Saturday, 23rd November 2024

ಕರಡಿಗೆ ಬೇಕು ಪಾಯಸ

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಇಂದು ಮಕ್ಕಳಿಗೆ ಖುಷಿಯೋ ಖುಷಿ. ಊರಾಚೆ ಇರುವ ಕಾಡಿನಲ್ಲಿರುವ ಬೆಟ್ಟದ ಮೇಲೆ ರಂಗನಾಥಸ್ವಾಮಿಯ ದೇವಸ್ಥಾನವಿದೆ.
ಸುತ್ತಲೂ ಪ್ರಕಾರವಿದೆ. ಅಡುಗೆ ಮಾಡಲು ವ್ಯವಸ್ಥೆ ಇದೆ. ಕಾರ್ ಹೋಗಲು ದಾರಿಯಿದೆ.

ಇಂದು ಅಲ್ಲಿಯೇ ಹೋಗಿ ಅಡುಗೆಮಾಡಿ ಊಟ ಮಾಡುವ ಪ್ರೋಗ್ರಾಂ ಆಗಿತ್ತು. ಅಡುಗೆಗೆ ಬೇಕಾಗುವ ಎಲ್ಲ ಸಾಮಾನುಗಳನ್ನು ಅಜ್ಜ, ಅಜ್ಜಿ ಬೆಳಗಿನಿಂದಲೇ ಸಿದ್ಧಪಡಿಸುತ್ತಿದ್ದರು. ಇವರ ಜತೆ ವಿಷ್ಣು ಕಾಕಾ ಅವರ ಮೊಮ್ಮಕ್ಕಳು ದಾಮೂ ಎಲ್ಲರೂ ಬರುವವ ರಿದ್ದರು. ಒಂದು ಮೆಟಾಡೋರ್ ಸಹಿತ ಗೊತ್ತಾಗಿತ್ತು. ತಡವಾಗಿ ಏಳುತ್ತಿದ್ದ ರಘು ಮತ್ತು ಕೃಷ್ಣಾ ಇಂದು ಬೇಗನೇ ಎದ್ದರು.

ಅವರೂ ಅಜ್ಜಿಗೆ ಸಹಾಯ ಮಾಡಲು ಕೈಜೋಡಿಸಿದರು. ಹೇಳಿದ ಹೊತ್ತಿಗೆ ಮೆಟಡೋರ್ ಬಂದಿತು. ಮಕ್ಕಳು ಉಲ್ಲಾಸದಿಂದ ವಾಹನ ಏರಿದರು. ಅಜ್ಜಿ ಸಾಮಾನಿನ ಲೆಕ್ಕ ಹಾಕಿದರೆ ದಾಮೂ ಅದನ್ನು ಮೇಲಿರಿಸುತ್ತಿದ್ದ. ದೇವಸ್ಥಾನದ ಸುತ್ತಲೂ ಕರಿಹಸಿರಿನ ಕಾಡು. ಮೇಲಿನಿಂದ ನೋಡಿದರೆ ಅದೊಂದು ಸಮುದ್ರವೇ ಹಸಿರಿನಿಂದ ತುಂಬಿದೆ ಅನಿಸುವುದು. ದಾಮೂ, ಅಜ್ಜಿ ಅಡುಗೆ ಮಾಡಲು ಆರಂಭಿಸಿದರು.

