Friday, 22nd November 2024

ಓಲೈಕೆ ರಾಜಕಾರಣಕ್ಕಾಗಿ ಜಾತಿಗೊಂದು ಪ್ರಾಧಿಕಾರ; ಭಂಡ ಸರಕಾರಕ್ಕೆ ಧಿಕ್ಕಾರ

ಸಂದರ್ಶನ: ವೆಂಕಟೇಶ್ ಆರ್‌.ದಾಸ್‌

ಸರಕಾರದಲ್ಲಿ ಸಂಪುಟ ವಿಸ್ತರಣೆಯ ಕಾವು ಏರುತ್ತಿದೆ. ಪಕ್ಷದೊಳಗೆ ಬೇಗುದಿ ಶುರುವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ತಯಾರಿ ನಡೆಸಿದೆ. ಈ ಕುರಿತು ಫೈರ್‌ಬ್ರ್ಯಾಂಡ್ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ವಿಶ್ವವಾಣಿ ಜತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರೊಂದಿಗೆ ನಮ್ಮ ಮುಖ್ಯ ವರದಿಗಾರ ವೆಂಕಟೇಶ ಆರ್.ದಾಸ್ ಅವರು ನಡೆಸಿದ ಸಂದರ್ಶನ ಇಲ್ಲಿದೆ.

ಕರೋನಾ ಕಾಲದಲ್ಲಿ ಆಡಳಿತ ನಡೆಸಲು ಬಿಜೆಪಿ ವಿಫಲವಾಗಿದೆ ಎನಿಸುತ್ತದೆಯೇ?
ಬಿಜೆಪಿಯದ್ದು ಭಂಡ ಸರಕಾರ. ಅವರು ಕರೋನಾದಂತಹ ಸಂಕಷ್ಟದ ಸ್ಥಿತಿಯನ್ನು ಭ್ರಷ್ಟಾಚಾರ ಮಾಡಲು ಬಳಸಿಕೊಳ್ಳು ತ್ತಿದ್ದಾರೆ. ಇದೇ ವೇಳೆಯಲ್ಲಿ ಅನೇಕ ಕಾನೂನುಗಳನ್ನು ಸಂವಿಧಾನಬದ್ಧ ಚರ್ಚೆಯಿಲ್ಲದೆ ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯ ಸರಕಾರದಲ್ಲಿ ವೆಂಟಿಲೇಟರ್ ಖರೀದಿ ಹಗರಣ, ಕೋವಿಡ್ ಔಷಧಿ ಖರೀದಿಯಲ್ಲಿ ಹಗರಣ, ಹಾಸಿಗೆ ಖರೀದಿಯಲ್ಲಿ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ನಡೆದಿವೆ. ಇದನ್ನು ದಾಖಲೆ ಸಮೇತ ನಾವು ವಿರೋಧಿಸಿದ್ದೇವೆ. ಆದರೆ, ಈವರೆಗೆ ಯಾವ ಪ್ರಕರಣ ವನ್ನೂ ತನಿಖೆಗೆ ನೀಡದೆ ಉಡಾಫೆ ತೋರುತ್ತಿದೆ ಸರಕಾರ. ಇಂತಹ ಭಂಡ ಸರಕಾರವನ್ನು ನಾನು ಹಿಂದೆಂದೂ ಕಂಡಿರಲಿಲ್ಲ.

