ಬೆಂಗಳೂರು : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೋಲಿಸ್ ಠಾಣೆಗಳೆಂದು (Police Station) ಘೋಷಿಸಲು ಹಾಗೂ ಈ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ (Police Job news) ಮಂಜೂರಾತಿ ನೀಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ, ನಿಗಧಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಗಳಲ್ಲಿ ಸಲ್ಲಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 02 ರಂತೆ ರಾಜ್ಯದಲ್ಲಿ ಒಟ್ಟು 33 ಡಿಸಿಆರ್ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಮತ್ತು ಸದರಿ 33 ವಿಶೇಷ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ ಡಿಸಿಆರ್ಇ ಘಟಕದಲ್ಲಿ ಹಾಲಿ ಇರುವ 340 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಈ ಕೆಳಕಂಡ 450 ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (6) ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಡಿಸಿಆರ್ಇ ಇವರು ಪ್ರಸ್ತಾವನೆ ಸಲ್ಲಿಸಿದ್ದರು.
ಈ ಪ್ರಸ್ತಾವನೆಯನ್ನು ದಿನಾಂಕ: 20-06-2024 ರಂದು ನಡೆದ ಸಚಿವ ಸಂಪುಟ ಸಭೆಯ ಮುಂದೆ ಸಲ್ಲಿಸಲಾಗಿದೆ. ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿದೆ. ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಠಾಣೆಗಳಿಗೆ ಬೇಕಾಗುವ ಮೂಲಸೌಕರ್ಯಗಳು, ಅಗತ್ಯ ಸಿಬ್ಬಂದಿ, ನೇಮಕಾತಿ ಇವುಗಳ ಅವಶ್ಯಕತೆ ಗಮನಿಸಿದ ಸಚಿವ ಸಂಪುಟವು ಇವುಗಳ ಕುರಿತು ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು ಪರಸ್ಪರ ಚರ್ಚಿಸಿದ ನಂತರ ಇವುಗಳನ್ನು ಒಳಗೊಂಡು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸುವಂತೆ ಸಚಿವ ಸಂಪುಟವು ಇಲಾಖೆಗೆ ಸೂಚಿಸಿತು.
ಸಚಿವ ಸಂಪುಟದ ನಿರ್ದೇಶನದಂತೆ, ಗೃಹ ಸಚಿವರು ಮತ್ತು ಮಾನ್ಯ ಸಮಾಜ ಕಲ್ಯಾಣ ಸಚಿವರು ದಿನಾಂಕ: 04-07-2024 ರಂದು, ಒಳಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದೌರ್ಜನ್ಯ ತಡ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ದೌರ್ಜನ್ಯ ಪ್ರಕರಣಗಳು ಆಗದಂತೆ ಕ್ರಮವಹಿಸಲು ಡಿಸಿಆರ್ಇ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸುವುದು ಮತ್ತು ಶಿಕ್ಷೆಯ ಪ್ರಮಾಣವನ್ನು ಇತರೆ ರಾಜ್ಯಗಳಂತೆ ಹೆಚ್ಚಿಸುವುದು ಅಗತ್ಯವಿದೆ ಎಂದು ಪರಿಗಣಿಸಿ, ಡಿಸಿಆರ್ಇ ಪ್ರಸ್ತಾವನೆಯನ್ನು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.