ಅಡುಗೆ ಅತ್ಯಂತ ಸಿಂಪಲ್. ಬಿಸಿಬೇಳೆ ಹುಳಿಯನ್ನ, ಮೊಸರನ್ನ ಮತ್ತು ಗಸಗಸೆ ಪಾಯಸ. ಪಾಯಸದ ಸುವಾಸನೆ ‘ಘಂ’
ಅನ್ನುತ್ತಿತ್ತು. ಮಕ್ಕಳ ಬಾಯಲ್ಲಿ ನೀರೂರಿತು. ಅಜ್ಜಿ ಅದನ್ನು ಬಡಿಸುವಾಗ ಎಲ್ಲರಿಗೂ ಎಚ್ಚರಿಕೆ ಹೇಳಿದಳು. ಮಕ್ಕಳೇ ಉಂಡ ಎಲೆಯನ್ನು, ಪಾಯಸ ಹಾಕಿದ ದೊನ್ನೆಯನ್ನು ಎಲ್ಲಿಯೂ, ಯಾರೂ ಬಿಡಬೇಡಿ. ಕಾಡನ್ನು ಸುಂದರವಾಗಿ, ಸುರಕ್ಷಿತವಾಗಿ,
ಸ್ವಚ್ಛವಾಗಿ ಇಡುವುದು ನಮ್ಮ ಕರ್ತವ್ಯ. ಅಲ್ಲದೇ ನಾವುಂಡ ಎಲೆಗಳನ್ನು ಇಲ್ಲಿಯೇ ಬಿಟ್ಟುಹೋದರೆ ಕಾಡಿನ ಪ್ರಾಣಿಗಳು ಬಂದು ತಿನ್ನಬಹುದು. ಮೂಸಿ ನೋಡಬಹುದು.

‘ಅವುಗಳು ಉಳಿದದ್ದನ್ನೆಲ್ಲಾ ತಿನ್ನಬಹುದಲ್ಲ?’ ಎಂದಳು ಮೀನು. ಅದು ಬೇಡ. ನಮ್ಮ ಕಥೆ ನಂತರ ಕರಡಿಯ ಪಾಯಸದ ಕಥೆಯಾಗಬಹುದು. ‘ಅಜ್ಜಿ ಅದ್ಯಾವುದು ಕಥೆ? ಪ್ಲೀಸ್ ಹೇಳು’ ಎಂದು ಮಕ್ಕಳು ದುಂಬಾಲು ಬಿದ್ದರು. ‘ಆಯಿತು ಊಟವಾದ ಮೇಲೆ ನಾನು ಹೇಳಿದಂತೆ ಕೇಳಿದರೆ ಹೇಳುತ್ತೇನೆ’ ಎಂದಳು ಅಜ್ಜಿ.

ಬನ್ನಿ ಮಕ್ಕಳೆ. ನಾವೆಲ್ಲ ರಂಗನಾಥ ಸ್ವಾಮಿ ದೇವಸ್ಥಾನದ ಜಗುಲಿಯಲ್ಲಿ, ಕಾಡಿನಲ್ಲಿ ಕುಳಿತು ಪರಿಮಳಯುಕ್ತ ಗಸಗಸೆಯ ಪಾಯಸ ಉಂಡು ಈ ಹೊಸ ಕಥೆ ಕೇಳೋಣವೇ?

***
ಮೋಹನ್ ಮತ್ತು ವಾಸಂತಿ ಕಾಡಿನ ಅಂಚಿನಲ್ಲಿ ಇರುವ ಮನೆಯಲ್ಲಿ ಇರುತ್ತಿದ್ದರು. ಅವರಿಗೆ ಸೊಗಸಾದ ಮಾವಿನ ಮರದ, ಬಾಲೆಯ ಗಿಡದ ತೋಟವಿದ್ದಿತು. ಕಷ್ಟಪಟ್ಟು ದುಡಿದು ಒಳ್ಳೆಯ ಕೆಲಸಮಾಡುತ್ತಿದ್ದರು. ಈ ವರ್ಷ ಮಳೆ ಚೆನ್ನಾಗಿ ಬಿದ್ದು ಒಳ್ಳೆ ಬೆಲೆ ಬಂದಿತ್ತು. ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಮೋಹನ್ ವಾಸಂತಿಗೆ ‘ಬೆಳೆ ಮಾರಿದರೆ ಬೇಕಾದಷ್ಟು ಹಣ ಬರ‌್ತದೆ.
ಈ ಯುಗಾದಿಗೆ ನಾವು ಒಳ್ಳೆಯ ಗಸಗಸೆ ಅಥವಾ ಶ್ಯಾವಿಗೆ ಪಾಯಸ ಮಾಡಿ ತಿನ್ನೋಣ’ ಎಂದ.

