Thursday, 31st October 2024

ಪರಿಸರ ಸ್ನೇಹಿ ಬೆಂಗಳೂರಿಗೆ ಕ್ರಮ

ಸಂದರ್ಶನ : ರಂಜಿತ್ ಎಚ್.ಅಶ್ವತ್ಥ

ನನ್ನ ಮೇಲೆ ನಂಬಿಕೆಯಿಟ್ಟು ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿರುವ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರಿಗೆ ಧನ್ಯವಾದ. ಮುಂದಿನ ದಿನದಲ್ಲಿ ಬಿಎಂಟಿಸಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಬಿಎಂಟಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಎಂ.ಆರ್.ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವವಾಣಿಯೊಂದಿಗೆ ಮಾತನಾಡಿ, ಎಲೆಕ್ಟ್ರಿಕ್ ಬಸ್‌ಗಳ ಖರೀದಿ, ಪರಿಸರ ಸ್ನೇಹಿ ಯೋಜನೆ, ಭವಿಷ್ಯ ಯೋಜನೆ ಸೇರಿದಂತೆ ವಿವಿಧ ವಿಚಾರಗಳನ್ನು ಹಂಚಿಕೊಂಡ ಸಂದರ್ಶ ನದ ಪೂರ್ಣಪಾಠ ಇಲ್ಲಿದೆ.

ಮುಂದಿನ ಯೋಜನೆಗಳೇನು?
ಬುಧವಾರಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಮೊದಲ ದಿನವೇ ಬೋರ್ಡ್ ಮೀಟಿಂಗ್‌ನಲ್ಲಿ ಭಾಗವಹಿಸಿ, ಯಾವ ರೀತಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎನ್ನುವ ಬಗ್ಗೆೆ ತಿಳಿದುಕೊಂಡಿದ್ದೇನೆ. ರಾಜಧಾನಿ ಬೆಂಗಳೂರಿಗರ ಪ್ರಮುಖ ಸಂಚಾರ ಸಾಧನವಾಗಿರುವ ಬಿಎಂಟಿಸಿಯನ್ನು ಮತ್ತಷ್ಟು ಜನಪರ ಸ್ನೇಹಿ ಸಾರಿಗೆ ಸಂಸ್ಥೆಯಾಗಿ ಮಾರ್ಪಾಡು ಮಾಡಲು ಯೋಜನೆಗಳನ್ನು ರೂಪಿಸಲು ಶ್ರಮಿಸುತ್ತೇನೆ. ಮುಂದಿನ ಕೆಲದಿನಗಳ ಕಾಲ ಬಿಎಂಟಿಸಿ ಸಂಸ್ಥೆ ಹಾಗೂ ಸಾರಿಗೆ ಇಲಾಖೆ ಬಗ್ಗೆ ಅಧ್ಯಯನ ನಡೆಸಿ ಬಳಿಕ ಬಿಎಂಟಿಸಿಯನ್ನು ಯಾವ ರೀತಿ ಅಭಿವೃದ್ಧಿ ಪಥದತ್ತ ಹೋಗುವಂತೆ ಮಾಡಬಹುದು ಎನ್ನುವ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು.

ಪರಿಸರ ಸ್ನೇಹಿ ಬಿಎಂಟಿಸಿ ಯಾವಾಗ ಸಾಕಾರಗೊಳ್ಳಲಿದೆ?
ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ. ವಾಲಿನ್ಯ ನಿಯಂತ್ರಣಕ್ಕೆ ನಮ್ಮ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮವಹಿಸುತ್ತೇನೆ. ಇದರೊಂದಿಗೆ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಪ್ರಕ್ರಿಯೆಗೆ ಇನ್ನಷ್ಟು ವೇಗ ಸಿಗುವ ರೀತಿ ಕ್ರಮವಹಿಸುತ್ತೇವೆ. ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ರಸ್ತೆಗೆ ಇಳಿಯುವುದರಿಂದ, ವಾಯು ಮಾಲಿನ್ಯಕ್ಕೆ ಬ್ರೇಕ್ ಬೀಳಲಿದೆ. ಈ ಮಧ್ಯೆ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸಲು ಇರುವ ಕೆಲವು ಸವಾಲುಗಳನ್ನು ನಿಭಾಯಿಸಲು ಅಧಿಕಾರಿಗಳೊಂದಿಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.

