ಲಖನೌ: ಗೂಗಲ್ ಮ್ಯಾಪ್ (Google Maps) ಎಡವಟ್ಟಿನಿಂದ ಮತ್ತೊಂದು ಅಪಘಾತ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಈ ಅವಘಡ ನಡೆದಿದ್ದು, ಕಾಮಗಾರಿ ನಡೆಯುತ್ತಿದ್ದ ಸೇತುವೆಯಲ್ಲಿ ಸಂಚರಿಸಿದ ಕಾರು ರಾಮಗಂಗಾ ನದಿಗೆ ಉರುಳಿದೆ. ಕಾರಿನಲ್ಲಿದ್ದವರು ಮ್ಯಾಪ್ ನೋಡಿ ಸಂಚರಿಸುತ್ತಿದ್ದ ವೇಳೆ ಅಪೂರ್ಣಗೊಂಡ ಸೇತುವೆಯಿಂದ ಕಾರು ನದಿಗೆ ಉರುಳಿ ಬಿದ್ದಿದೆ ಎಂದು ಮೂಲಗಳು ತಿಳಿಸಿದೆ.
ಜಿಲ್ಲೆಯ ಫರೀದ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ (ನ. 23) ಈ ಅಪಘಾತ ಸಂಭವಿಸಿದೆ. ಫರೂಕಾಬಾದ್ನ ಮೂವರು ಯುವಕರು ಶನಿವಾರ ರಾತ್ರಿ ಬದೌನ್ನ ದತಗಂಜ್ನಿಂದ ಫರೀದ್ಪುರ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಮ್ಯಾಪ್ ಬಳಸಿದ್ದರು ಎನ್ನಲಾಗಿದೆ. ಮ್ಯಾಪ್ ತೋರಿಸಿದಂತೆ ಚಾಲಕ ಕಾರು ಚಲಾಯಿಸಿದ್ದಾನೆ. ಈ ವೇಳೆ ಖಾಲ್ಪುರದ ರಾಮಗಂಗಾ ನದಿಯ ನಿರ್ಮಾಣ ಹಂತದ ಸೇತುವೆಯಿಂದ ಕಾರು ಉರುಳಿ ಬಿದ್ದಿದೆ.
🚨Never trust Google maps blindly🚨
— MAT (@TheMatFun) November 24, 2024
A tragic accident has happened on the Bareilly and Badaun border of Uttar Pradesh. The people in the car were coming to Faridpur from Dataganj via Khalpur with the help of Google Map. They were not aware about the bridge. The car must have… pic.twitter.com/vb6ex8G0Zv
“ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಪ್ರವಾಹದ ಕಾರಣದಿಂದ ಸೇತುವೆಯ ಮುಂಭಾಗದ ನದಿಗೆ ಕುಸಿದಿತ್ತು. ಆದರೆ ಈ ಬದಲಾವಣೆಯನ್ನು ಜಿಪಿಎಸ್ನಲ್ಲಿ ನವೀಕರಿಸಿಲ್ಲ. ನಿರ್ಮಾಣ ಹಂತದಲ್ಲಿರುವ ಸೇತುವೆಯ ಮಾರ್ಗವನ್ನು ಮ್ಯಾಪ್ನಲ್ಲಿ ಸರಿಯಾಗಿರುವಂತೆ ಸ್ಪಷ್ಟವಾಗಿ ತೋರಿಸಲಾಗಿದೆ. ಇದನ್ನೇ ಅನುಸರಿಕೊಂಡು ಚಾಲಕ ಬಂದಿದ್ದಾನೆ. ಕಾರು ಸುಮಾರು 50 ಅಡಿ ಕೆಳಗೆ ಬಿದ್ದಿರುವುದರಿಂದ ಮೂವರೂ ಸಾವನ್ನಪ್ಪಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ʼʼಜಿಪಿಎಸ್ ಅಪ್ಲಿಕೇಶನ್ ಪ್ರಯಾಣಿಕರಿಗೆ ತಪ್ಪಾದ ಮಾರ್ಗವನ್ನು ಸೂಚಿಸಿದೆ. ಸೇತುವೆಯಲ್ಲಿ ಸುರಕ್ಷತಾ ಅಡೆತಡೆಗಳು ಅಥವಾ ಎಚ್ಚರಿಕೆಯೂ ಇಲ್ಲದಿರುವುದು ಕೂಡ ಅಪಘಾತಕ್ಕೆ ಕಾರಣವಾಗಿದೆʼʼ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತರನ್ನು ಅಮಿತ್ ಕುಮಾರ್ ಮತ್ತು ಆತನ ಸಹೋದರ ವಿವೇಕ್ ಕುಮಾರ್ ಹಾಗೂ ಸ್ನೇಹಿತ ಕೌಶಲ್ ಎಂದು ಗುರುತಿಸಲಾಗಿದೆ.
