ಇಂದೋರ್: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಆಟಗಾರ ಶ್ರೇಯಸ್ ಗೋಪಾಲ್ (Shreyas Gopal) ಅವರು ಮಂಗಳವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್ಎಂಎಟಿ) ಟೂರ್ನಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಬರೆದಿದ್ದಾರೆ. 31ರ ವಯಸ್ಸಿನ ಕರ್ನಾಟಕ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಆರಂಭಿಕ ಆಟಗಾರ ಶಾಶ್ವತ್ ರಾವತ್ ಅವರನ್ನು ಔಟ್ ಮಾಡಿದರು, ನಂತರ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯರಂತಹ ದೊಡ್ಡ ಆಟಗಾರರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
2023-24ರ ಸಾಲಿನಲ್ಲಿ ಕೇರಳ ಪರ ಆಡಿದ್ದ ಶ್ರೇಯಸ್ ಗೋಪಾಲ್, ಈ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. 170 ರನ್ಗಳ ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೆ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಸಂಕಷ್ಟ ತಂದೊಡ್ಡಿದರು. 11ನೇ ಓವರ್ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಶಾಶ್ವತ್ ರಾವತ್ ಅವರನ್ನು ಶ್ರೇಯಸ್ ಗೋಪಾಲ್ ಔಟ್ ಮಾಡಿದರು. ರಾವತ್ 36 ಎಸೆತಗಳಲ್ಲಿ ಬಿರುಸಿನ 63 ರನ್ ಗಳಿಸಿ ಔಟಾದರು. ಅಮೋಘ ಫಾರ್ಮ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಇದರ ಮುಂದಿನ ಎಸೆತದಲ್ಲಿ ಕೃಣಾಲ್ ಪಾಂಡ್ಯ ಅವರನ್ನು ಕೂಡ ಶ್ರೇಯಸ್ ಗೋಪಾಲ್ ಪೆವಿಲಿಯನ್ಗೆ ಕಳುಹಿಸುವಲ್ಲಿ ಸಫಲರಾದರು.
ಸಿಎಸ್ಕೆ ಪಾಲಾದ ಶ್ರೇಯಸ್ ಗೋಪಾಲ್
ಕಳೆದ ವಾರ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಶ್ರೇಯಸ್ ಗೋಪಾಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಖರೀದಿಸಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋಪಾಲ್ ಇದುವರೆಗೆ ಒಟ್ಟು 10 ವಿಕೆಟ್ ಪಡೆದಿದ್ದಾರೆ. ಕಳೆದ ತಿಂಗಳು 2024-25ರ ರಣಜಿ ಟ್ರೋಫಿ ಋತುವಿನಲ್ಲಿ ಕರ್ನಾಟಕಕ್ಕೆ ಮೊದಲ ಜಯವನ್ನು ಪಡೆಯಲು ಸಹಾಯ ಮಾಡುವಲ್ಲಿ ಶ್ರೇಯಸ್ ಗೋಪಾಲ್ ಪ್ರಮುಖ ಪಾತ್ರ ವಹಿಸಿದ್ದರು. ಹ್ಯಾಟ್ರಿಕ್ ವಿಕೆಟ್ ಬಳಿಕ ಅನುಭವಿ ಲೆಗ್ ಸ್ಪಿನ್ನರ್ ತಮ್ಮ ಮುಂದಿನ ಓವರ್ನಲ್ಲಿ ಭಾನು ಪಾನಿಯಾ ಅವರನ್ನು ಕೂಡ ಔಟ್ ಮಾಡಿದರು.
ಈ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಬೌಲ್ ಮಾಡಿದ ನಾಲ್ಕು ಓವರ್ಗಳಲ್ಲಿ ಕೇವಲ 19 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದಾರೆ. ಇವರ ಜೊತೆಗೆ ವೈಶಾಖ್ ವಿಜಯ್ಕುಮಾರ್ ಹಾಗೂ ವಿದ್ಯಾದರ್ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಕರ್ನಾಟಕ ತಂಡಕ್ಕೆ 4 ವಿಕೆಟ್ ಸೋಲು
ಶ್ರೇಯಸ್ ಗೋಪಾಲ್ ಅವರ ಹ್ಯಾಟ್ರಿಕ್ ಸಾಧನೆಯ ಹೊರತಾಗಿಯೂ ಕರ್ನಾಟಕ ತಂಡ 4 ವಿಕೆಟ್ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ, ಅಭಿನವ್ ಮನೋಹರ್ (56 ರನ್) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ಗಳ ನಷ್ಟಕ್ಕೆ 169 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಬರೋಡಾ ತಂಡಕ್ಕೆ 170 ರನ್ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಬರೋಡಾ ತಂಡ, ಶಾಶ್ವತ್ ರಾವತ್ (63 ರನ್) ಅವರ ಅರ್ಧಶತಕದ ಬಲದಿಂದ ಇನೂ 7 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಈ ಸುದ್ದಿಯನ್ನು ಓದಿ: Syed Mushtaq Ali Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಜಯ