Friday, 22nd November 2024

ಡಿ.8ರ ಭಾರತ ಬಂದ್​ಗೆ ಬೆಂಬಲ ನೀಡಿದ ಕೈ, ಎಎಪಿ ಮತ್ತು ಇತರೆ ಪಕ್ಷಗಳು

ನವದೆಹಲಿ: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆ ಗಳು ಕರೆ ನೀಡಿರುವ ಡಿ.8ರ ಭಾರತ ಬಂದ್​ಗೆ ಕಾಂಗ್ರೆಸ್, ಎಎಪಿ ಮತ್ತು ಇತರೆ ಕೆಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಭಾನುವಾರ ಸುದ್ದಿಗೋಷ್ಠಿ ನಡೆಸಿ, ರೈತರು ಕರೆ ನೀಡಿರುವ ಭಾರತ್ ಬಂದ್​ಗೆ ಪಕ್ಷ ‘ಹೃತ್ಪೂರ್ವಕ’ ಬೆಂಬಲ ನೀಡುತ್ತದೆ. ನಮ್ಮ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ನೇರವಾಗಿ ರೈತರ ಜತೆಗೇ ನಿಂತು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರೈತರ ಧ್ವನಿಗೆ ಓಗೊಡಲೇಬೇಕು. ಕರಾಳ ಕೃಷಿ ಕಾನೂನು ಹಿಂಪಡೆಯಬೇಕು. ರೈತ ಹಿತವನ್ನು ಕಾಪಾಡಬೇಕು. ಈ ಚಳಿಗಾಲದಲ್ಲೂ ಹಗಲು ರಾತ್ರಿ ಎನ್ನದೇ ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಧ್ವನಿಯನ್ನು ಸರ್ಕಾರ ಆಲಿಸುವುದಿಲ್ಲ ಎಂದಾದರೆ ಪ್ರತಿಭಟನೆ ತೀವ್ರಗೊಳಿಸುವುದೊಂದೇ ದಾರಿ ಎಂದು ಅವರು ಹೇಳಿದರು.

ಈ ನಡುವೆ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು, ದೇಶಾದ್ಯಂತ ಇರುವ ಎಎಪಿ ಕಾರ್ಯಕರ್ತರು ಡಿಸೆಂಬರ್ 8ರಂದು ಬಂದ್​ನಲ್ಲಿ ಪಾಲ್ಗೊಳ್ಳುತ್ತಾರೆ. ದೇಶವಾಸಿಗಳೆಲ್ಲರೂ ರೈತರ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.