Wednesday, 4th December 2024

Fengal Cyclone: ಫೆಂಗಲ್‌ ಆರ್ಭಟಕ್ಕೆ ತತ್ತರಿಸಿದ ತಮಿಳುನಾಡು; ಆಟಿಕೆಗಳಂತೆ ಕೊಚ್ಚಿ ಹೋದ ವಾಹನಗಳು

Fengal Cyclone

ಚೆನ್ನೈ: ತಮಿಳುನಾಡು (Tamil Nadu) ಹಾಗೂ ಪುದುಚೇರಿ ಫೆಂಗಲ್‌ ಚಂಡಮಾರುತಕ್ಕೆ ಅಕ್ಷರಶಃ ನಲುಗಿ ಹೋಗಿವೆ (Fengal Cyclone). ಹಲವರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದರೆ. ಇನ್ನೂ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಹಲವೆಡೆ ಭೂ ಕುಸಿತ ಸಂಭವಿಸಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಹೆಚ್ಚು ಮಳೆ ಸಂಭವಿಸಿದ್ದರಿಂದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಸದ್ಯ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡುವ ಹೋಗುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video)

ಕೃಷ್ಣಗಿರಿಯ ಉತ್ತಂಗಿರಿ ಬಸ್ ನಿಲ್ದಾಣದಲ್ಲಿ ಹಲವು ಬಸ್‌ಗಳು ಮತ್ತು ಇತರ ವಾಹನಗಳು ನೀರಿನಲ್ಲಿ ಮುಳುಗುತ್ತಿರುವ ದೃಶ್ಯಗಳು ಭಾರಿ ಪ್ರವಾಹಕ್ಕೆ ಸಾಕ್ಷಿ. ವಿಡಿಯೊದಲ್ಲಿ ಕೆಲವು ಬಸ್ಸುಗಳು ಮತ್ತು ಕಾರುಗಳು ವೇಗವಾಗಿ ಹರಿಯುವ ಪ್ರವಾಹದಲ್ಲಿ ನಿಧಾನವಾಗಿ ಕೊಚ್ಚಿಹೋಗುವುದನ್ನು ಸಹ ಕಾಣಬಹುದು. ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಬೆಳಗ್ಗೆ 10 ಗಂಟೆಗೆ ಕೃಷ್ಣಗಿರಿಯ ಉತ್ತಂಗರೈನಲ್ಲಿ 503 ಮಿ.ಮೀ. ಮಳೆಯಾಗಿದೆ. ಧರ್ಮಪುರಿಯ ಹರೂರಿನಲ್ಲಿ 331 ಮಿ.ಮೀ. ಮಳೆ ದಾಖಲಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕರೆ ನಡೆಸಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯಲ್ಲಿ ಸತತ 14 ಗಂಟೆಗಳ ಕಾಲ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ್ದು, ಪುದುಚೇರಿಯಲ್ಲಿ ಪ್ರವಾಹದಲ್ಲಿ ಮುಳುಗಿದ್ದ ಮನೆಯೊಂದರಲ್ಲಿ ಸಿಲುಕಿದ್ದ ಶಿಶುವನ್ನು ಭಾರತೀಯ ಸೇನೆಯು ಸೋಮವಾರ ಮುಂಜಾನೆ ರಕ್ಷಿಸಿದೆ.

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಒಂದೇ ಕುಟುಂಬದ ಏಳು ಮಂದಿ ಭೂಮಿಯ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಈ ಸುದ್ದಿಯನ್ನೂ ಓದಿ: Fengal Cyclone: ಫೆಂಗಲ್‌ಗೆ ತಮಿಳುನಾಡು ತತ್ತರ… ಭಾರೀ ಭೂಕುಸಿತ; ಏಳು ಮಂದಿ ನಾಪತ್ತೆ