ಅದಕ್ಕೆ ವಾಸಂತಿ ‘ಶ್ಯಾವಿಗೆ ಪಾಯಸ ಮಾಡ್ತೀನಿ. ಅದರಲ್ಲಿ ದ್ರಾಕ್ಷಿ ಗೋಡಂಬಿ ಎಲ್ಲಾ ಹಾಕೋಣ. ಹೊಟ್ಟೆ ತುಂಬೋವಷ್ಟು ಪಾಯಸ ಮಾಡ್ತೀನಿ. ಅಂಗಡಿಗೆ ನಾನು ಹೋಗಿ ಎಲ್ಲಾ ಸಾಮಾನು ತರ್ತೀನಿ. ನೀವು ಕಾಡಿಗೆ ಹೋಗಿ ಒಣ ಸೌದೆ ಕಡಿದುಕೊಂಡು
ಬನ್ನಿ’ ಎಂದಳು. ಮೋಹನ್ ಸಿಳ್ಳೆ ಹಾಕುತ್ತಾ ಆನಂದದಿಂದ ಕಾಡಿಗೆ ಬಂದ. ಒಂದು ಒಣಮರ ಕಂಡಿತು. ಅದರ ಬಳಿಹೋಗಿ
ಕೊಡಲಿಯನ್ನು ಇನ್ನೇನು ಎತ್ತಬೇಕು ಎನ್ನುವಾಗ ನೋಡಿ ಅಚ್ಚರಿಯಿಂದ ಗಾಬರಿಯಾದ.

ಗಿಡಕ್ಕೆ ಆತುಕೊಂಡು ಭಾರೀ ದೊಡ್ಡ ಗಾತ್ರದ ಕರಡಿಯೊಂದು ಅಡ್ಡವಾಗಿ ಕೂತಿತ್ತು. ಅದನ್ನು ನೋಡಿದ ಕೂಡಲೇ ಮೋಹನನ ಧೈರ್ಯ ಕುಗ್ಗಿ ಹೋಯಿತು. ಹಿಂತಿರುಗಿ ಓಡಿ ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ಕರಡಿ ಮಾನವನ ಧ್ವನಿಯಲ್ಲಿ
ಮಾತಾಡಿತು. ‘ಏನು ಇಷ್ಟೇನಾ ಧೈರ್ಯ! ಯಾತಕ್ಕೆ ಇಲ್ಲಿ ಬಂದೆ?’ ಹೆದರುತ್ತ ಮೋಹನ ಹೇಳಿದ.

‘ಒಣ ಕಟ್ಟಿಗೆ ಬೇಕಿತ್ತು’
‘ಯಾಕೆ?’
‘ಇವತ್ತು ನಮ್ಮ ಮನೆಯಲ್ಲಿ ನನ್ನ ಹೆಂಡತಿ ಪಾಯಸ ಮಾಡ್ತಾಳೆ. ಸೌದೆ ತೀರಿದೆ’. ‘ಪಾಯಸ ಹೇಗಿರುತ್ತದೆ? ನಾನಂತೂ ಕೇಳಿಲ್ಲ
ತಿಂದಿಲ್ಲ’ ಎಂದಿತು ಕರಡಿ. ಈಗ ಮೋಹನನಿಗೆ ಉತ್ಸಾಹ ಮತ್ತು ಧೈರ್ಯ ಬಂದಿತು. ‘ತುಂಬಾ ರುಚಿಯಾಗಿರುತ್ತದೆ. ಪಾಯಸದಲ್ಲಿ
ಹಾಲು, ಬೆಲ್ಲ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಎಲ್ಲ ತುಪ್ಪದಲ್ಲಿ ಕರಿದು ಹಾಕ್ತಾರೆ. ಅದನ್ನು ನೆನೆದರೆ ಈಗಲೂ ನನ್ನ ಬಾಯಲ್ಲಿ ನೀರು ಬರುತ್ತದೆ.’

