Thursday, 5th December 2024

BBK 111: ಸುದೀಪ್​ಗೆ ಟ್ಯಾಗ್ ಮಾಡಿ ಇನ್​ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡ ಶೋಭಾ ಶೆಟ್ಟಿ

Shobha Shetty Insta Post

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಒಂಬತ್ತನೇ ವಾರ ಶೋಭಾ ಶೆಟ್ಟಿ ಮನೆಯಿಂದ ಹೊರಹೋಗಿದ್ದಾರೆ. ಎಲಿಮಿನೇಷನ್​ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಎರಡೇ ವಾರಕ್ಕೆ ಇವರು ಬಿಗ್ ಬಾಸ್​ನಿಂದ ಆಚೆ ಬಂದಿರುವುದು ಎಲ್ಲರೂ ಅಚ್ಚರಿ ಮೂಡಿಸಿತು. ಅನಾರೋಗ್ಯದ ಕಾರಣ ಇವರು ಅರ್ಧಕ್ಕೆ ಶೋನಿಂದ ಹಿಂದೆ ಸರಿದರು.

ಎಲಿಮಿನೇಟ್ ಆಗುವ ಸ್ಪರ್ಧಿಗಳ ಲಿಸ್ಟ್​ನಲ್ಲಿದ್ದ ಶೋಭಾ ಅವರನ್ನು ಭಾನುವಾರ ಸುದೀಪ್ ಅವರು ಸೇವ್ ಮಾಡಿದ್ದರು. ಕೊನೆಯಲ್ಲಿ ಐಶ್ವರ್ಯಾ ಹಾಗೂ ಶಿಶಿರ್ ಡೇಂಜರ್ ಝೋನ್​ನಲ್ಲಿದ್ದರು. ಆದರೆ, ಈ ಸಂದರ್ಭ ಶೋಭಾ ಅವರು ನಾನೇ ಹೊರಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಾ ಶೆಟ್ಟಿ ಮನೆಯಿಂದ ವಾಕ್ ಔಟ್ ಆದರು.

ಕನ್ನಡ ಬಿಗ್ ​ಬಾಸ್​ಗೆ ಶಾಕಿಂಗ್​ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಶೋಭಾ ಮೊದಲ ದಿನವೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅದರಲ್ಲೂ ಬಿಗ್​ ಬಾಸ್​ ಕೊಟ್ಟ ಟಾಸ್ಕ್​ ಆಡುವಾಗ ಕೊನೆಯ ಕ್ಷಣದಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಇದೇ ಟಾಸ್ಕ್​ ಆಡುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರು. ಅಲ್ಲಿಂದ ಕೊಂಚ ಡಲ್ ಆದ ಶೋಭಾ ಟಾಸ್ಕ್​ನಲ್ಲಿ ಮತ್ತೆ ಕತ್ತು ನೋವು ಮಾಡಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು.

ಇದೀಗ ಶೋನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಶೋಭಾ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮನೆಯಿಂದ ಹೊರಬಂದಿರುವ ಅವರೀಗ ನಿರೂಪಕ ಸುದೀಪ್​, ಬಿಗ್​ ಬಾಸ್​ ತಂಡ ಮತ್ತು ಕನ್ನಡಿಗರನ್ನುದ್ದೇಶಿಸಿ ಮಾತನಾಡಿದ್ದಾರೆ.

ಶೋಭಾ ಶೆಟ್ಟಿ ಪೋಸ್ಟ್​ನಲ್ಲೇನಿದೆ?:

‘‘ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್​ ಬಾಸ್​ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆ ಇದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ, ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ!. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರ ಆಗಿದ್ದರೆ, ದಯವಿಟ್ಟು ಕ್ಷಮಿಸಿ.”

”ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗೂ ನನ್ನ ಪ್ರೀತಿಯ ಕಿಚ್ಚ ಸುದೀಪ್​ ಸರ್​​ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ’’ ಎಂದು ಬರೆದು ಸುದೀಪ್ ಅವರನ್ನು, ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾ ಆ್ಯಪ್​ಗೆ ಟ್ಯಾಗ್ ಮಾಡಿದ್ದಾರೆ.

BBK 11: ತಲೆ ಬೋಳಿಸುವ ಸವಾಲು: ಉಗ್ರಂ ಮಂಜು ಕೊಟ್ಟ ಚಾಲೆಂಜ್ ಸ್ವೀಕರಿಸಿದ ರಜತ್