ಕೃಷಿ ಮಸೂದೆ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದ್ದರೂ, ನಿಮ್ಮ ಪಕ್ಷದಿಂದ ವಿರೋಧವಿಲ್ಲ ಏಕೆ?
ನಮ್ಮ ಪಕ್ಷ ಕೃಷಿ ಮಸೂದೆಗಳನ್ನು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರಬಲವಾಗಿ ವಿರೋಧಿಸಿದೆ. ಹೀಗಾಗಿ, ರೈತರು ಈಗ ಬೀದಿ ಗಿಳಿದಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ, ರೈತರು ಮಾಡುತ್ತಿರುವ ಪ್ರತಿಭಟನೆಗೆ ರಾಜಕೀಯ ಬಣ್ಣ ಸಿಗುವುದು ಬೇಡ ಎಂಬ ಕಾರಣಕ್ಕೆ ಪಕ್ಷ ನೇರವಾಗಿ ಪ್ರತಿಭಟನೆಗೆ ಇಳಿದಿಲ್ಲ. ಕಾಂಗ್ರೆಸ್ ಪ್ರೇರಿತ ಎಂಬ ಹಣೆಪಟ್ಟಿ ಬರುವುದು ಬೇಡ ಎಂಬ ಕಾರಣಕ್ಕೆ ರೈತರ ಹೋರಾಟಕ್ಕೆ ನಮ್ಮ ಪಕ್ಷ ಪರೋಕ್ಷ ಬೆಂಬಲವನ್ನಷ್ಟೇ ನೀಡಿದೆ. ಮುಂದಿನ ದಿನಗಳಲ್ಲಿ ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ. ಸದನದಲ್ಲಿ ಈ ಬಗ್ಗೆ ಪ್ರಬಲ ಹೋರಾಟ ನಡೆಸುತ್ತೇವೆ. ಕಾಯಿದೆ ವಾಪಸ್ ಪಡೆಯು ವವರೆಗೂ ಹೋರಾಟ ಮಾಡುತ್ತೇವೆ.

ಗೋಹತ್ಯೆ ಮತ್ತು ಲವ್ ಜಿಹಾದ್ ಕಾನೂನು ಜಾರಿಗೆ ತರಲು ಹೊರಟಿರುವ ಬಗ್ಗೆೆ ಏನು ಹೇಳುತ್ತೀರಿ?
ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಹೊರಟಿದ್ದಾರೆ. ಹಿಂದೆಯೂ ಇಂತಹದ್ದೆಲ್ಲ ಬದಲಾವಣೆ ಮಾಡಿರು. ಆದರೆ, ನಮ್ಮ ಸರಕಾರ ಬಂದಾಗ ಅದನ್ನು ರದ್ದು ಮಾಡಿದ್ದೆವು. ಇದರ ವಿರುದ್ಧ ಸದನದಲ್ಲಿ ವಿರೋಧ ಮಾಡುತ್ತೇವೆ. ಲವ್
ಜಿಹಾದ್ ವಿರುದ್ಧ ತರಲು ಹೊರಟಿರುವ ಕಾನೂನು ಸಂವಿಧಾನ ವಿರೋಧಿ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿವೆ. ಮದುವೆ ಎಂಬುದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಆಯ್ಕೆ.

ಇದರಲ್ಲಿ ಕಾನೂನು ರೂಪಿಸಿ ಕಟ್ಟುಪಾಡು ತರುವ ಪ್ರಯತ್ನ ಸರಿಯಲ್ಲ ಎಂದು ನ್ಯಾಯಾಲಯಗಳು ಹೇಳಿವೆ. ಹೀಗಾಗಿ, ಈ ಕಾನೂನಿಗೆ ಮಾನ್ಯತೆ ಸಿಗುವುದಿಲ್ಲ. ನಾವು ಕೂಡ ಇದರ ವಿರುದ್ಧ ಸದನದಲ್ಲಿ ಹೋರಾಟ ನಡೆಸುತ್ತೇವೆ.

ಜಾತಿಗೊಂದು ಪ್ರಾಧಿಕಾರ ರಚನೆಗೆ ಮುಂದಾಗಿದೆಯಲ್ಲ?
ಇದು ಓಲೈಕೆ ರಾಜಕಾರಣ. ಉಪಚುನಾವಣೆ ಹಿನ್ನೆಲೆಯಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿದ್ದಾರೆ. ಮಸ್ಕಿ ಮತ್ತು  ಬಸವ ಕಲ್ಯಾಣದಲ್ಲಿ ಚುನಾವಣೆ ನಡೆಯುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ 30 ಸಾವಿರ ಮರಾಠ ಮತದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಸುಳ್ಳು ಆಶ್ವಾಸನೆ ಕೊಟ್ಟಿದ್ದಾರೆ. ಆದರೆ, ಇದು ಕಾರ್ಯರೂಪಕ್ಕೆ ಬರುವುದಿಲ್ಲ. ಶಿರಾ ಚುನಾವಣೆ ವೇಳೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ನಂಬಿಸಿ ಮತ ಕೇಳಿದರು. ಹೀಗೇ ಆಯಾ ಸಂದರ್ಭಕ್ಕೆ ತಕ್ಕಂತೆ ಓಲೈಕೆ ರಾಜಕಾರಣ ಮಾಡುತ್ತಾ ಕಾಲ ಕಳೆಯುವುದು ಬಿಜೆಪಿ ಬುದ್ಧಿ. ಇದು ಜನರ ಮೇಲಿನ ಪ್ರೀತಿಯಿಂದ ತೆಗೆದುಕೊಂಡಿರುವ ನಿರ್ಧಾರವಲ್ಲ. ಓಲೈಕೆ ರಾಜಕಾರಣ.

ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ದುರ್ಬಲವಾಗಿದೆ ಎಂಬ ಮಾತಿದೆಯಲ್ಲ?
ಕಪಿಲ್ ಸಿಬಲ್ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ, ಪಕ್ಷದ ಎಲ್ಲ ವೈಫಲ್ಯಗಳಿಗೂ ನಾಯಕತ್ವವೇ
ಕಾರಣವಲ್ಲ. ಯಾರೂ ಬಯಸಿ ಅಧ್ಯಕ್ಷರಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ ಅನಿವಾರ್ಯವಿದೆ. ಅವರನ್ನು ಹೊರತು ಪಡಿಸಿ ನಾಯಕತ್ವ ವಹಿಸಿಕೊಳ್ಳಬಲ್ಲವರು ಯಾರೂ ಇಲ್ಲ. ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದಾಗ ಎಐಸಿಸಿ ಕಮಿಟಿ ಯಲ್ಲಿ ನಾನೂ ಇದ್ದೆ. ಅಲ್ಲಿ ಎಲ್ಲರೂ ಸೋನಿಯಾ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಬೆಂಬಲ ನೀಡಿದರೇ ಹೊರತು ನಾವ್ಯಾರೂ ಅಧ್ಯಕ್ಷರಾಗುತ್ತೇವೆ ಎಂದಾಗಲೀ, ಮತ್ಯಾರ ಹೆಸರನ್ನಾದರೂ ಸೂಚಿಸುವುದಾಗಲೀ ಮಾಡಲಿಲ್ಲ. ಅಲ್ಲಿ ಶೂನ್ಯವಿದೆ.

ಸತತ ಚುನಾವಣೆ ಸೋಲಿಗೆ ನಾಯಕರ ಫೈವ್ ಸ್ಟಾರ್ ಸಂಸ್ಕೃತಿ ಕಾರಣವೇ?
ಫೈವ್ ಸ್ಟಾರ್ ಸಂಸ್ಕೃತಿ ಯಾವ ಪಕ್ಷದಲ್ಲಿ ಇಲ್ಲ? ಎಲ್ಲ ಪಕ್ಷದ ನಾಯಕರು ಫೈವ್ ಸ್ಟಾರ್ ಹೋಟೆಲ್ ನಲ್ಲೇ ಉಳಿದುಕೊಳ್ಳು ವುದು. ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದರೆ ಗುಡಿಸಲಿನಲ್ಲಿ ಉಳಿಯುತ್ತಾರೆಯೇ? ಎಲ್ಲರೂ ಫೈವ್‌ಸ್ಟಾರ್ ಹೋಟೆಲ್‌ನಲ್ಲೇ ಉಳಿಯುವುದು ವಾಡಿಕೆ. ಕುಮಾರಸ್ವಾಮಿ ವರ್ಷದಲ್ಲಿ ಒಂದೆರಡು ದಿನ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಗಿಮಿಕ್
ಮಾಡಿದರು ಅಷ್ಟೆ. ಆದರೆ, ಅವರು ಗ್ರಾಮದಲ್ಲಿ ಎಲ್ಲಿ ವಾಸ ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಕರ್ನಾಟಕ ರಾಜಕಾರಣ ಮಾತ್ರವಲ್ಲ, ದೇಶದ ರಾಜಕಾರಣದಲ್ಲೂ ಗುಡಿಸಲಿನಲ್ಲಿ ಉಳಿದು ರಾಜಕಾರಣ ಮಾಡುವಂಥ ಗಾಂಧಿ ಯಾರೂ ಇಲ್ಲ.

