Wednesday, 4th December 2024

Nirmala Sitharaman: 1 ಬ್ಯಾಂಕ್‌ ಖಾತೆಗೆ 4 ನಾಮಿನಿ ಹೆಸರಿಸಲು ಅವಕಾಶ; ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಏನೇನಿದೆ?

Nirmala Sitharaman

ಹೊಸದಿಲ್ಲಿ: 1 ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿಗಳನ್ನು ಹೆಸರಿಸುವುದು ಸೇರಿದಂತೆ ಹಲವು ಅಂಶಗಳನ್ನು ಹೊಂದಿರುವ ಬ್ಯಾಂಕಿಂಗ್‌ ಕಾಯ್ದೆಗಳ (ತಿದ್ದುಪಡಿ) ಮಸೂದೆಯನ್ನು (Banking Laws (Amendment) Bill) ಲೋಕಸಭೆ ಮಂಗಳವಾರ (ಡಿ. 3) ಅಂಗೀಕರಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಮಂಡಿಸಿದ ಮಸೂದೆಯನ್ನು ಅಂಗೀಕರಿಸಲಾಯಿತು.

ಮಸೂದೆಯಲ್ಲಿನ ಪ್ರಮುಖಾಂಶಗಳು

ಈ ತಿದ್ದುಪಡಿಯಿಂದ ಬ್ಯಾಂಕ್‌ ಖಾತೆಗೆ ಏಕಕಾಲಕ್ಕೆ ಗರಿಷ್ಠ ನಾಲ್ವರ ಹೆಸರನ್ನು ನಾಮ ನಿರ್ದೇಶನ ಮಾಡಬಹುದಾಗಿದ್ದು, ಪ್ರತಿ ನಾಮಿನಿಗೂ 1ನೇ, 2ನೇ, 3ನೇ ಮತ್ತು 4ನೇ ಆದ್ಯತೆ ನೀಡಬಹುದಾಗಿದೆ. ಸಬ್‌ಸ್ಟಾನ್ಷಿಯಲ್‌ ಇಂಟರೆಸ್ಟ್‌ ನಿಯಮದಲ್ಲಿಯೂ ಬದಲಾವಣೆ ಕಂಡು ಬರಲಿದೆ. ಯಾವುದೇ ಕಂಪೆನಿಯಲ್ಲಿ ನಿರ್ದೇಶಕರು 5 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದರೆ ಅನ್ನು ಸಬ್‌ಸ್ಟಾನ್ಷಿಯಲ್‌ ಇಂಟರೆಸ್ಟ್‌ ಎಂದು ಕರೆಯಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ನಿರ್ದೇಶಕರು 5 ಲಕ್ಷ ರೂ.ಗಳ ಬದಲು 2 ಕೋಟಿ ರೂ.ವರೆಗಿನ ಆಸ್ತಿ ಹೊಂದಲು ಅವಕಾಶ ನೀಡಲಾಗಿದೆ.

ಆರ್​ಬಿಐಗೆ ಬ್ಯಾಂಕ್‌ಗಳು ಪ್ರತೀ 2ನೇ ಮತ್ತು 4ನೇ ಶುಕ್ರವಾರ ವರದಿ ಸಲ್ಲಿಸಬೇಕಿತ್ತು. ಅದನ್ನು ತಿಂಗಳ 15ನೇ ತಾರೀಕು ಮತ್ತು ತಿಂಗಳ ಕೊನೆಯ ತಾರೀಕಿಗೆ ಬದಲಾಯಿಸಲಾಗಿದೆ.

ನಿರ್ದೇಶಕರ ಅಧಿಕಾರಾವಧಿ ಹೆಚ್ಚಳ

ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಅಧಿಕಾರಾವಧಿಯನ್ನು (ಅಧ್ಯಕ್ಷರು ಮತ್ತು ಪೂರ್ಣಾವಧಿ ನಿರ್ದೇಶಕರನ್ನು ಹೊರತುಪಡಿಸಿ) 8 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸಲು ಮಸೂದೆ ಪ್ರಸ್ತಾಪಿಸಿದೆ. ಅಲ್ಲದೆ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಿಗೆ ರಾಜ್ಯ ಸಹಕಾರಿ ಬ್ಯಾಂಕ್‌ನ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ. ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಪಾವತಿಸಬೇಕಾದ ಸಂಭಾವನೆಯನ್ನು ನಿರ್ಧರಿಸುವಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲು ಮಸೂದೆ ಮುಂದಾಗಿದೆ.

ಸಚಿವರು ಹೇಳಿದ್ದೇನು?

ʼʼ1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ, 1955ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1970ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆ, 1980ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆಗಳಲ್ಲಿ ಒಟ್ಟು 19 ತಿದ್ದುಪಡಿಗಳನ್ನು ತರಲಾಗಿದೆʼʼ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

“ಪ್ರಸ್ತಾವಿತ ತಿದ್ದುಪಡಿಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುತ್ತವೆ ಮತ್ತು ಹೂಡಿಕೆದಾರರ ಹಿತ ರಕ್ಷಣೆಯನ್ನು ಖಚಿತಪಡಿಸುತ್ತವೆ. ಜತೆಗೆ ಗ್ರಾಹಕರ ಅನುಕೂಲವನ್ನು ಹೆಚ್ಚಿಸುತ್ತವೆ” ಎಂದು ಅವರು ಬಣ್ಣಿಸಿದ್ದಾರೆ. ಬಿಜೆಪಿಯ ಕೊಂಡಾ ವಿಶ್ವೇಶ್ವರ ರೆಡ್ಡಿ ಮಾತನಾಡಿ, ಈ ಮಸೂದೆಯು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಲಪಡಿಸಲಿದೆ. ಹೀಗಾಗಿ ಎಲ್ಲ ಪಕ್ಷಗಳೂ ಸಗಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿರೋಧ ಪಕ್ಷಗಳಿಂದ ಟೀಕೆ

ಇತ್ತ ವಿರೋಧ ಪಕ್ಷ ಈ ಮಸೀದೆಯನ್ನು ಟೀಕಿಸಿದೆ. ಭಾರತೀಯ ಬ್ಯಾಂಕಿಂಗ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸಲಿರುವ ಕ್ರಮ ಇದು ಎಂದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: Indian Rupee: ಅಮೆರಿಕದ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ; ಕಾರಣವೇನು?