Wednesday, 4th December 2024

Bellary Hospital: ಬಾಣಂತಿಯರ ಸಾವು ಪ್ರಕರಣ; ಡ್ರಗ್ ಕಂಟ್ರೋಲರ್ ಸಸ್ಪೆಂಡ್, ಔಷಧ ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ಸಿಎಂ ಆದೇಶ

Bellary Hospital

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ (Bellary Hospital) ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಆದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ಕುರಿತಾಗಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ, ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಸಿಎಂ ಮಾತನಾಡಿದ್ದಾರೆ. ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಡ್ರಗ್ ಪೂರೈಸಿದ ಕಂಪನಿಯಿಂದಲೂ ಪರಿಹಾರವನ್ನು ವಸೂಲು ಮಾಡಿ, ಮೃತರ ಕುಟುಂಬಕ್ಕೆ ನೀಡಲು ಸೂಚನೆ ನೀಡಲಾಗಿದೆ.

ಬಾಣಂತಿಯರ ಸಾವಿನ ಪ್ರಕರಣಗಳ ತನಿಖೆಗೆ ಸಮಿತಿ
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಈ ರೀತಿಯ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಬಾಣಂತಿಯರ ಸಾವಿನ ಕುರಿತು ತಜ್ಞರ ಸಮಿತಿ ರಚಿಸಿ ಘಟನಾವಳಿಗಳ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಬಳಕೆಗೆ ತಡೆ
ಬಾಣಂತಿಯರಿಗೆ ನೀಡಲಾಗಿರುವ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದ ಎಲ್ಲಾ ಬ್ಯಾಚ್‌ಗಳ ಬಳಕೆಯನ್ನು ಹಿಂಪಡೆಯಲಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಸಲಾದ ದ್ರಾವಣ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಮಿಳುನಾಡು ಮಾದರಿಯಲ್ಲಿ ಔಷಧಗಳ ಖರೀದಿ ಪ್ರಕ್ರಿಯೆ ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು ಪುನಾರಚನೆ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.

ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್‌ ಕಂಟ್ರೋಲರ್‌ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.

ಔಷಧ ನಿಯಂತ್ರಣ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಲವು ರೀತಿಯ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೆಡಿಸಿನ್ ಮಾಫಿಯಾ ನಿಯಂತ್ರಣಕ್ಕೆ ಖಡಕ್‌ ಸೂಚನೆ
ಉಲ್ಲೇಖಿತ ಡ್ರಗ್‌ನಿಂದ ರಾಜ್ಯದ ಇತರೆಡೆಗಳಲ್ಲಿ ಸಮಸ್ಯೆ ಆಗಿದೆಯೇ ಎನ್ನುವ ಬಗ್ಗೆ ತಕ್ಷಣ ಸಮಗ್ರ ವರದಿ ತರಿಸಿಕೊಳ್ಳಲು ಖಡಕ್ ಸೂಚನೆ ನೀಡಿರುವ ಸಿಎಂ, ಅಭಿವೃದ್ಧಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಸಮಿತಿ ರಚಿಸಿ ಒಂದು ವಾರದಲ್ಲಿ ವರದಿ ತರಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಮೆಡಿಸಿನ್ ಮಾಫಿಯಾ ನಿಯಂತ್ರಣಕ್ಕೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ಹಲವರಿಂದ ವ್ಯಕ್ತವಾದವು. ಮೊದಲಿಗೆ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುವುದು ಹಾಗೂ ತಮಿಳುನಾಡು ಮಾದರಿಯಲ್ಲಿ ಡ್ರಗ್ ನಿಯಂತ್ರಣಕ್ಕೆ ಹೊಸ ರೂಪು ರೇಷೆ, ನಿಯಮಾವಳಿ ರಚಿಸುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಹಲವು ರೀತಿಯ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದರು.

ಈ ಸುದ್ದಿಯನ್ನೂ ಓದಿ | Naxal Activity: ನಕ್ಸಲರು ಶರಣಾದ್ರೆ ಜೀವನ ನಡೆಸಲು ಪ್ಯಾಕೇಜ್‌: ಗೃಹ ಸಚಿವ ಪರಮೇಶ್ವರ್‌

ಏನಿದು ಪ್ರಕರಣ?
ನವೆಂಬರ್‌ 11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿನ ಪ್ರಕರಣ ವರದಿಯಾಗಿದೆ. ಹಿಮೋಡಯಾಲಿಸಿಸ್‌ ಮತ್ತು ಬಹು ಅಂಗಗಳ ವೈಫಲ್ಯ ಹಾಗೂ ತೀವ್ರತರ ಮೂತ್ರಪಿಂಡದ ಗಾಯದಂತಹ ತೊಂದರೆಗಳ 7 ಪ್ರಕರಣಗಳಲ್ಲಿ , 4 ಬಾಣಂತಿಯರು ಸಾವಿಗೀಡಾಗಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.