ಬಿಜೆಪಿ ಅಹಿಂದ ವರ್ಗದತ್ತ ದೃಷ್ಟಿ ಹರಿಸುತ್ತಿದೆ ಎನಿಸುವುದಿಲ್ಲವೇ?
ಅವರಿಗೆ ದಲಿತರ, ಅಲ್ಪಸಂಖ್ಯಾತರ ಮತ್ತು ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಗೆ ನನ್ನನ್ನು ಕಂಡರೆ ಭಯ. ಹೀಗಾಗಿ, ಅಹಿಂದ ಎಂದು ಹೊರಟಿದೆ. ಕುರುಬರಿಗೆ ಎಸ್‌ಟಿ ಮೀಸಲು, ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಶಿಫಾರಸು ಗಳೆಲ್ಲವೂ ಕೇವಲ ನಾಟಕ. ಜಾತಿ ಆಧಾರದಲ್ಲಿ ಸಮಾಜವನ್ನು ವಿಭಜನೆ ಮಾಡುತ್ತಿದ್ದಾರೆ. ಇಂತಹ ಎಲ್ಲ ಪ್ರಯತ್ನಗಳ
ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ. ಅವರಿಗೆ ಸಮಾಜದಲ್ಲಿ ಜನರು ಸೌಹಾರ್ದತೆಯಿಂದ ಬದುಕುವುದು ಇಷ್ಟವಿಲ್ಲ. ಹೀಗಾಗಿ,
ಸಮುದಾಯಗಳನ್ನು ವಿಭಜಿಸಿ ಆಳ್ವಿಕೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಜನರು ಇದಕ್ಕೆಲ್ಲ ಹೆಚ್ಚಿನ ಕಾಲ ಅನುವು ಮಾಡಿಕೊಡುವುದಿಲ್ಲ. ಮುಂದೆ ಪಾಠ ಕಲಿಸುತ್ತಾರೆ.

ಕಾಂಗ್ರೆಸ್‌ನ ಸತತ ಸೋಲಿನ ಬಗ್ಗೆ ಪರಾಮರ್ಶೆ ನಡೆದಿದೆಯೇ?
ರಾಜಕಾರಣ ಎಂದ ಮೇಲೆ ಸೋಲು, ಗೆಲುವು ಸಾಮಾನ್ಯ. ನಾವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಜೆಪಿಯ
ದುರಾಡಳಿವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾತ್ರ ಮಾಡುತ್ತೇವೆ. ಬಿಜೆಪಿ 1980ರಲ್ಲಿ ಎರಡು ಸ್ಥಾನ ಮಾತ್ರ ಗೆದ್ದಿತ್ತು. ಈಗ ಎಲ್ಲ ಕಡೆ ಅವರು ಗೆಲ್ಲುತ್ತಿದ್ದಾರೆ. ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಗೆಲುವು ಸಾಧಿಸುತ್ತಿದ್ದಾರೆ. ಆದರೆ,
ಜನರಿಗೆ ಅವರ ಮಾರ್ಗ ಅರ್ಥವಾಗುತ್ತಿದೆ. ಮೋದಿ ಅವರು ಈವರೆಗೆ ಹೇಳಿರುವ ಸುಳ್ಳುಗಳೆಷ್ಟು ಎಂಬುದು ಗೊತ್ತಾಗುತ್ತಿದೆ.
ಹೀಗಾಗಿ, ಬಿಜೆಪಿ ಎಲ್ಲ ಕಾಲಕ್ಕೂ ಗೆಲುವನ್ನೇ ಕಾಣುವುದಿಲ್ಲ. ಆದ್ದರಿಂದ ನಾವು ಅವರ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂದಿನ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ.

ನಿಗಮಗಳ ನೇಮಕವಷ್ಟೇ ನಡೆಯುತ್ತಿದೆ, ಆದರೆ, ಅನುದಾನವೇ ಇಲ್ಲ ಎಂಬ ಮಾತಿದೆ?

