ಒಟ್ಟಾವಾ: ಕೆನಡಾದಲ್ಲಿ ಬಂಧಿತನಾಗಿರುವ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (Khalistan Tiger Force)ನ ಮುಖ್ಯಸ್ಥ ಅರ್ಶ್ ದಲ್ಲಾ(Arsh Dalla) ಅಲಿಯಾಸ್ ಅರ್ಶ್ದೀಪ್ ಗಿಲ್ಗೆ ಜಾಮೀನು ಮಂಜೂರಾಗಿದೆ. 30,000 ಡಾಲರ್ನ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಲ್ಲಾನನ್ನು ಹಸ್ತಾಂತರಿಸಲು ಭಾರತ ಒತ್ತಾಯಿಸುತ್ತಿದ್ದರೂ ಜಾಮೀನು ತೀರ್ಪು ಹೊರ ಬಿದ್ದಿದೆ.
ಪ್ರಕರಣದ ಮುಂದಿನ ವಿಚಾರಣೆ 2025ರ ಫೆ. 24ರಂದು ನಡೆಯಲಿದೆ. ಖಲಿಸ್ತಾನಿ ಟೈಗರ್ ಫೋರ್ಸ್ನ ಹಂಗಾಮಿ ಮುಖ್ಯಸ್ಥ ಅರ್ಶ್ ದಲ್ಲಾನನ್ನು 2024ರ ಅ. 28ರಂದು ಒಂಟಾರಿಯೊದ ಮಿಲ್ಟನ್ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಭಾರತ ಸರ್ಕಾರ ಆತನನ್ನು ಹಸ್ತಾಂತರಿಸುವಂತೆ ಆಗ್ರಹಿಸುತ್ತಲೇ ಬಂದಿದೆ. 2023ರ ಜುಲೈಯಲ್ಲಿ ಭಾರತ ಸರ್ಕಾರವು ಆತನ ತಾತ್ಕಾಲಿಕ ಬಂಧನಕ್ಕಾಗಿ ಕೆನಡಾ ಸರ್ಕಾರವನ್ನು ವಿನಂತಿಸಿತ್ತು.
#BREAKING: Canada under pressure arrests India’s Most Wanted Gangster Arsh Dalla also known as Arshdeep Singh Gill in a firing case in Canada after a brief shootout. Dalla affiliated with terror group Khalistan Tiger Force and was close to Khalistani plumber Hardeep Singh Nijjar. pic.twitter.com/bdicasPzwa
— Aditya Raj Kaul (@AdityaRajKaul) November 10, 2024
ಇನ್ನು ಭಾರತ ನೀಡಿದ ಉಗ್ರರ ಪಟ್ಟಿಯಲ್ಲಿ ಅರ್ಶದೀಪ್ ದಲ್ಲಾ ಮೋಸ್ಟ್ ವಾಂಟೆಡ್. ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ನ ಆಪ್ತ ಸಹಾಯಕ ಅರ್ಶ್ ದಲ್ಲಾ ತನ್ನ ಸ್ಲೀಪರ್ ಸೆಲ್ ನೆಟ್ವರ್ಕ್ ಮೂಲಕ ಪಂಜಾಬ್ನಲ್ಲಿ ಅನೇಕ ಉದ್ದೇಶಿತ ಹತ್ಯೆಗಳನ್ನು ನಡೆಸಿದ್ದಾನೆ ಎಂಬ ಆರೋಪವಿದೆ. ಎನ್ಐಎ ಪ್ರಕಾರ, 2022ರಲ್ಲಿ ಡೇರಾ ಸಚ್ಚಾ ಸೌಧದ ಸದಸ್ಯ ಮನೋಹರ್ ಲಾಲ್ ಹತ್ಯೆಯಲ್ಲಿ ದಲ್ಲಾ ಮತ್ತು ನಿಜ್ಜರ್ ಕೈವಾಡ ಇದೆ ಎನ್ನಲಾಗಿದೆ.
ಅರ್ಶ್ ದಲ್ಲಾ ಯಾರು?
ದಲ್ಲಾ ಪಂಜಾಬ್ನ ಮೊಗಾ ಜಿಲ್ಲೆಯ ದಲಾ ಪ್ರದೇಶದವನು. ದಲ್ಲಾನ ಸ್ಲೀಪರ್ ಸೆಲ್ ನೆಟ್ವರ್ಕ್ 3 ಖಂಡಗಳಲ್ಲಿ ವ್ಯಾಪಿಸಿದೆ. ಉತ್ತರ ಅಮೆರಿಕಾದಲ್ಲಿ ಕೆನಡಾ ಮತ್ತು ಅಮೆರಿಕ, ಯುರೋಪ್ನ ಕೆಲವು ಭಾಗಗಳು ಮತ್ತು ಏಷ್ಯಾದ ದುಬೈ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ಗಳಲ್ಲಿ ಆತನ ಸೂಚನೆ ಮೇರೆಗೆ ಹಲವು ದುಷ್ಕೃತ್ಯಗಳು ನಡೆಯುತ್ತಿವೆ. ಆತನ ಅಪಾರ ಕ್ರಿಮಿನಲ್ ಕಾರ್ಯಾಚರಣೆಗೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್ಐ ಬೆಂಬಲ ಕೂಡ ಇದೆ ಎನ್ನಲಾಗಿದೆ. ಆತ ಪಾಕಿಸ್ತಾನದ ಗಡಿಯುದ್ದಕ್ಕೂ ಬಂದೂಕುಗಳನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳೀಯವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವನು 2020ರಲ್ಲಿ ಸ್ಟಡಿ ವೀಸಾದಲ್ಲಿ ಕೆನಡಾಕ್ಕೆ ತೆರಳಿದ್ದ. ಬಳಿಕ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಬದಲಾಗಿದ್ದ. ಕಳೆದ ವರ್ಷ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಉಸ್ತುವಾರಿ ವಹಿಸಿಕೊಂಡ ಬಳಿಕ ಆತನ ಚಟುವಟಿಕೆ ಇನ್ನಷ್ಟು ಹೆಚ್ಚಾಗಿದೆ. ಭಾರತ ಸರ್ಕಾರದಿಂದ ʼʼಅಪರಾಧಿ” ಎಂದು ಘೋಷಿಸಲ್ಪಟ್ಟ ದಲ್ಲಾನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ದಲ್ಲಾ ತನ್ನ ಪತ್ನಿ ಮತ್ತು ಅಪ್ರಾಪ್ತ ವಯಸ್ಕ ಮಗಳೊಂದಿಗೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗಿದೆ. 2017ರಂದು ಜಲಂಧರ್ನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ನೀಡಿದ ಪಾಸ್ಪೋರ್ಟ್ ಹೊಂದಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Arsh Dalla: ಕೆನಡಾದಲ್ಲಿ ಅರೆಸ್ಟ್ ಆಗಿರೋ ಖಲಿಸ್ತಾನಿ ಉಗ್ರ ಅರ್ಶ್ ದಲ್ಲಾ ಹಸ್ತಾಂತರಕ್ಕೆ ಭಾರತ ಮನವಿ