Wednesday, 4th December 2024

PAK vs ZIM: ಜಿಂಬಾಬ್ವೆಗೆ ಮೊದಲನೇ ಟಿ20ಐ ಪಂದ್ಯದಲ್ಲಿ ಆಘಾತ ನೀಡಿದ ಪಾಕಿಸ್ತಾನ!

PAK vs ZIM: Pakistan won By 57 Runs against Zimbabwe in 1st T20I at Queens Sports Club, Bulawayo

ಬುಲವಾಯೊ (ಜಿಂಬಾಬ್ವೆ): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ, ಆತಿಥೇಯ ಜಿಂಬಾಬ್ವೆ (PAK vs ZIM) ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ 57 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಪ್ರವಾಸಿ ಪಾಕಿಸ್ತಾನ ತಂಡ 1-0 ಮುನ್ನಡೆ ಪಡೆದಿದೆ.

ಇಲ್ಲಿನ ಕ್ವೀನ್ಸ್‌ ಸ್ಪೋಟ್ಸ್‌ ಕ್ಲಬ್‌ನಲ್ಲಿ ಭಾನುವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 165 ರೆನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಜಿಂಬಾಬ್ವೆ ತಂಡಕ್ಕೆ 166 ರನ್‌ಗಳ ಗುರಿಯನ್ನು ನೀಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ತಂಡ, 18 ರನ್‌ ಇರುವಾಗಲೇ ಒಂದು ವಿಕೆಟ್‌ ಕಳೆದುಕೊಂಡಿತ್ತು. ಕೇವಲ 16 ರನ್‌ಗಳ ಒಮೈರ್‌ ಯೂಸೆಫ್‌ ವಿಕೆಟ್‌ ಒಪ್ಪಿಸಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜತೆಯಾದ ಸೈಮ್‌ ಆಯುಬ್‌ ಮತ್ತು ಉಸ್ಮಾನ್‌ ಖಾನ್‌ ಜೋಡಿ 39 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡವನ್ನು ಮೇಲೆತ್ತಿದ್ದರು. ನಂತರ 24 ರನ್‌ ಗಳಿಸಿ ಆಡುತ್ತಿದ್ದ ಸೈಮ್‌ ಆಯುಬ್‌ ಕೂಡ ಔಟ್‌ ಆದರು. ನಾಯಕ ಸಲ್ಮಾನ್‌ ಅಗಾ ಕೇವಲ 13 ರನ್‌ಗಳಿಗೆ ಸೀಮಿತರಾದರು.

ಆದರೆ, ಇದಕ್ಕೂ ಮುನ್ನ ಸ್ಪೋಟಕ ಬ್ಯಾಟ್‌ ಮಾಡಿದ ಉಸ್ಮಾನ್‌ ಖಾನ್‌ ಅವರು 30 ಎಸೆತಗಳಲ್ಲಿ 39 ರನ್‌ಗಳನ್ನು ಸಿಡಿಸಿದರು. ನಂತರ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ತಯಬ್‌ ತಾಹೀರ್‌ ಕೇವಲ 25 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 39 ರನ್‌ಗಳನ್ನು ಸಿಡಿಸಿದರೆ, ಇವರಿಗೆ ಕೊನೆಯಲ್ಲಿ ಸಾಥ್‌ ನೀಡಿದ್ದ ಇರ್ಫಾನ್‌ ಖಾನ್‌ ಕೇವಲ 15 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿದ್ದರು.

ಜಿಂಬಾಬ್ವೆ 108 ರನ್‌ಗಳಿಗೆ ಆಲ್‌ಔಟ್‌

ನಂತರ 166 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಬ್ರಾರ್‌ ಅಹ್ಮದ್‌ ಹಾಗೂ ಸುಫಿಯಾನ್‌ ಮುಖೀಮ್‌ ಅವರ ಬೌಲಿಂಗ್‌ ದಾಳಿಗೆ ನಲುಗಿದ ಆತಿಥೇಯ ತಂಡ 15.3 ಓವರ್‌ಗಳಿಗೆ 108 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 57 ರನ್‌ಗಳಿಂದ ಸೋಲು ಅನುಭವಿಸಿತು.

ಜಿಂಬಾಬ್ವೆ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ತಾಡಿವಾಣಸೆ ಮಾರುಮಣಿ 20 ಎಸೆತಗಳಲ್ಲಿ 33 ರನ್‌ ಗಳಿಸಿದರೆ, ಇವರಿಗೆ ಸಾಥ್‌ ನೀಡಿದ್ದ ನಾಯಕ ಸಿಕಂದರ್‌ ರಾಜಾ ಅವರು 28 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 39 ರನ್‌ಗಳನ್ನು ಸಿಡಿಸಿದರು. ಆದರೆ, ಸಿಕ್ಕಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಎರಡಂಕಿ ಮೊತ್ತವನ್ನು ಕಲೆ ಹಾಕಿದ್ದು, ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು.

ಪಾಕಿಸ್ತಾನ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಅಬ್ರಾರ್‌ ಅಹ್ಮದ್‌ ಹಾಗೂ ಸುಫಿಯಾನ್‌ ಮುಖೀಮ್‌ ತಲಾ ಮೂರು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಈ ಸುದ್ದಿಯನ್ನು ಓದಿ: Champions Trophy: ಹೈಬ್ರಿಡ್ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ; ಪಾಕ್‌ಗೆ ಹಿನ್ನಡೆ