Thursday, 5th December 2024

Air India Flight: ಅಂಡಮಾನ್- ನಿಕೋಬಾರ್‌ ಪ್ರವಾಸಕ್ಕೆ ಹೋಗುವವರಿಗೆ ಸಿಹಿ ಸುದ್ದಿ

Air India Flight

ಬೆಂಗಳೂರು: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್-ನಿಕೋಬಾರ್ (Andaman Nicobar) ಪ್ರವಾಸ ಹೋಗುವ ಬೆಂಗಳೂರು (Bengaluru news) ನಗರದ ಜನರಿಗೆ ಸಿಹಿಸುದ್ದಿ (Good news) ನೀಡಲಾಗಿದೆ. ಏರ್‌ ಇಂಡಿಯಾ (Air India Flight) ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ನಡುವೆ ಪ್ರತಿದಿನದ ನೇರ ವಿಮಾನ ಸೇವೆಗೆ ಚಾಲನೆ ನೀಡಿದೆ.

ಡಿಸೆಂಬರ್ 1ರ ಭಾನುವಾರದಿಂದ ಬೆಂಗಳೂರು-ಶ್ರೀ ವಿಜಯಪುರಂ (ಪೋರ್ಟ್ ಬ್ಲೇರ್) ನಡುವೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೇವೆ ಆರಂಭಿಸಿದೆ. ಪ್ರತಿದಿನದ ನೇರ ವಿಮಾನ ಸೇವೆ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಿದೆ. ಬೆಂಗಳೂರು-ಪೋರ್ಟ್ ಬ್ಲೇರ್ ನಡುವಿನ ಉದ್ಘಾಟನಾ ವಿಮಾನ ಡಿಸೆಂಬರ್ 1ರ ಭಾನುವಾರ ಬೆಳಗ್ಗೆ 10.50ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ಟೇಕಾಫ್ ಆಯಿತು. ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 1, 2025ರಿಂದ ಬೆಂಗಳೂರು-ಚೆನ್ನೈ ನೇರ ವಿಮಾನ ಸೇವೆ ಆರಂಭಿಸುವುದಾಗಿ ಈ ಸಂದರ್ಭದಲ್ಲಿ ಘೋಷಣೆ ಮಾಡಿತು.

ವೇಳಾಪಟ್ಟಿ: ಬೆಂಗಳೂರು-ಪೋರ್ಟ್ ಬ್ಲೇರ್ ನಡುವಿನ ಪ್ರತಿದಿನದ ನೇರ ವಿಮಾನ ಬೆಂಗಳೂರು ನಗರಿಂದ ಬೆಳಗ್ಗೆ 10.50ಕ್ಕೆ ಹೊರಡಲಿದೆ. ಮಧ್ಯಾಹ್ನ 1.15ಕ್ಕೆ ಪೋರ್ಟ್ ಬ್ಲೇರ್ ತಲುಪಲಿದೆ. ವಾಪಸ್ ಆಗುವ ಮಾರ್ಗದಲ್ಲಿ ಮಧ್ಯಾಹ್ನ 1.50ಕ್ಕೆ ಪೋರ್ಟ್ ಬ್ಲೇರ್‌ನಿಂದ ವಿಮಾನ ಹೊರಡಲಿದ್ದು, ಬೆಂಗಳೂರಿಗೆ ಸಂಜೆ 4.20ಕ್ಕೆ ತಲುಪಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಬೆಂಗಳೂರು ಪ್ರಮುಖ ಹಬ್ ಆಗಿದೆ. ವಾರಕ್ಕೆ 374 ವಿಮಾನಗಳು ನಗರದಿಂದ ಹಾರಾಟ ನಡೆಸುತ್ತವೆ. ಇವುಗಳಲ್ಲಿ 25 ಪ್ರಾದೇಶಿಕ ಮತ್ತು ಅಬುದಾಬಿ ಮತ್ತು ದಮನ್‌ಗೆ ಸಹ ವಿಮಾನ ಸೇವೆ ಇದೆ. ಈಗ ಮತ್ತೊಂದು ಮಾರ್ಗದಲ್ಲಿ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್-ನಿಕೋಬಾರ್‌ನ ರಾಜಧಾನಿ ಪೋರ್ಟ್‌ ಬ್ಲೇರ್‌. ಕೇಂದ್ರ ಸರ್ಕಾರ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಿದೆ. ಈ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಐತಿಹಾಸಿಕ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನದಿಂದ ಪ್ರೇರಿತರಾಗಿ, ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು, ಇಂದು ನಾವು ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಏರ್‌ ಇಂಡಿಯಾಗೆ ₹80 ಲಕ್ಷ ದಂಡ