ಬಿಎಂಟಿಸಿಯನ್ನು ಲಾಭಕ್ಕೆೆ ತರಲು ಯಾವ ಯೋಜನೆ ರೂಪಿಸುವಿರಿ?
ಸಾರ್ವಜನಿಕರ ಸೇವೆಗಾಗಿರುವ ಬಿಎಂಟಿಸಿ ಲಾಭಕ್ಕಾಗಿ ಇರುವ ಉದ್ಯಮವಲ್ಲ. ಜನಪರ ಸೇವೆ ಮಾಡುವಾಗ ಲಾಭಕ್ಕಾಗಿಯೇ ಉದ್ಯಮ ಮಾಡುವುದು ಸೂಕ್ತವಲ್ಲ. ಆದರೆ ನಷ್ಟದಲ್ಲಿಯೇ ನಿಗಮ ತೆವಳುವುದಕ್ಕೂ ಬಿಡಬಾರದು. ಆದ್ದರಿಂದ ಸಾರ್ವಜನಿಕರು ಹೆಚ್ಚೆಚ್ಚು ಬಿಎಂಟಿಸಿಯನ್ನು ಬಳಸುವಂತೆ ಮಾಡಬೇಕಿದೆ. ರಾಜಧಾನಿಯಲ್ಲಿ ಕರೋನಾ ನಿಯಂತ್ರಣಕ್ಕೆ ಬರುತ್ತಿರುವುದರಿಂದ, ಎಂಎನ್‌ಸಿ ಕಂಪನಿಗಳಿಗೆ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಈ ಹಿಂದೆ ನೀಡಿದ ರೀತಿಯಲ್ಲಿ ಮುಂದುವರಿಸಲು ನಿರ್ಧರಿಸ ಲಾಗಿದೆ. ಈ ವಿಚಾರವಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಎಂಟಿಸಿ ನಿಯೋಗ ಎಂಎನ್‌ಸಿ ಕಂಪನಿ
ಮುಖ್ಯಸ್ಥರನ್ನು ಭೇಟಿಯಾಗಿ ಮನವೊಲಿಸುವುದಕ್ಕೆ ನಿರ್ಧರಿಸಿದ್ದೇವೆ.

ಬಿಎಂಟಿಸಿ ಮುಂದಿರುವ ಸವಾಲುಗಳೇನು?
ಇಡೀ ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ಬಳಿಕ ಎಲ್ಲ ಕ್ಷೇತ್ರಗಳೂ ನಷ್ಟಕ್ಕೆ ಸಿಲುಕಿವೆ. ಕರೋನಾ ನಿಯಂತ್ರಣಕ್ಕೆ ಲಾಕ್‌ಡೌನ್
ಮಾಡಿದ್ದರಿಂದ ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟದಲ್ಲಿರುವ ಬಿಎಂಟಿಸಿಯನ್ನು ಲಾಭದತ್ತ
ತರಲು ಯೋಜನೆ ರೂಪಿಸಬೇಕಿದೆ. ಹೆಚ್ಚೆಚ್ಚು ಜನ ಬಿಎಂಟಿಸಿ ಬಳಸುವ ರೀತಿಯಲ್ಲಿ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ರೂಪಿಸುತ್ತೇವೆ. ಬೆಂಗಳೂರಿನಲ್ಲಿರುವ ಹಲವು ಖಾಸಗಿ ಸಂಸ್ಥೆಗಳು, ಗಾರ್ಮೆಟ್ಸ್‌ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ಪಿಕ್‌ಅಪ್ ಡ್ರಾಪ್ ಮಾಡಲು ಬಿಎಂಟಿಸಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಧ ರಿಸಿದ್ದು, ಇದು ಜಾರಿಗೆ ಬರುವಂತೆ ನೋಡಿಕೊಳ್ಳಬೇಕಿದೆ.

ಉಪಾಧ್ಯಕ್ಷ ಸ್ಥಾನವನ್ನು ನಿರೀಕ್ಷಿಸಿದ್ದಿರೇನು?

ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ. ಬಿಎಂಟಿಸಿ ಉಪಾಧ್ಯಕ್ಷ ಹುದ್ದೆಯನ್ನು ನಾನು
ನಿರೀಕ್ಷೆ ಮಾಡಿರಲಿಲ್ಲ. ಆದರೆ ಪಕ್ಷದ ವರಿಷ್ಠರು ನನ್ನ ಕೆಲಸವನ್ನು ಗುರುತಿಸಿ ಈ ಹುದ್ದೆಯನ್ನು ನೀಡಿರುವುದಕ್ಕೆ ಸಂತಸವಾಗಿದೆ. ಈ ಜವಾಬ್ದಾರಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟು, ಕೊಟ್ಟಿರುವ ಜವಾಬ್ದಾರಿಯನ್ನು
ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಡಿ ಯೂರಪ್ಪ ಹಾಗೂ ಉಪಮುಖ್ಯ ಮಂತ್ರಿ ಲಕ್ಷಣ ಸವದಿ ಅವರ ಮಾರ್ಗದರ್ಶನ ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರೊಂದಿಗೆ ಬಿಎಂಟಿಸಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