‘ಹೌದಾ ಹಾಗಾದರೆ ನಾಳೆ ನಾನು ನಿಮ್ಮ ಮನೆಗೆ ಬರ್ತೇನೆ. ಪಾಯಸ ಮಾಡಿಸಿಕೊಡು’ ಎಂದು ಕರಡಿ ಆಜ್ಞಾಪಿಸಿತು. ಈಗ ಮೋಹನನಿಗೆ ಹೆದರಿಕೆ ಶುರುವಾಯಿತು. ಕರಡಿಯ ಅಗಲ, ಎತ್ತರ ನೋಡಿ ಅದಕ್ಕೆ ಬೇಕಾಗುವ ಸಾಮಾನಿನ ಅಂದಾಜು ಬಂದಿತು.
ಇಲ್ಲ ಅನ್ನಲಿಕ್ಕೆ ಧೈರ್ಯ ಆಗಲಿಲ್ಲ.

‘ಹಾಂ ! ಆಗಲಿ. ಆದ್ರೆ ನಿನ್ನ ಅಳತೆಗೆ ತಕ್ಕ ಪಾಯಸ ಮಾಡಬೇಕಾದ್ರೆ ತುಂಬಾಖರ್ಚು, ಸೌದೆ ಬೇರೆ ಬಹಳ ಬೇಕು’ ‘ನೀನು ಯೋಚಿಸ ಬೇಡ. ನನ್ನ ಹತ್ತಿರ ಚಿನ್ನದ ನಾಣ್ಯ ಇದೆ. ಯಾರೋ ಕಳ್ಳರು, ಈ ಮರದ ಅಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಅದನ್ನು ತಗೊ, ಬೇಕಾದಷ್ಟು ಸಾಮಾನು ಸರಂಜಾಮು ತಂದ್ಕೊ. ಆದ್ರೆ ಮರಿಬೇಡ, ನನಗೆ ಹೊಟ್ಟೆ ತುಂಬೋ ಅಷ್ಟು ಪಾಯಸಬೇಕು’ ಎಂದು ಗುಟರ್ ಹಾಕಿ ಹೇಳಿತು ಕರಡಿ.

ಕರಡಿಯಿಂದ ಒಂದು ಚಿನ್ನದ ನಾಣ್ಯ ಪಡೆದು ಮೋಹನ ಮನೆಗೆ ಬಂದು ಹೆಂಡತಿಗೆ ಹೇಳಿದ. ವಾಸಂತಿಯೂ ಒಪ್ಪಿದಳು. ಅವರಿಬ್ಬರೂ ಪೇಟೆಗೆ ಹೋಗಿ ಬೇಕಾದಷ್ಟು ಸಾಮಾನು, ಸೌದೆ ಅಲ್ಲದೇ ಒಂದು ದೊಡ್ಡ ಹಂಡೆಯನ್ನೂ ಖರೀದಿಸಿದರು.
ಅದರಲ್ಲಿ ಪಾಯಸ ಮಾಡಲು ಆರಂಭಿಸಿದರು. ಬೇಕಾದಷ್ಟು ಒಳ್ಳೆಯ ಸಾಮಾನು ಹಾಕಿ ಪರಿಮಳ ಬರುವಂತೆ ಮಾಡಿದರು.

‘ಪಾಯಸ ಸರಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ಚಮಚೆ ತಿಂದು ನೋಡುತ್ತೇನೆ’ ಎಂದು ವಾಸಂತಿ ಒಂದು ಬಟ್ಟಲು ಪಾಯಸವನ್ನು ರುಚಿ ನೋಡಲು ತೆಗೆದಳು. ‘ಸ್ವಲ್ಪ ಬೆಲ್ಲ ಕಡಿಮೆಯಾಗಿದೆ’ ಎನ್ನುತ್ತ ಬೆಲ್ಲ ಹಾಕಿದಳು. ‘ಸರಿ ಈಗ ನಾನು ರುಚಿ ನೋಡುತ್ತೇನೆ’ ಎನ್ನುತ್ತ ಮೋಹನ ಒಂದು ಬಟ್ಟಲು ಪಾಯಸವನ್ನು ರುಚಿ ನೋಡಲು ತೆಗೆದ.

‘ಹಾಲು ಕಡಿಮೆ ಅನಿಸುತ್ತದೆ’ ಎನ್ನುತ್ತ ಹಾಲನ್ನು ಹೊಯ್ದನು. ಹೀಗೆ ಗಂಡ ಹೆಂಡತಿಯರು ದ್ರಾಕ್ಷಿ ಬೆಂದಿದೆಯಾ, ಗೋಡಂಬಿ ರುಚಿಯಾಗಿದೆಯಾ, ಯಾಲಕ್ಕಿಯ ಪರಿಮಳ ಹೇಗಿದೆ ಎಂದು ಒಂದೊಂದು ನೆಪದಿಂದ ರುಚಿ ನೋಡುತ್ತಿದ್ದರು. ಇಬ್ಬರ ಮನಸ್ಸಿ ನಲ್ಲಿ ಹೇಗಾದರೂ ಇಷ್ಟು ದೊಡ್ಡ ಹಂಡೆ ತುಂಬ ಪಾಯಸವಿದೆಯಲ್ಲಾ. ನಾಲ್ಕಾರು ಬಟ್ಟಲು ಕಡಿಮೆಯಾದರೂ ರಾತ್ರಿಯ ಕತ್ತಲಲ್ಲಿ ಕರಡಿಗೆ ಏನು ಗೊತ್ತಾಗುವುದು ಎನ್ನುವ ಧೈರ್ಯ.

ಕೊನೆಗೆ ನೋಡುತ್ತಾರೆ. ಪಾಯಸ ಹಂಡೆಯ ತಳಕ್ಕೆ ಹತ್ತಿದೆ. ಇವರ ಹೊಟ್ಟೆಯೂ ತುಂಬಿದೆ. ಆದರೆ ಕರಡಿಗೆ ಏನು ಕೊಡಬೇಕು? ವಾಸಂತಿಗೆ ಹೆದರಿಕೆಯಾಯಿತು. ‘ಕರಡಿಗೆ ಕ್ಷಮೆ ಕೇಳಿ ಇನ್ನೊಂದು ದಿನ ಚೆನ್ನಾಗಿ ಪಾಯಸ ಮಾಡಿಕೊಡೋಣ’ ಎಂದಳು.
‘ನಿನಗೆ ಕರಡಿಯ ಕೋಪ ಗೊತ್ತಿಲ್ಲ. ಏನಾದರೂ ಉಪಾಯ ಮಾಡೋಣ. ಇದರಲ್ಲಿ ನೀರು ಮತ್ತೆ ಹಾಲು ಹಾಕೋಣ.

ಮನೆಯಲ್ಲಿಯ ಮಿಕ್ಕಿದ ಅನ್ನ ಹಾಕೋಣ. ಹೇಗಾದರೂ ಹೆಚ್ಚಿನ ಯಾಲಕ್ಕಿ ಇದೆ. ಅದನ್ನೂ ಸೇರಿಸೋಣ. ಕರಡಿಗೆ ಪಾಯಸ ಏನೂಂತ ಗೊತ್ತಿಲ್ಲ. ನಾವಿಬ್ಬರು ಅಡಗಿ ಕೂಡೋಣ’ ಎಂದು ಕುತಂತ್ರ ಮಾಡಿದ ಮೋಹನ. ಒಲ್ಲದ ಮನಸ್ಸಿನಿಂದ ಒಪ್ಪಿದಳು
ವಾಸಂತಿ. ರಾತ್ರಿಯ ವೇಳೆಗೆ ಕರಡಿ ಬಂದಿತು. ಮನೆಯ ಮುಂದಿದ್ದ ಹಂಡೆ ನೋಡಿತು. ಅದರಲ್ಲಿ ಯಾಲಕ್ಕಿಯ ಪರಿಮಳ ಬರುತ್ತಿತ್ತು.

ಕರಡಿ ಸಂತೋಷದಿಂದ ಸುತ್ತಮುತ್ತಲು ನೋಡಿತು. ಯಾರೂ ಕಾಣಲಿಲ್ಲ. ‘ಪಾಪ ನನಗೋಸ್ಕರ ಪಾಯಸ ಮಾಡಿ ನಾನು
ತಿನ್ನುವಾಗ ನನಗೆ ಸಂಕೋಚವಾಗಬಾರದೆಂದು ಅವರಿಬ್ಬರು ಎಲ್ಲಿಯೋ ಹೋಗಿದ್ದಾರೆ. ಇರಲಿ ನಾನು ತಿಂದು ಹೋಗುತ್ತೇನೆ’ ಎಂದುಕೊಂಡು ಪಾಯಸ ತಿನ್ನಲು ಆರಂಭಿಸಿತು. ಆದರೆ ಪಾಯಸದಲ್ಲಿ ರುಚಿಯೇ ಇರಲಿಲ್ಲ. ನೀರು, ಅನ್ನ, ಹೀಗೆ ವಿವಿಧ ಪದಾರ್ಥ ಇದ್ದವು. ಮೋಹನ ಹೇಳಿದಂತೆ ದ್ರಾಕ್ಷಿ, ಗೋಡಂಬಿ, ಸಕ್ಕರೆ ಇರಲೇ ಇಲ್ಲ.

ತುಪ್ಪದ ವಾಸನೆಯೂ ಇಲ್ಲ. ಸ್ವಲ್ಪ ಹೊತ್ತಿನ ನಂತರ ಕರಡಿಗೆ ಪಾಯಸ ತಿನ್ನಲು ಆಗಲೇ ಇಲ್ಲ. ಅಲ್ಲದೇ ಇದರಲ್ಲಿ ಮೋಸ ಇದೆ ಎಂದು ಗೊತ್ತಾಯಿತು. ಅದರ ಕೋಪ ತಾರಕಕ್ಕೇರಿತು. ತನ್ನಿಂದ ಚಿನ್ನದ ನಾಣ್ಯ ಪಡೆದು ಮೋಸಮಾಡಿದ ಮಾನವನ ಮೇಲೆ ಸಹಿಸಲು ಅಸಾಧ್ಯವಾದ ಕೋಪ ಉಕ್ಕೇರಿತು. ಸುತ್ತಮುತ್ತಲು ನೋಡಿತು.

ಬೆಳದಿಂಗಳ ರಾತ್ರಿಯಲ್ಲಿ ನಳನಳಿಸುವ ಬಾಳೆಯ ತೋಟ, ಮಾವಿನ ತೋಪು ಕಂಡಿತು. ಮೊದಲು ಕರಡಿ ಮನೆಯನ್ನು ನೋಡಿ ಅದರೊಳಗೆ ನುಗ್ಗಿ ಮನೆಯ ಆಧಾರಕಂಬವನ್ನು ಹಿಡಿದು ಎಳೆಯಿತು. ಅದರ ರಭಸಕ್ಕೆ ಮನೆಯ ಛಾವಣಿ ಕುಸಿಯಿತು. ಅದನ್ನು ಕಾಲಿನಿಂದ ತುಳಿದು ಗೋಡೆಗೆ ಒದ್ದು ಬೀಳಿಸಿತು. ಅಲ್ಲಿಂದ ನೇರವಾಗಿ ತೋಟಕ್ಕೆ ಹೋಗಿ ಬಾಳೆಯ ವನವನ್ನು ಹಾಳು ಮಾಡಿತು.
ತನ್ನ ಮೈಯನ್ನು ಮಾವಿನಮರಕ್ಕೆ ಉಜ್ಜಿ ಎಲ್ಲ ಕಾಯಿಗಳನ್ನು ನೆಲಕ್ಕೆ ಬೀಳಿಸಿತು.

ನಂತರ ಮತ್ತೊಮ್ಮೆ ಕೋಪದಿಂದ ಗುಟುರುಹಾಕಿ ಕಾಡಿಗೆ ಹೊರಟುಹೋಯಿತು. ತಮ್ಮ ಮನೆ, ತೋಟ, ಹಾಳಾಗುವುದನ್ನು ಬಾಯಿ ಮುಚ್ಚಿ, ಅಸಹಾಯಕತೆ ಯಿಂದ ನೋಡುತ್ತಾ ನಿಂತಿದ್ದರು ಮೋಹನ ಮತ್ತು ವಾಸಂತಿ.