Wednesday, 4th December 2024

Cooch Behar Trophy: ಹ್ಯಾಟ್ರಿಕ್‌, 10 ವಿಕೆಟ್‌ ಸಾಧನೆ ಮಾಡಿ ಇತಿಹಾಸ ಬರೆದ ಸುಮನ್‌ ಕುಮಾರ್‌!

Bihar's Suman Kumar makes history with 10 wickets, hat-trick vs Rajasthan

ಪಾಟ್ನಾ: ಪ್ರಸ್ತುತ ನಡೆಯುತ್ತಿರುವ 2024ರ ಕೂಚ್‌ ಬೆಹಾರ್‌ ಟ್ರೋಫಿ ಟೂರ್ನಿಯಲ್ಲಿ (Cooch Behar Trophy) ಬಿಹಾರ್‌ ತಂಡದ ಸ್ಪಿನ್ನರ್‌ ಸುಮನ್‌ ಕುಮಾರ್‌ ಇತಿಹಾಸ ಬರೆದಿದ್ದಾರೆ. ರಾಜಸ್ಥಾನ್‌ ಎದುರಿನ ಪಂದ್ಯದ ಇನಿಂಗ್ಸ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಜೊತೆಗೆ 10 ವಿಕೆಟ್‌ಗಳ ಸಾಧನೆ ಮಾಡಿದರು. ಆ ಮೂಲಕ ಕೋಚ್‌ ಬೆಹಾರ್‌ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎಂಬ ಸಾಧನೆಗೆ ಅವರು ಭಾಜನರಾಗಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಮೂರನೇ ಬೌಲರ್‌ ಎಂಬ ದಾಖಲೆಯನ್ನು ಕೂಡ ಸುಮನ್‌ ಬರೆದಿದ್ದಾರೆ.

ರಾಜಸ್ಥಾನ್‌ ವಿರುದ್ದದ ಪಂದ್ಯದಲ್ಲಿ ಒಟ್ಟು 33.5 ಓವರ್‌ಗಳನ್ನು ಬೌಲ್‌ ಮಾಡಿದ ಸುಮನ್‌ ಕುಮಾರ್‌ 53 ರನ್‌ಗಳನ್ನು ನೀಡಿ 10 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ. ಈ ಇನಿಂಗ್ಸ್‌ನ 36ನೇ ಓವರ್‌ನಲ್ಲಿ ಮೋಹಿತ್‌ ಭಾಗ್ನಾನಿ, ಅನಾಸ್‌ ಹಾಗೂ ಸಚಿನ್‌ ಶರ್ಮಾ ಅವರನ್ನು ಔಟ್‌ ಮಾಡುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಆ ಮೂಲಕ ಪಾಟ್ನಾದ ಮೊಯಿನ್‌ ಉಲ್‌ ಹಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಿಹಾರ್‌ ಪ್ರಾಬಲ್ಯ ಸಾಧಿಸಿದೆ.

ಈ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡರೂ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ಆಧಾರದ ಮೇಲೆ ಬಿಹಾರ್‌ ತಂಡ ತನ್ನ ಖಾತೆಗೆ ಮೂರು ಅಂಕಗಳನ್ನು ಸೇರಿಸಿಕೊಂಡಿತು. ಎದುರಾಳಿ ರಾಜಸ್ಥಾನ್‌ ತಂಡ ಕೇವಲ ಒಂದೇ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿತು.

467 ರನ್‌ ಕಲೆ ಹಾಕಿದ್ದ ಬಿಹಾರ್‌

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಬಿಹಾರ್‌ ತಂಡ 143.4 ಓವರ್‌ಗಳಿಗೆ ಪ್ರಥಮ ಇನಿಂಗ್ಸ್‌ನಲ್ಲಿ 467 ರನ್‌ಗಳನ್ನು ಕಲೆ ಹಾಕಿತ್ತು. ದಿಪೇಶ್‌ಗುಪ್ತಾ ಮತ್ತು ಪೃಥ್ವಿ ರಾಜ್‌ ಅವರು ತಲಾ ಶತಕಗಳನ್ನು ಸಿಡಿಸಿದ್ದರು. ದಿಪೇಶ್‌ 381 ಎಸೆತಗಳಲ್ಲಿ ಅಜೇಯ 183 ರನ್‌ಗಳನ್ನು ಕಲೆ ಹಾಕಿದರು. ಇವರ ಈ ಇನಿಂಗ್ಸ್‌ಲ್ಲಿ 28 ಬೌಂಡರಿಗಳಿವೆ.

ನಂತರ ಪ್ರಥಮ ಇನಿಂಗ್ಸ್‌ ನಡೆಸಿದ್ದ ರಾಜಸ್ಥಾನ್‌ ತಂಡ, ಸುಮನ್‌ ಕುಮಾರ್‌ ಸ್ಪಿನ್‌ ಮೋಡಿಗೆ ನಲುಗಿ ಕೇವಲ 182 ರನ್‌ಗಳಿಗೆ ಕುಸಿದಿತ್ತು ಹಾಗೂ 285 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ, ರಾಜಸ್ಥಾನ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿತ್ತು. ಪಾರ್ಥ್‌ ಯಾದವ್‌ (200) ಅವರ ದ್ವಿಶತಕದ ಬಲದಿಂದ ರಾಜಸ್ಥಾನ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 410 ರನ್‌ಗಳನ್ನು ಕಲೆ ಹಾಕಿತ್ತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಮುಗಿಯಿತು.

ಪ್ರಸ್ತುತ ನಡೆಯುತ್ತಿರುವ ಕೋಚ್‌ ಬೆಹಾರ್‌ ಟ್ರೋಫಿ ಟೂರ್ನಿಯಲ್ಲಿ ಸುಮನ್‌ ಕುಮಾರ್‌ ಆಡಿದ 4 ಪಂದ್ಯಗಳಿಂದ 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ಕೇವಲ 1.91ರ ಎಕಾನಮಿ ರೇಟ್‌ನಲ್ಲಿ ರನ್‌ಗಳಿಗೆ ಕಡಿವಾಣ ಹಾಕಿದ್ದಾರೆ. ಡಿಸೆಂಬರ್‌ 6 ರಂದು ಬಿಹಾರ್‌ ತಂಡ ಔರಂಗಾಬಾದ್‌ನಲ್ಲಿ ಆರಂಭವಾಗುವ ತನ್ನ ಮುಂದಿನ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

ಎಲೈಟ್‌ ಗ್ರೂಪ್‌ ಇ ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳ ಮೂಲಕ ಬಿಹಾರ್‌ ತಂಡ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್‌ ತಂಡ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಈ ಸುದ್ದಿಯನ್ನು ಓದಿ: IND vs AUS: ಸೋಲಿನ ಬೆನ್ನಲ್ಲೇ ಆಸೀಸ್‌ಗೆ ಆಘಾತ; ಸ್ಟಾರ್‌ ಆಟಗಾರನಿಗೆ ಗಾಯ