ನಿಗಮಗಳ ಘೋಷಣೆ ಮಾತ್ರ ಆಗುತ್ತಿದೆ. ಆದರೆ, ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರದಿಂದ ಬರುವ ಪರಿಹಾರ, ಜಿಎಸ್‌ಟಿ
ಪಡೆಯಲು ರಾಜ್ಯ ಸರಕಾರ ವಿಫಲವಾಗಿದೆ. ಹೀಗಾಗಿ, ಸಾಲ ಮಾಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ 35 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಕೇವಲ ಒಂದು ವರ್ಷದಲ್ಲಿ 87 ಸಾವಿರ ಕೋಟಿ ಸಾಲ ಮಾಡಿದಂತಾಗುತ್ತದೆ. ಬದ್ಧವೆಚ್ಚ ನಮ್ಮ ಸರಕಾರ ಇದ್ದಾಗ ಶೇ.74 ಇತ್ತು. ಆದರೆ, ಬಿಜೆಪಿ ಸರಕಾರದಲ್ಲಿ ಶೇ.90ಕ್ಕಿಂತ ಹೆಚ್ಚಾಗಿದೆ. ಸಾಲ ತೆಗೆದುಕೊಂಡು ಖರ್ಚು ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಐದು ವರ್ಷಗಳಲ್ಲಿ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿ ಆಮೇಲೆ ಜಾಗ ಖಾಲಿ ಮಾಡುತ್ತಾರೆ.

ಸಿಎಂ ಬಿಎಸ್‌ವೈ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆಯಲ್ಲಾ?
ನನಗೆ ಇರುವ ಮಾಹಿತಿಗಳ ಪ್ರಕಾರ ಬಿಎಸ್‌ವೈ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಒಲವಿಲ್ಲ. ಹೀಗಾಗಿ, ಅವರನ್ನು ಯಾವುದೇ ವಿಚಾರಕ್ಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿಯೇ, ಅವರು ಪ್ರಾಧಿಕಾರ ಸ್ಥಾಪನೆ, ನಿಗಮ ಮಂಡಳಿಗಳ ನೇಮಕದಂತಹ ಕೆಲಸಗಳನ್ನು ತುರ್ತಾಗಿ ಮಾಡುತ್ತಿದ್ದಾರೆ. ರಾಜ್ಯದ ನಾಯಕರಲ್ಲೇ ಭಿನ್ನಾಭಿಪ್ರಾಯವಿದೆ. ಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದೆ. ಪಕ್ಷಾಂತರ ಮಾಡಿದವರು ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಆದರೆ, ಪಕ್ಷದೊಳಗಿ ನವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಮುಂದೆ ಇದು ಮತ್ತೊಂದು ಸುತ್ತಿನ ಕದನಕ್ಕೆ ಮುನ್ನುಡಿಯಾಗಲಿದೆ.

ಪ್ರಮುಖ ವಿಪಕ್ಷವಾಗಿ ನಿಮ್ಮ ಮುಂದಿನ ನಡೆಯೇನು?
ಬಿಜೆಪಿ ಸರಕಾರದ ದುರಾಡಳಿತವನ್ನು ನಾವು ವಿರೋಧಿಸುತ್ತಲೇ ಬಂದಿದ್ದೇವೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ಜಿಡಿಪಿ ಪಾತಾಳಕ್ಕೆ ಇಳಿದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ನಿಯಂತ್ರಣ ಸಾಧ್ಯವಾಗಿಲ್ಲ.
ನೋಟ್ ಬ್ಯಾನ್‌ನಂತಹ ನಿರ್ಧಾರದಿಂದ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಪುಲ್ವಾಮಾ ದಾಳಿ,
ಚೀನಾ ಗಡಿ ತಂಟೆ, ಲವ್ ಜಿಹಾದ್, ರಾಮಮಂದಿರ, ಆರ್ಟಿಕಲ್-370 ಯಂತಹ ಭಾವನಾತ್ಮಕ ವಿಷಯಗಳನ್ನೇ ಇಟ್ಟುಕೊಂಡು
ಜನರನ್ನು ಮರುಳು ಮಾಡಲಾಗುತ್ತಿದೆ. ಕರೋನಾ ಬಂದಾಗ ಅದಕ್ಕೆ ಪರಿಹಾರ ಸೂಚಿಸುವ ಬದಲು ಜಾಗಟೆ ಬಡಿಯಿರಿ, ಚಪ್ಪಾಳೆ ತಟ್ಟಿ ಎಂದು ಹೇಳಿದರೇ ಹೊರತು ನಿವಾರಣೆಗೆ ಕ್ರಮ ತೆಗೆದುಕೊಳ್ಳಲಿಲ್ಲ. ಕಾರ್ಮಿಕರ ಗೋಳು ಕೇಳಲಿಲ್ಲ. ಇದೆಲ್ಲ ಜನರಿಗೆ ಮನವರಿಕೆ ಮಾಡುತ್ತೇವೆ.