Thursday, 5th December 2024

Fengal Cyclone: ಫೆಂಗಲ್‌ಗೆ ತಮಿಳುನಾಡು ತತ್ತರ… ಭಾರೀ ಭೂಕುಸಿತ; ಏಳು ಮಂದಿ ನಾಪತ್ತೆ

Fengal Cyclone

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಫೆಂಗಲ್‌ ಚಂಡಮಾರುತ (Fengal Cyclone) ಅಬ್ಬರಿಸುತ್ತಿದೆ. ಈಗಾಗಲೇ ಚಂಡಮಾರುತದ ಪರಿಣಾಮವಾಗಿ ಹಲವಾರು ಸಂಕಷ್ಟಗಳು ಎದುರಾಗಿದ್ದು, ಜನರು ಮನೆ ಕಳೆದುಕೊಂಡು ನಿರಾಶ್ರಿತ ಶಿಬಿರಗಳತ್ತ ತೆರಳುತ್ತಿದ್ದಾರೆ. ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ತಿರುವಣ್ಣಾಮಲೈನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ  ಒಂದೇ ಕುಟುಂಬದ ಏಳು ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಅವಶೇಷಗಳಡಿಯಲ್ಲಿ ಮೂರು ಮನೆಗಳು ಹೂತು ಹೋಗಿವೆ.

ಭಾನುವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಗುಡ್ಡದ ಇಳಿಜಾರಿನಲ್ಲಿದ್ದ ಮನೆಗಳು ಮಣ್ಣಿನಡಿಗೆ ಬಿದ್ದಿವೆ. ಮನೆಯೊಳಗಿದ್ದ ಮಕ್ಕಳು ಸೇರಿದಂತೆ ಎರಡು ಕುಟುಂಬಗಳಿಗೆ ಸೇರಿದ ಏಳು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ  ಭಾಸ್ಕರ್ ಪಾಂಡಿಯನ್ ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿದ್ದವು . ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತ ಎನ್‌ಡಿಆರ್‌ಎಫ್ ಸಹಾಯ ಕೇಳಿದ್ದು, 30 ಎನ್‌ಡಿಆರ್‌ಎಫ್ ಸದಸ್ಯರು, ಹೈಡ್ರಾಲಿಕ್ ಲಿಫ್ಟ್‌ಗಳು ಮತ್ತು ಎರಡು ಸ್ನಿಫರ್ ನಾಯಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ಈಗಾಗಲೇ ಎನ್‌ಡಿಆರ್‌ಎಫ್‌ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಏಳು ಮಂದಿ ಸಿಲುಕಿರುವ ಶಂಕೆಯಿದೆ. ಆದಷ್ಟು ಬೇಗ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಫೆಂಗಲ್‌ ಚಂಡಮಾರುತ ಪುದುಚೇರಿಯಲ್ಲೂ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ್ದು, ಮುನ್ನಚ್ಚೆರಿಕಾ ಕ್ರಮವಾಗಿ ಪುದುಚೇರಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸದ್ಯ ಫೆಂಗಲ್‌ ಅಬ್ಬರ ಕೊಂಚ ಮಟ್ಟಿಗೆ ಸುಧಾರಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳಕ್ಕೆ ಫೆಂಗಲ್‌ ಎಂಟ್ರಿ

ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಅಬ್ಬರಿಸಿದ್ದ ಚಂಡಮಾರುತ ಇದೀಗ ಕೇರಳಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೇರಳದ 8 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದಲ್ಲೂ ಮಳೆ

ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಇಡೀ ದಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದ್ದು, ಸೋಮವಾರ ಮುಂಜಾನೆಯೂ ಮಳೆಯಾಗುತ್ತಿದೆ. ಸೈಕ್ಲೋನ್‌ ಅಬ್ಬರದಿಂದ ಕರಾವಳಿ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಕೋಲಾರ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆಯನ್ನು ಮಾಡಿದೆ.

ಈ ಸುದ್ದಿಯನ್ನೂ ಓದಿ : Cyclone Fengal: ಫೆಂಗಲ್‌ ಎಫೆಕ್ಟ್‌, ಮೂರು ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ರಜೆ, ಬೆಂಗಳೂರಿನಲ್ಲೂ ಮಳೆ