Thursday, 5th December 2024

Pesticide Effect: ‘ಡಾಕ್ಟರ್-ಡಾಕ್ಟರ್’ ಆಟವಾಡಿದ ಮಕ್ಕಳು ಕೀಟನಾಶಕ ಸೇವಿಸಿದರು!

Pesticide Effect

ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಸುಮ್ಮನಾಗುತ್ತಾರೆ. ಆದರೆ ಇದೇ ಕೆಲವೊಮ್ಮೆ ಅವಘಡಕ್ಕೆ ಕಾರಣವಾಗುತ್ತದೆ. ಮಕ್ಕಳಾಟದಿಂದ ಜೀವಕ್ಕೆ ಸಂಚಕಾರ ಬಂದ ಘಟನೆಯೊಂದು ರಾಜಸ್ಥಾನದ ಖಜುರಿ ಗ್ರಾಮದಲ್ಲಿ ನಡೆದಿದೆ. ಕೀಟನಾಶಕವನ್ನು(Pesticide Effect) ಸೇವಿಸಿ ನಾಲ್ವರು ಬಾಲಕಿಯರು ತಮ್ಮ ಜೀವಕ್ಕೆ ತೊಂದರೆ ತಂದುಕೊಂಡ ಘಟನೆಯೊಂದು ನಡೆದಿದೆ.

ಆಗಿದ್ದೇನು?
ಮಕ್ಕಳೆಲ್ಲಾ ಸೇರಿಕೊಂಡು ‘ಡಾಕ್ಟರ್-ಡಾಕ್ಟರ್’ ಆಟವನ್ನು ಆಡಿದ್ದಾರೆ. ಹೀಗೆ ಆಡುವಾಗ  ನಾಲ್ವರು ಬಾಲಕಿಯರು ಆಕಸ್ಮಿಕವಾಗಿ ಕೀಟನಾಶಕವನ್ನು ಸೇವಿಸಿದ್ದಾರೆ.ಬಾಲಕಿಯರ ಸಂಬಂಧಿಯಾದ 10 ವರ್ಷದ ಬಾಲಕನೊಬ್ಬ ಆಟದ ಭಾಗವಾಗಿ ಹತ್ತಿ ಬೆಳೆಗೆ ಸಿಂಪಡಿಸಲು ಬಳಸುವ ಕೀಟನಾಶಕಗಳನ್ನು ಅವರಿಗೆ ಕುಡಿಯಲು ನೀಡಿದ್ದಾನಂತೆ.ಇದನ್ನು ಸೇವಿಸಿದ ಬಾಲಕಿಯರು ಅಸ್ವಸ್ಥರಾಗಿದ್ದಾರಂತೆ.

ಸಂಜಾ (3), ಮನೀಷಾ (2), ರಾನು (3) ಮತ್ತು ಮಾಯಾ (5) ಕೀಟನಾಶಕವನ್ನು ಸೇವಿಸಿದ ಬಾಲಕಿಯರು. ಇವರು ವಾಂತಿ ಮಾಡುವುದನ್ನು ಗಮನಿಸಿದ ಮನೆಯವರು ತಕ್ಷಣವೇ ದಾನಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಮತ್ತು ನಂತರ ಚಿಕಿತ್ಸೆಗಾಗಿ ಬನ್ಸ್ವಾರಾದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬಾಲಕಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕುಟುಂಬ ಸದಸ್ಯರ ಪ್ರಕಾರ, ಮಕ್ಕಳು ಪಕ್ಕದ ಮನೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಾತ್‌ ಆಗಿ ಕೀಟನಾಶಕವನ್ನು ಸೇವಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿ; 34 ಪ್ರಯಾಣಿಕರಿಗೆ ಗಾಯ

ಬನ್ಸ್ವಾರಾ ಡಿಎಸ್ಪಿ ಗೋಪಿಚಂದ್ ಮೀನಾ ಅವರು ಇದು ಆಕಸ್ಮಾತ್‌ ಆಗಿ ಆಟದ ಸಮಯದಲ್ಲಿ ಆಗಿದ ಘಟನೆ ಎಂದು ಹೇಳಿದ್ದಾರೆ. ಆದಾಗ್ಯೂ, ಇದರಲ್ಲಿ ಯಾವುದೇ ನಿರ್ಲಕ್ಷ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.