Wednesday, 4th December 2024

Syed Ahmed Bukhari: ಹಿಂದೂಗಳ ಮೇಲಿನ ದಾಳಿ ನಿಲ್ಲಿಸಿ; ಬಾಂಗ್ಲಾದೇಶಕ್ಕೆ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಆಗ್ರಹ

Syed Ahmed Bukhari

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದ್ದು, ಅಲ್ಲಿನ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ಈ ಮಧ್ಯೆ ಹಿಂದೂಗಳ ಮೇಲೆ ನಡೆಯುವ ಹಲ್ಲೆಗಳನ್ನು ನಿಲ್ಲಿಸುವಂತೆ ದಿಲ್ಲಿಯ ಜಾಮಾ ಮಸೀದಿ (Delhi’s Jama Masjid)ಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ (Syed Ahmed Bukhari) ಮಂಗಳವಾರ (ಡಿ. 3) ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಮೂಲಕ ದೇಶದ ಮಧ್ಯಂತರ ಸರ್ಕಾರದ ಉಸ್ತುವಾರು ವಹಿಸಿಕೊಂಡಿರುವ ಮುಹಮ್ಮದ್ ಯೂನುಸ್ ಅವರ ಖ್ಯಾತಿ ಕಳಂಕರಹಿತವಾಗಿ ಉಳಿಯಬೇಕು ಎಂದು ಅವರು ಹೇಳಿದ್ದಾರೆ.

“ಬಾಂಗ್ಲಾದೇಶದ ಪ್ರಸ್ತುತ ಮುಖ್ಯಸ್ಥ, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರು ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಯಾವುದೇ ಅನ್ಯಾಯಗಳನ್ನು ತಡೆಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಅವರು ತಮ್ಮ ಅಂತಾರಾಷ್ಟ್ರೀಯ ಖ್ಯಾತಿಗೆ ಕಳಂಕವಾಗದಂತೆ ನೋಡಿಕೊಳ್ಳಬೇಕುʼʼ ಎಂದು ಹೇಳಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ರಚನೆಯಾದಾಗಿನಿಂದಲೂ 2 ದೇಶಗಳು ನಿಕಟ ಸಂಬಂಧವನ್ನು ಕಾಯ್ದುಕೊಂಡಿವೆ ಎಂದು ಅಹ್ಮದ್ ಬುಖಾರಿ ಅಭಿಪ್ರಾಯಪಟ್ಟಿದ್ದಾರೆ. “ಬಾಂಗ್ಲಾದೇಶದ ಸ್ಥಾಪನೆಯ ನಂತರ, ನಮ್ಮ ರಾಷ್ಟ್ರೀಯ ನಾಯಕತ್ವ, ಮಾಧ್ಯಮ, ನಾಗರಿಕ ಸಮಾಜ ಮತ್ತು ಪ್ರಭಾವಿ ವಲಯಗಳು ಶೇಖ್ ಮುಜಿಬುರ್ ರಹಮಾನ್, ಅವರ ಮಗಳು ಶೇಖ್ ಹಸೀನಾ ವಾಜಿದ್ ಮತ್ತು ಅವರ ಪಕ್ಷ ಅವಾಮಿ ಲೀಗ್‌ನೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡಿವೆ. ಬಾಂಗ್ಲಾದೇಶವು ಯಾವಾಗಲೂ ನಮ್ಮೊಂದಿಗೆ ನಿಕಟ ಮಿತ್ರನಾಗಿ ನಿಂತಿದೆ” ಎಂದು ಅವರು ತಿಳಿಸಿದ್ದಾರೆ.

ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಆ ದೇಶದಲ್ಲಿ ಅಶಾಂತಿ ತಲೆದೋರಿದೆ ಎಂದು ಅವರು ಹೇಳಿದ್ದಾರೆ. “ಹಿಂದೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಅನ್ಯಾಯಗಳು, ಹಲ್ಲೆಗಳು ಮತ್ತು ಕ್ರಮಗಳು ಖಂಡನೀಯ ಮತ್ತು ತಕ್ಷಣವೇ ನಿಲ್ಲಿಸಬೇಕು. ಅಂತಹ ಕ್ರಮಗಳಿಗೆ ಯಾವುದೇ ಸಮರ್ಥನೆ ಇಲ್ಲ. ಪ್ರತಿ ನೈಸರ್ಗಿಕ ವಿಪತ್ತಿನಲ್ಲಿ ನಾವು ಅವರೊಂದಿಗೆ ಮೊದಲು ನಿಂತಿದ್ದೇವೆ” ಎಂದು ಶಾಹಿ ಇಮಾಮ್ ಹೇಳಿದ್ದಾರೆ. ಕಳೆದ ತಿಂಗಳು ಬಾಂಗ್ಲಾದೇಶದ ಅಧಿಕಾರಿಗಳು ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ್ದಾರೆ. ಅದಾದ ಬಳಿಕ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

ಬಾಂಗ್ಲಾದೇಶ ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂ ಅಧ್ಯಾತ್ಮ ನಾಯಕ ಚಿನ್ಮಯ್‌​ ಕೃಷ್ಣ ದಾಸ್ ಪ್ರಭು ಪರ ವಕೀಲರು ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್‌ ಬಂಧನದ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ, ಬಾಂಗ್ಲಾ ಸರ್ಕಾರವು ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಯಾವುದೇ ವ್ಯವಸ್ಥಿತ ದಾಳಿ ನಡೆಸಲಾಗಿಲ್ಲ. ನಿರ್ದಿಷ್ಟ ಆರೋಪದ ಆಧಾರದ ಮೇಲೆಯೇ ಹಿಂದೂ ನಾಯಕರನ್ನು ಬಂಧಿಸಲಾಗಿದೆ ಎಂದಿದೆ. ನಮ್ಮ ದೇಶದ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ಸರ್ಕಾರವು ವಿಶ್ವಸಂಸ್ಥೆಗೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ:Pawan Kalyan: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಅರೆಸ್ಟ್‌ ವಿರುದ್ಧ ಸಿಡಿದೆದ್ದ ಪವನ್‌ ಕಲ್ಯಾಣ್‌… ಭಾರತದ ಸಹಾಯ ಮರೆಯದಿರಿ ಎಂದು ಚಾಟಿ