Wednesday, 4th December 2024

Crime News: ಪಾಸ್‌ಪೋರ್ಟ್‌ ಚೆಕ್ಕಿಂಗ್‌ ವೇಳೆ ಯುವತಿಗೆ ಅಪ್ಪಿಕೋ ಎಂದ ಕಾನ್‌ಸ್ಟೇಬಲ್‌! ಕೆಲಸದಿಂದ ಅಮಾನತು

crime news

ಬೆಂಗಳೂರು: ಪಾಸ್​ಪೋರ್ಟ್ ವೆರಿಫಿಕೇಷನ್ (Passport Verification) ನೆಪದಲ್ಲಿ ಮನೆಗೆ ಬಂದ ಪೊಲೀಸ್ ಕಾನ್​ಸ್ಟೇಬಲ್, ಮಹಿಳಾ ಟೆಕ್ಕಿಗೆ ಅಸಭ್ಯ ವರ್ತನೆ ತೋರಿ ಕಿರುಕುಳ ನೀಡಿದ್ದಾನೆ. ಈ ಆರೋಪದಲ್ಲಿ ಬೆಂಗಳೂರಿನ (Bengaluru Crime News) ಬ್ಯಾಟರಾಯನಪುರ ಠಾಣೆಯ ಕಾನ್​ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

ಬಾಪೂಜಿನಗರದ ಯುವತಿಯೊಬ್ಬರು ಇತ್ತೀಚಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್​ಪೋರ್ಟ್ ವೆರಿಫಿಕೇಷನ್​ಗೆಂದು ಪೊಲೀಸ್ ಕಾನ್​ಸ್ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿದ್ದ. ಎರಡ್ಮೂರು ಬಾರಿ ಕಿರಣ್ ಯುವತಿಯ ಮನೆಗೆ ಹೋಗಿದ್ದ, ಅಲ್ಲದೆ ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.

ಪಾಸ್​ಪೋರ್ಟ್ ವೆರಿಫಿಕೇಷನ್​ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್​ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಆಗ್ರಹಿಸಿದ್ದ ಎಂದು ದೂರಲಾಗಿದೆ. ಅಲ್ಲದೆ, ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.

ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆಯೇ ಆಕೆಯ ಅಣ್ಣ ಮತ್ತೊಂದು ಕೊಠಡಿಯಲ್ಲಿ ಇರುವುದು ಪೊಲೀಸ್ ಕಾನ್​​ಸ್ಟೇಬಲ್ ಗಮನಕ್ಕೆ ಬಂದಿದೆ. ಆಗ ವರಸೆ ಬದಲಾಯಿಸಿದ ಕಿರಣ್, ‘‘ನೀನು ಒಳಗೆ ಇದ್ದಿ ಎಂದೇ ನಾನೆ ಹಿಂಗೆ ಮಾತನಾಡಿದ್ದು, ನಿನ್ನ ತಂಗಿ ನನ್ನ ತಂಗಿ ಇದ್ದಹಾಗೆ’’ ಎಂದಿದ್ದ. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್​ನನ್ನು ಅಮಾನತುಗೊಳಿಸಿದ್ದಾರೆ.‌

ಇದನ್ನೂ ಓದಿ: ಸಿಮೆಂಟ್ ತುಂಬಿದ ಟ್ರಕ್ ಪಲ್ಟಿ: ಆರು ಮಂದಿ ಸಾವು