಗೊಳಿಸಲು ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿದವು. ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಪಕ್ಷಗಳನ್ನು ಒತ್ತಾಯಿಸಿದೆ.

ಈ ಸುದ್ದಿಯನ್ನೂ ಓದಿ: One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು