ಮಾಸ್ಕೋ: ಶ್ವಾನ ಮತ್ತು ಮನುಷ್ಯ ಸಂಬಂಧ ಹೆಚ್ಚು ಗಾಢವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ತನ್ನ ಮಾಲೀಕನ ಬಗ್ಗೆ ನಾಯಿಗಳು ತೋರುವ ಗೌರವ, ನಿಷ್ಠೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಅಂತಹ ಒಂದು ಸ್ಫೂರ್ತಿದಾಯಕ ಘಟನೆ ರಷ್ಯಾದಲ್ಲಿ (Russian Dog) ನಡೆದಿದೆ. ಮಾಲೀಕನ ದುರಂತ ಸಾವಿನ ಬಳಿಕ ನಾಯಿಯೊಂದು ಆತ ಬರುವಿಕೆಗಾಗಿ ಹೆಪ್ಪುಗಟ್ಟಿದ ನದಿಯ ಬಳಿ ಹಲವಾರು ದಿನ ಕಾದು ಕುಳಿತಿದ್ದು, ವಿಶ್ವದಾದ್ಯಂತ ಸಾಕಷ್ಟು ಮಂದಿಯ ಹೃದಯ ಗೆದ್ದಿದೆ.
ಶ್ವಾನಗಳು ಮಾನವನ ಅತ್ಯಂತ ನಿಷ್ಠಾವಂತ ಸಹಚರರು ಎಂದು ಬಹಳ ಹಿಂದಿನಿಂದಲೂ ಪ್ರಶಂಸಿಸಲ್ಪಟ್ಟಿವೆ. ಇದಕ್ಕೆ ಇನ್ನೊಂದು ಸಾಕ್ಷಿ ರಷ್ಯಾದ ನಿಷ್ಠಾವಂತ ಬೆಲ್ಕಾ ಶ್ವಾನ (story of Belka). ತನ್ನ ಮಾಲೀಕ ದುರಂತವಾಗಿ ಸಾವನ್ನಪ್ಪಿದ ಬಳಿಕ ಅಚಲವಾದ ನಂಬಿಕೆಯಿಂದ ನದಿಯ ಬಳಿ ಕಾದು ಕುಳಿತಿದೆ.
ರಷ್ಯಾದ ಉಫಾ ಪ್ರದೇಶದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹೆಪ್ಪುಗಟ್ಟಿದ ನದಿಯ ಬಳಿ ಸೈಕಲ್ ತುಳಿಯುತ್ತಿದ್ದಾಗ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ದುರ್ಬಲವಾದ ಮಂಜುಗಡ್ಡೆಯ ಮೇಲೆ ಆತ ತೆರಳುತ್ತಿದ್ದಾಗ ಹಿಮಾವೃತ ನೀರಿನಲ್ಲಿ ಬಿದ್ದು ಮುಳುಗಿದ್ದಾನೆ. ದಾರಿಹೋಕನೊಬ್ಬ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ರಕ್ಷಣಾ ತಂಡಗಳು ಸಾಕಷ್ಟು ಹುಡುಕಾಟವನ್ನು ನಡೆಸಿತು. ಕೊನೆಗೆ ಹಲವು ದಿನಗಳ ಕಾರ್ಯಾಚರಣೆಯ ಬಳಿಕ ಉಫಾ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ಈ ದುರಂತದ ನಡುವೆ ಬೆಲ್ಕಾ ತನ್ನ ನಿಷ್ಠೆಯನ್ನು ಪ್ರದರ್ಶಿಸಿದೆ. ನಾಲ್ಕು ದಿನಗಳವರೆಗೆ ಬೆಲ್ಕಾ ನದಿಯ ದಡವನ್ನು ಬಿಟ್ಟು ತೆರಲಿಲ್ಲ. ಮಾಲೀಕನ ಆಗಮನಕ್ಕಾಗಿ ಕಾಯುತ್ತಿದೆ. ಮನೆಯವರು ಬಂದು ಅದನ್ನು ಕರೆದುಕೊಂಡು ಹೋದರೂ ಮರಳಿ ಅದು ಅದೇ ಸ್ಥಳಕ್ಕೆ ಬರುತ್ತಿದೆ .
Belka, a dog from Russia, waited 4 days on the ice where her owner tragically fell through and drowned, hoping he’d come back.
— The Cheshire Cat (@C90284166) November 29, 2024
💔💔💔💔#dogloyalty #belka #hachiko #dogstories #animalbond #faithfulfriend #doglovers #truestory #dogs #news #belkathedog pic.twitter.com/bDrbaozCa8
ಬ್ರೂಟ್ ಅಮೆರಿಕ ಈ ಕಥೆಯನ್ನು ವಿಡಿಯೋ ಸಹಿತ ಹಂಚಿಕೊಂಡ ಬಳಿಕ ಬೆಲ್ಕಾ ವಿಶ್ವದ ಗಮನ ಸೆಳೆದಿದೆ.
2020 ರಲ್ಲಿ ಚೀನಾದ ವುಹಾನ್ನಲ್ಲಿ ಕ್ಸಿಯಾವೊ-ಬಾವೊ ಎಂಬ ಏಳು ವರ್ಷದ ನಾಯಿ ವಿಶ್ವದ ಗಮನವನ್ನು ಸೆಳೆಯಿತು. ಅದು ತನ್ನ ಮಾಲೀಕ ಕರೋನ ವೈರಸ್ಗೆ ಬಲಿಯಾದ ಅನಂತರ ಮೂರು ತಿಂಗಳ ಕಾಲ ವುಹಾನ್ ತೈಕಾಂಗ್ ಆಸ್ಪತ್ರೆಯಲ್ಲಿ ಮಾಲೀಕನ ಮರಳಿ ಬರುವಿಕೆಗಾಗಿ ಕಾಯುತ್ತಿತ್ತು.
ಆಸ್ಪತ್ರೆ ಸಿಬ್ಬಂದಿ ಅದನ್ನು ಸ್ಥಳಾಂತರಿಸಲು ಪ್ರಯತ್ನಿಸಿದರೂ ಅದು ಮರಳಿ ಬರುತ್ತಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಅದನ್ನು ನೋಡಿಕೊಂಡರು. ಬೆಲ್ಕಾ ಮತ್ತು ಕ್ಸಿಯಾವೊ-ಬಾವೊ ಕಥೆಗಳು ಮಾನವ ಮತ್ತು ನಾಯಿಗಳ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸುತ್ತವೆ. ಅವುಗಳ ಪ್ರೀತಿ ಮತ್ತು ನಿಷ್ಠೆಯನ್ನು ಪ್ರದರ್ಶಿಸುತ್ತವೆ.