ಅಡಿಲೇಡ್ : ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ಡಿಸೆಂಬರ್ 6 ರಂದು ಅಡಿಲೇಡ್ನ ದಿ ಓವಲ್ ಮೈದಾನದಲ್ಲಿ ನಡೆಯಲಿರುವ ಹೊನಲು ಬೆಳಕಿನ ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಮಂಗಳವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಎರಡನೇ ಟೆಸ್ಟ್ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರನ್ನು ಅಲೆಕ್ಸ್ ಕೇರಿ ಶ್ಲಾಘಿಸಿದ್ದಾರೆ. ಭಾರತ ತಂಡ ಪರ್ತ್ ಟೆಸ್ಟ್ ಗೆಲ್ಲುವಲ್ಲಿ ಜಸ್‌ಪ್ರೀತ್ ಬುಮ್ರಾ ಮಹತ್ತರ ಪಾತ್ರವನ್ನು ವಹಿಸಿದ್ದರು ಎಂದು ಅವರು ಹೇಳಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಜಸ್‌ಪ್ರೀತ್ ಬುಮ್ರಾ 8 ವಿಕೆಟ್‌ಗಳನ್ನು ಪಡೆದಿದ್ದರು.
“ನಿಸ್ಸಂಶಯವಾಗಿ ಜಸ್‌ಪ್ರೀತ್ ಬುಮ್ರಾ ಅದ್ಭುತ ಬೌಲರ್, ಅವರ ವಿರುದ್ಧ ಆಡಿದ ಅನುಭವ ನಮಗಿದೆ. ನಮ್ಮ ಬ್ಯಾಟರ್‌ಗಳು ವಿಶ್ವ ದರ್ಜೆಯವರಾಗಿದ್ದಾರೆ, ನಮಗೆ ಜಸ್‌ಪ್ರೀತ್ ಬುಮ್ರಾ ಅವರನ್ನು ಎದುರಿಸುವ ಕಲೆ ಗೊತ್ತಿದೆ. ಎರಡನೇ ಟೆಸ್ಟ್‌ಗಾಗಿ ನಾವು ಸನ್ನದ್ಧರಾಗಿದ್ದೇವೆ,” ಎಂದು ತಿಳಿಸಿದ್ದಾರೆ.
“ನಮಗೆ ನಮ್ಮ ಬ್ಯಾಟ್ಸ್‌ಮನ್‌ಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. ಟ್ರಾವಿಸ್ ಹೆಡ್ ಸೇರಿದಂತೆ ಕೆಲ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ಗೆ ಮರಳಿದ್ದಾರೆ. ಪಿಂಕ್ ಬಾಲ್ ಪಂದ್ಯಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಟೀಮ್ ಇಂಡಿಯಾ 36 ರನ್ಗಳಿಗೆ ಆಲೌಟ್ ಆಗಿರುವುದನ್ನು ಅಲೆಕ್ಸ್ ಕೇರಿ ನೆನಪಿಸಿದ್ದಾರೆ. “2020ರಲ್ಲಿ ಆಡಿಲೇಡ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಕೇವಲ 36 ರನ್ಗಳಿಗೆ ಆಲೌಟ್ ಆಗಿತ್ತು. ಅದು ನನಗೆ ಇನ್ನೂ ನೆನಪಿದೆ ಎಂದು ಕೇರಿ ವ್ಯಂಗ್ಯವಾಡಿದ್ದಾರೆ. ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಆಡಿದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ಇದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ನಾವು ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲಿದ್ದೇವೆ,” ಎಂದು ಅಲೆಕ್ಸ್ ಕ್ಯಾರಿ ತಿಳಿಸಿದ್ದಾರೆ.
ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ 295 ರನ್‌ಗಳಿಂದ ಭಾರತ ತಂಡ ಆತಿಥೇಯರನ್ನು 295 ರನ್‌ಗಳಿಂದ ಸೋಲಿಸಿತ್ತು. ಕಳಪೆ ಫಾರ್ಮಿನಿಂದ ಹೊರಬಂದಿರುವ ಕೊಹ್ಲಿ, ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟ ಆಡುತ್ತಿದ್ದು, ತಂಡಕ್ಕೆ ಇನ್ನಷ್ಟು ಬಲ ತುಂಬಲು ರೋಹಿತ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. ಅಡಿಲೇಡ್‌ನಲ್ಲಿ ನಡೆಯುವ ಪಂದ್ಯದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಈ ಸುದ್ದಿಯನ್ನೂ ಓದಿ : IND vs AUS: ಅಡಿಲೇಡ್ ಟೆಸ್ಟ್‌ನಲ್ಲಿ ಫಿಲಿಪ್ ಹ್ಯೂಸ್ ಸ್ಮರಣೆ