ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಬೆನ್ನಲ್ಲೆ ಗುಜರಾತ್ ತಂಡದ ಬ್ಯಾಟ್ಸ್ಮನ್ ಊರ್ವಿಲ್ ಪಟೇಲ್ (Urvil Patel) ಅವರು ಮತ್ತೊಂದು ವೇಗದ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ತಮ್ಮನ್ನು ಖರರೀದಿಸದ ಫ್ರಾಂಚೈಸಿಗಳಿಗೆ ತಿರುಗೇಟು ನೀಡಿದ್ದಾರೆ
ಮಂಗಳವಾರ ಇಂದೋರ್ನ ಎಮೆರಾಯ್ಡ್ ಹೈಸ್ಕೂಲ್ ಗ್ರೌಂಡ್ನಲ್ಲಿ ಉತ್ತರಾಖಂಡ ನೀಡಿದ್ದ 183 ರನ್ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಊರ್ವಿಲ್ ಪಟೇಲ್ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು, ಕೇವಲ 36 ಎಸೆತಗಳಲ್ಲಿಯೇ ಸ್ಪೋಟಕ ಶತಕವನ್ನು ಸಿಡಿಸಿದರು. ಉತ್ತರಾಖಂಡ ಬೌಲರ್ಗಳನ್ನು ಬೆಂಡೆತ್ತಿದ್ದ ಊರ್ವಿಲ್ ಪಟೇಲ್, ತಾವು ಆಡಿದ 41 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್ಗಳು ಹಾಗೂ 8 ಬೌಂಡಿಗಳೊಂದಿಗೆ ಅಜೇಯ 115 ರನ್ಗಳನ್ನು ಸಿಡಿಸಿದರು. ಆ ಮೂಲಕ ಗುಜರಾತ್ ತಂಡದ 8 ವಿಕೆಟ್ಗಳ ಗೆಲುವಿನಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದರು.
ಅತ್ಯಂತ ವೇಗದ ಶತಕ ಸಿಡಿಸಿದ್ದ ಊರ್ವಿಲ್ ಪಟೇಲ್
ಕಳೆದ ಎರಡು ದಿನಗಳ ಹಿಂದಷ್ಟೆ ಊರ್ವಿಲ್ ಪಟೇಲ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿಯೇ ಅತ್ಯಂತ ವೇಗದ ಶತಕವನ್ನು ಸಿಡಿಸಿದ್ದರು. ಆ ಮೂಲಕ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇವರು ನವೆಂಬರ್ 27 ರಂದು ಇಂದೋರ್ನಲ್ಲಿ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಅವರು ಸ್ಪೋಟಕ ಶತಕ ಸಿಡಿಸಿದ್ದರು. ಇವರು ಆಡಿದ್ದ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಮೂಲಕ 2018ರಲ್ಲಿ 32 ಎಸೆತಗಳಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಊರ್ವಿಲ್ ಪಟೇಲ್ 113 ರನ್ಗಳಿಗೆ ಅಜೇಯರಾಗಿ ಉಳಿದಿದ್ದರು. ಈ ದಾಖಲೆಯ ಇನಿಂಗ್ಸ್ನಲ್ಲಿ ಊರ್ವಿಲ್ ಪಟೇಲ್ ಅವರು 12 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದ್ದರು.
ಗುಜರಾತ್ ತಂಡಕ್ಕೆ 8 ವಿಕೆಟ್ಗಳ
ಉತ್ತರಾಖಂಡ ನೀಡಿದ್ದ 183 ರನ್ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ತಂಡ ಊರ್ವಿಲ್ ಪಟೇಲ್ ಅವರ ಸ್ಪೋಟಕ ಶತಕದ ಬಲದಿಂದ ಕೇವಲ 13.1 ಓವರ್ಗಳಿಗೆ ಎರಡು ವಿಕೆಟ್ಗಳ ನಷ್ಟಕ್ಕೆ 185 ರನ್ಗಳನ್ನು ಗಳಿಸಿ ಗೆಲುವಿನ ದಡ ಸೇರಿತು. ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ ಅಜೇಯ 28 ರನ್ಗಳನ್ನು ಗಳಿಸಿದರು. ಅಂದ ಹಾಗೆ ಟಿ20 ಕ್ರಿಕೆಟ್ನಲ್ಲಿ ಊರ್ವಿಲ್ ಪಟೇಲ್ ಅವರು ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಅಜೇಯ 115 ರನ್ಗಳು ಗುಜರಾತ್ ಆಟಗಾರನ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಕೊನೆಯ ಪಂದ್ಯದಲ್ಲಿ 113 ರನ್ಗಳ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ
ಊರ್ವಿಲ್ ಪಟೇಲ್ ಯಾರು?
ಬರೋಡಾ ರಾಜ್ಯದ ಮೆಹ್ಸಾನಾ ಮೂಲದ ಊರ್ವಿಲ್ ಪಟೇಲ್ ಅವರು 2018ರಲ್ಲಿ ರಾಜಕೋಟ್ನಲ್ಲಿ ಮುಂಬೈ ಎದುರು ಬರೋಡಾ ಎದುರು ದೇಶಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದೇ ಅವರು ಲಿಸ್ಟ್ ಎ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದರು. ಆದರೆ, ರಣಜಿ ಟ್ರೋಫಿ ಟೂರ್ನಿಯ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಅವರು ಆರು ವರ್ಷಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಗುಜರಾತ್ ಟೈಟನ್ಸ್ನಲ್ಲಿದ್ದ ಊರ್ವಿಲ್
ಊರ್ವಿಲ್ ಪಟೇಲ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಮೂಲ ಬೆಳೆ 20 ಲಕ್ಷ ರೂ. ಗಳಿಗೆ ಗುಜರಾತ್ ಟೈಟನ್ಸ್ ಸೇರಿದ್ದರು. ಆದರೆ, ಅವರು ಟೈಟನ್ಸ್ ಪರ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ, ಅವರನ್ನು 2024ರ ಐಪಿಎಲ್ ಮಿನಿ ಹರಾಜಿಗೆ ಬಿಡುಗಡೆ ಮಾಡಲಾಗಿತ್ತು. ಅವರು ಇಲ್ಲಿಯವರೆಗೂ ಆಡಿದ 44 ಟಿ20 ಪಂದ್ಯಗಳಿಂದ 988 ರನ್ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಈ ಸುದ್ದಿಯನ್ನು ಓದಿ: ಸಯ್ಯದ್ ಮುಷ್ತಾಕ್ ಟೂರ್ನಿ; ಮುಂಬೈ ತಂಡ ಸೇರಿದ ಸೂರ್ಯಕುಮಾರ್, ದುಬೆ