ಕಾರು ಅತಿ ವೇಗದಲ್ಲಿ ಸಾಗುತ್ತಿತ್ತು. ಅಲ್ಲದೆ ದಟ್ಟವಾದ ಮಂಜಿನ ಕಾರಣದಿಂದ ಚಾಲಕನಿಗೆ ದಾರಿ ಸರಿಯಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
Google maps ne bhej diya or mili mout!! #Bareilly pic.twitter.com/lNpTzpPNCb
— Anonymous (@Jog__West) November 24, 2024
ಹಿಂದೆಯೂ ನಡೆದಿತ್ತು
ಮ್ಯಾಪ್ ಕಾರಣದಿಂದ ಅಪಘಾತ ನಡೆದ ಘಟನೆ ಈ ಹಿಂದೆಯೂ ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಹೈದರಾಬಾದ್ನ ಪ್ರವಾಸಿಗರ ಗುಂಪೊಂದು ಕೇರಳದ ಕೊಟ್ಟಾಯಂನ ಕುರುಪ್ಪಂಥಾರ ಬಳಿ ಉಕ್ಕಿ ಹರಿಯುತ್ತಿದ್ದ ನದಿಗೆ ಕಾರನ್ನು ಇಳಿಸಿತ್ತು. ಗೂಗಪ್ ಮ್ಯಾಪ್ ಅನ್ನು ಅನುಸರಿಸಿಕೊಂಡು ಬಂದಿದ್ದೇ ಈ ಎಡವಟ್ಟಿಗೆ ಕಾರಣವಾಗಿತ್ತು. ಕೂಡಲೇ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ಪ್ರಯತ್ನದಿಂದಾಗಿ ಕಾರಿನಲ್ಲಿದ್ದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರ ಕಾರು ಸಂಪೂರ್ಣವಾಗಿ ಮುಳುಗಿತ್ತು.
ಇನ್ನು 2022ರ ಆಗಸ್ಟ್ನಲ್ಲಿ ಕೇರಳದ ಎರ್ನಾಕುಲಂನಿಂದ ಕುಂಬನಾಡ್ಗೆ ಹಿಂತಿರುಗುತ್ತಿದ್ದ ಕುಟುಂಬವೊಂದು ಕೊಟ್ಟಾಯಂ ಜಿಲ್ಲೆಯ ಪರಚಲ್ ಬಳಿ ದಾರಿ ತಪ್ಪಿ ಕಾಲುವೆಗೆ ಕಾರನ್ನು ಇಳಿಸಿತ್ತು. ಗೂಗಲ್ ಮ್ಯಾಪ್ ತಪ್ಪು ದಾರಿ ತೋರಿದ್ದೇ ಇದಕ್ಕೆ ಕಾರಣ ಎಂದು ಅವರು ಬಳಿಕ ತಿಳಿಸಿದ್ದರು. ಸ್ಥಳೀಯ ನಿವಾಸಿಗಳ ತ್ವರಿತ ರಕ್ಷಣಾ ಕಾರ್ಯಾಚರಣೆಯಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು.
ಈ ಸುದ್ದಿಯನ್ನೂ ಓದಿ: Google Maps: 2 ಶತಕೋಟಿ ಬಳಕೆದಾರರ ಮೂಲಕ ನಂ. 1 ನ್ಯಾವಿಗೇಷನ್ ಆ್ಯಪ್ ಪಟ್ಟಕ್ಕೇರಿದ ಗೂಗಲ್ ಮ್ಯಾಪ್