Sunday, 15th December 2024

Pushpa 2 Movie: ರಿಲೀಸ್‌ಗೆ ಮೊದಲೇ ಕೋಟಿ ಕೋಟಿ ರೂ. ಬಾಚಿದ ‘ಪುಷ್ಪ 2’ ಚಿತ್ರ; ಅಡ್ವಾನ್ಸ್‌ ಬುಕಿಂಗ್‌ನಿಂದ ಗಳಿಸಿದ್ದೆಷ್ಟು?

Pushpa 2

ಹೈದರಾಬಾದ್‌: ದೇಶಾದ್ಯಂತ ʼಪುಷ್ಪʼ ಬಿರುಗಾಳಿ ಬೀಸಲು ದಿನಗಣನೆ ಅರಂಭವಾಗಿದೆ. ಅದಾಗಲೇ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಹೌದು, ಸುಕುಮಾರ್‌ (Sukumar) ನಿರ್ದೇಶನದ, ಅಲ್ಲು ಅರ್ಜುನ್‌ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ 2’ ಚಿತ್ರ (Pushpa 2 Movie) ಡಿ. 5ರಂದು ರಿಲೀಸ್‌ ಆಗಲಿದ್ದು, ಈಗಾಗಲೇ ಸೂಪರ್‌ ಹಿಟ್‌ ಆಗುವ ಸೂಚನೆ ನೀಡಿದೆ. ಸೂಪರ್‌ ಹಿಟ್‌ ಅಗುವುದು ಪಿಕ್ಸ್‌, ಯಾವೆಲ್ಲ ಚಿತ್ರಗಳ ದಾಖಲೆ ಮುರಿಯಲಿದೆ ಎನ್ನುವುದಷ್ಟೇ ಸದ್ಯಕ್ಕೆ ಮೂಡಿರುವ ಕುತೂಹಲ. 2021ರ ಸೂಪರ್‌ ಹಿಟ್‌ ʼಪುಷ್ಪʼ ಸಿನಿಮಾದ ಮುಂದುವರಿದ ಭಾಗವಾಗಿರುವ ಈ ʼಪುಷ್ಪ 2: ದಿ ರೂಲ್‌ʼ ಅಡ್ವಾನ್ಸ್‌ ಟಿಕೆಕಟ್‌ ಬುಕಿಂಗ್‌ನಿಂದಲೇ ಕೋಟಿಗಟ್ಟಲೆ ಗಳಿಕೆ ಮಾಡಿದೆ.

ʼಪುಷ್ಪ 2ʼ ಕ್ರೇಜ್‌ ಎಷ್ಟರ ಮಟ್ಟಿಗೆ ಇದೆ ಎಂದರೆ ಅಡ್ವಾನ್ಸ್‌ ಬುಕಿಂಗ್‌ನಿಂದ ಈಗಾಗಲೇ ವಿಶ್ವಾದ್ಯಂತ ಸುಮಾರು 42.50 ಕೋಟಿ ರೂ. ಬಾಚಿಕೊಂಡಿದೆ ಎಂದು ಮೂಲಗಳು ತಿಳಿಸಿದೆ.

ಹೀಗಿದೆ ಅಂಕಿ-ಅಂಶ

ವರದಿಯೊಂದರ ಪ್ರಕಾರ ಅಡ್ವಾನ್ಸ್‌ ಟಿಕೆಟ್‌ ಬುಕಿಂಗ್‌ನಿಂದ ʼಪುಷ್ಪ 2ʼ ದೇಶಾದ್ಯಂತ 25.57 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ವರ್ಷನ್‌ನ 16 ಸಾವಿರ ಪ್ರದರ್ಶನದ ಸುಮಾರು 8 ಲಕ್ಷ ಟಿಕೆಟ್‌ ಬಿಕರಿಯಾಗಿದೆ. ಇನ್ನು ಅಮೆರಿಕದಲ್ಲಿ ಅಡ್ವಾನ್ಸ್‌ ಟಿಕೆಟ್‌ ಮೂಲಕ 2 ಮಿಲಿಯನ್‌ ಡಾಲರ್‌ (16.93 ಕೋಟಿ ರೂ.) ಹರಿದು ಬಂದಿದೆ. ಅಮೆರಿಕದ 1,010 ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದ್ದು, 65 ಸಾವಿರಕ್ಕಿಂತ ಅಧಿಕ ಟಿಕೆಟ್‌ ಸೇಲಾಗಿದೆ.

ಅಡ್ವಾನ್ಸ್‌ ಬುಕಿಂಗ್‌ನಲ್ಲಿ ಕನ್ನಡದ ಹೆಮ್ಮೆಯ, ಪ್ರಶಾಂತ್‌ ನೀಲ್‌-ಯಶ್‌-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ ʼಕೆಜಿಎಫ್: ಚಾಪ್ಟರ್ 2ʼ 80 ಕೋಟಿ ರೂ., ರಾಜಮೌಳಿ ನಿರ್ದೇಶನದ ಪ್ರಭಾಸ್‌-ಅನುಷ್ಕಾ ಶೆಟ್ಟಿ ನಟನೆಯ ʼಬಾಹುಬಲಿ 2: ದಿ ಕನ್ ಕ್ಲೂಷನ್ʼ 90 ಕೋಟಿ ರೂ. ಗಳಿಸಿತ್ತು. ʼಪುಷ್ಪ 2ʼ ಈಗಾಗಲೇ ಗಳಿಸಿದ ಮೊತ್ತವನ್ನು ಗಮನಿಸಿದರೆ ಅದೇ ಸಂಖ್ಯೆಗೆ ತಲುಪುವ ಸಾಧ್ಯತೆ ಇದೆ ಎಂದು ಸಿನಿಮಾ ತಜ್ಞರು ಊಹಿಸಿದ್ದಾರೆ.

ಚಿತ್ರದ ಅವಧಿ ಸುಮಾರು 3 ಗಂಟೆ 20 ನಿಮಿಷ ಇರಲಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಜತೆಗೆ ಫಹದ್‌ ಫಾಸಿಲ್‌, ಸುನೀಲ್‌, ಡಾಲಿ ಧನಂಜಯ್‌, ಅನಸೂಯ ಅವರ ಪಾತ್ರಗಳೂ ಮುಂದುವರಿಯಲಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೈಲರ್‌, ಹಾಡುಗಳು ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿವೆ. ಕನ್ನಡತಿ ಶ್ರೀಲೀಲಾ ಹೆಜ್ಜೆ ಹಾಕಿರುವ ಐಟಂ ಸಾಂಗ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು ದಾಖಲೆಯ ವ್ಯೂಸ್‌ ಪಡೆದುಕೊಂಡಿದೆ. ಜತೆಗೆ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿರುವ ʼಪೀಲಿಂಗ್ಸ್‌ʼ ಹೆಸರಿನ ಹಾಡು ಡಿ. 1ರಂದು ಔಟ್‌ ಆಗಿದ್ದು, ಗಮನ ಸೆಳೆಯುತ್ತಿದೆ. ಈ ಹಾಡಿನಲ್ಲಿ ರಶ್ಮಿಕಾ ಗ್ಲಾಮರ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಲ್ಲು ಅರ್ಜುನ್‌ ಜತೆಗೆ ಭರ್ಜರಿಯಾಗಿ ಸ್ಟೆಪ್‌ ಹಾಕಿ ಮೋಡಿ ಮಾಡಿದ್ದಾರೆ. ರಶ್ಮಿಕಾ ಡ್ಯಾನ್ಸ್‌ಗೆ ವೀಕ್ಷಕರು ಬಹು ಪರಾಕ್‌ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Movie: ‘ಕಿಸಿಕ್‌’ ಎನ್ನುತ್ತಲೇ ಅಲ್ಲು ಅರ್ಜುನ್‌ ಜತೆ ಸೊಂಟ ಬಳುಕಿಸಿದ ಶ್ರೀಲೀಲಾ; ‘ಪುಷ್ಪ 2’ ಚಿತ್ರದ ಐಟಂ ಸಾಂಗ್‌ ಔಟ್‌