Sunday, 24th November 2024

Leopard captured: ಪಾವಗಡದಲ್ಲಿ ಕೊನೆಗೂ ಬೋನಿಗೆ ಬಿದ್ದ ಜನರ ನಿದ್ದೆಗೆಡಿಸಿದ ಚಿರತೆ

Leopard captured

ಪಾವಗಡ: ಪಟ್ಟಣದ ವೆಂಕಟಾಪುರ ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್ ಮುಂಭಾಗದ ಬೆಟ್ಟದ ತಪ್ಪಲಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ (Leopard captured).

ಚಿರತೆ ಹಾವಳಿಯಿಂದ ಬೇಸತ್ತಿದ್ದ ಜನರು ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೀಗ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ 3 ತಿಂಗಳಿಂದ ಚಿರತೆ ಆ ವ್ಯಾಪ್ತಿಯ ಸುಮಾರು 10ರಿಂದ 15 ನಾಯಿಗಳನ್ನು ತಿಂದು ಹಾಕಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನು ಇರಿಸಿದ್ದರು.

ಭಾನುವಾರ (ನ. 24) ಸುಮಾರು ರಾತ್ರಿ 8:30ರ ಸುಮಾರಿಗೆ ಬೋನಿಗೆ ಚಿರತೆ ಬಿದ್ದಿದೆ. ʼʼಹಲವು ದಿನಗಳಿಂದ ಚಿರತೆ ಕಾಟದಿಂದ ಆ ಭಾಗದ ಜನರ ಭಯಭೀತರಾಗಿದ್ದರು. ಕೊನೆಗೂ ಚಿರತೆ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಆ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೋನಿಗೆ ಬಿದ್ದ ಚಿರತೆಯನ್ನು ಬೇರೆ ಕಡೆಗೆ ಸಾಗಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೆರೆಸಿಕ್ಕ ಚಿರತೆ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಒಂದು ವಾರದಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಮಧ್ಯರಾತ್ರಿ ಚಿರತೆ ಬಿದ್ದಿತ್ತು. ಎಲೆಕ್ಟ್ರಾನಿಕ್ ಸಿಟಿ ಟೋಲ್‌ ಪ್ಲಾಜಾ ಸಮೀಪದ ಎನ್‌ಟಿಟಿಎಫ್‌ ಗ್ರೌಂಡ್‌ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ, 1 ವಾರದಿಂದ ಅಲ್ಲೇ ಸುತ್ತಮತ್ತ ಸುತ್ತಾಡುತ್ತಿದ್ದರಿಂದ ಜನರಲ್ಲಿ ಆತಂಕ ಮೂಡಿತ್ತು. ಹಲವು ಬಾರಿ ಬೋನ್ ಬಳಿ ಬರುತ್ತಿದ್ದ ಚಿರತೆ, ಬೋನಿಗೆ ಮಾತ್ರ ಬೀಳುತ್ತಿರಲಿಲ್ಲ. ಆದ್ದರಿಂದ ಕನಕಪುರದಿಂದ ವಿಶೇಷ ಬೋನು ತರಿಸಿ ಕಾರ್ಯಾಚರಣೆ ಮಾಡಲಾಗಿದ್ದು, ಬೋನಿನಲ್ಲಿ 2 ಕೋಳಿಗಳನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.

ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಹಲವು ಬಾರಿ ಚಿರತೆ ಸೆರೆಯಾಗಿತ್ತು. ಬೋನಿಗೆ ಬಿದ್ದಿರುವ ಚಿರತೆಗೆ ನಾಲ್ಕರಿಂದ ಐದು ವರ್ಷ ವಯಸ್ಸು ಆಗಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಚಿರತೆಯು ಬನ್ನೇರುಘಟ್ಟ ಕಾಡಿನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಬನ್ನೇರುಘಟ್ಟ ಕಾಡಿನಿಂದ ಗೊಟ್ಟಿಗೆರೆ ನೈಸ್ ರೋಡ್, ಬಳಿಕ ಎಲೆಕ್ಟ್ರಾನಿಕ್ ಸಿಟಿ ಸೇರಿದೆ ಎನ್ನಲಾಗಿದೆ. ಚಿರತೆ ಸೆರೆ ಹಿಡಿದ ಬಳಿಕ ಸಿಬ್ಬಂದಿ ಬನ್ನೇರುಘಟ್ಟ ಉದ್ಯಾನಕ್ಕೆ ತೆಗೆದುಕೊಂಡು ಹೋಗಿದ್ದರು.

ಈ ಸುದ್ದಿಯನ್ನೂ ಓದಿ: Leopard captured: ಎಲೆಕ್ಟ್ರಾನಿಕ್ ಸಿಟಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