Wednesday, 4th December 2024

Tripura Violence :ತ್ರಿಪುರಾದಲ್ಲಿ ಬಾಂಗ್ಲಾ ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ- 7 ಜನ ಅರೆಸ್ಟ್‌; 3 ಪೊಲೀಸರು ಸಸ್ಪೆಂಡ್‌

Tripura violence

ಅಗರ್ತಲಾ: ಸೋಮವಾರ ತ್ರಿಪುರಾದಲ್ಲಿ‌ (Tripura violence) ಬಾಂಗ್ಲಾದೇಶ ಸರ್ಕಾರ (Bangladesh Government) ವಿರುದ್ಧ ನಡೆದ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ಅಗರ್ತಲಾದಲ್ಲಿರುವ ಬಾಂಗ್ಲಾದೇಶ ಸಹಾಯಕ ಹೈ ಕಮಿಷನ್‌ (assistant high commission) ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿದ್ದ ಪೊಲೀಸರು ಘಟನೆಯನ್ನು ತಡೆಯಲು ವಿಫಲರಾದ್ದರಿಂದ  ಭದ್ರತಾ ಉಲ್ಲಂಘನೆಯ ಆರೋಪದ ಮೇರೆಗೆ ತ್ರಿಪುರಾ ಸರ್ಕಾರವು ಮಂಗಳವಾರ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ, ಹಾಗೂ ಏಳು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ನಿನ್ನೆ ಅಗರ್ತಲಾದಲ್ಲಿ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬಂಧನವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 50 ಜನರು ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಆವರಣವನ್ನು ಪ್ರವೇಶಿಸಿದರು. ಇದನ್ನು ಬಾಂಗ್ಲಾ ಸರ್ಕಾರ ಖಂಡಿಸಿತ್ತು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ವಿಫಲಾವಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಭಾರತ ಸರ್ಕಾರಕ್ಕೆ ಹೇಳಿತ್ತು.

ಇದೀಗ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಭದ್ರತಾ ಲೋಪದ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಅಮಾನುತುಗೊಳಿಸಿ ತ್ರಿಪುರಾ ಸರ್ಕಾರ ಆದೇಶ ಹೊರಡಿಸಿದೆ. ಮೂವರು ಸಬ್ ಇನ್ಸ್‌ಪೆಕ್ಟರ್‌ಗಳಾದ ದಿಲು ಜಮಾತಿಯಾ, ದೇಬಬ್ರತ ಸಿನ್ಹಾ ಮತ್ತು ಜಾಯ್ನಾಲ್ ಹೊಸೈನ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಸಹಾಯಕ ಕಮಾಂಡೆಂಟ್ ಕಾಂತಿ ನಾಥ್ ಘೋಷ್ ಅವರನ್ನು ಅವರ ಪೋಸ್ಟಿಂಗ್‌ನಿಂದ ಹಿಂಪಡೆಯಲಾಗಿದೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ ರಾಜತಾಂತ್ರಿಕ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಗುರಿಯಾಗಿಸಿಕೊಳ್ಳಬಾರದು. ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಮತ್ತು ದೇಶದಲ್ಲಿರುವ ಅವರ ಸಹಾಯಕ ಹೈಕಮಿಷನ್‌ಗಳಿಗೆ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ : Bangladesh Unrest: ಕೋರ್ಟ್‌ ವಿಚಾರಣೆಗೆ ಮುನ್ನವೇ ಚಿನ್ಮಯ್‌ ದಾಸ್‌ ಪರ ವಕೀಲನ ಮೇಲೆ ಡೆಡ್ಲಿ ಅಟ್ಯಾಕ್‌!