Thursday, 5th December 2024

AUS vs IND 2nd Test: ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?

ಅಡಿಲೇಡ್‌: 4 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡ ಅಹರ್ನಿಶಿ ಟೆಸ್ಟ್​ ಪಂದ್ಯವನ್ನಾಡಲು ಸಜ್ಜಾಗಿದೆ. ಶುಕ್ರವಾರ(ಡಿ.6) ಅಡಿಲೇಡ್‌ ಮೈದಾನದಲ್ಲಿ(AUS vs IND 2nd Test) ಈ ಪಂದ್ಯ ಆರಂಭಗೊಳ್ಳಲಿದೆ. ಇದುವರೆಗೆ ಭಾರತ ಆಡಿರುವ ಪಿಂಕ್‌ ಬಾಲ್‌ ಟೆಸ್ಟ್‌ನ(India’s Day-Night Test Record) ದಾಖಲೆಯ ಇಣಕು ನೋಟ ಇಲ್ಲಿದೆ.

ಭಾರತ ಕೊನೆಯ ಬಾರಿಗೆ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನಾಡಿದ್ದು 2020ರಲ್ಲಿ. ಅಡಿಲೇಡ್​ನಲ್ಲೇ ಈ ಪಂದ್ಯ ನಡೆದಿತ್ತು. ಆಗ ಭಾರತ ಆಸೀಸ್‌ ವಿರುದ್ಧ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಹೀನಾಯ ಸೋಲು ಕಂಡಿತ್ತು. ಇದು ಭಾರತ ವಿದೇಶದಲ್ಲಿ ಆಡಿದ್ದ ಮೊದಲ ಪಿಂಕ್‌ ಟೆಸ್ಟ್‌ ಕೂಡ ಇದಾಗಿತ್ತು. ಇದೀಗ ಎರಡನೇ ಬಾರಿಗೆ ಭಾರತ ವಿದೇಶಿ ನೆಲದಲ್ಲಿ ಅಹರ್ಶಿನಿ ಟೆಸ್ಟ್‌ ಆಡಲು ಸಜ್ಜಾಗಿದೆ.

ಭಾರತ ಇದುವರೆಗೆ ಒಟ್ಟು ನಾಲ್ಕು ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನಾಡಿ 3 ಪಂದ್ಯದಲ್ಲಿ ಗೆದ್ದಿದೆ. ಈ ಮೂರು ಗೆಲುವು ಕೂಡ ತವರು ನೆಲದಲ್ಲೇ ಒಲಿದಿತ್ತು. ಎದುರಾಳಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಗ್ಲೆಂಡ್‌. ಆಸ್ಟ್ರೆಲಿಯಾ ತಂಡ ಇದುವರೆಗೆ 12 ಪಿಂಕ್‌ ಬಾಲ್‌ ಟೆಸ್ಟ್​ ಪಂದ್ಯಗಳನ್ನು ಆಡಿದ್ದು, ಈ ಪೈಕಿ 11ರಲ್ಲಿ ಗೆದ್ದಿದೆ. ವೆಸ್ಟ್​ ಇಂಡೀಸ್​ ವಿರುದ್ಧ ಬ್ರಿಸ್ಬೇನ್​ನಲ್ಲಿ ಆಡಿದ ತನ್ನ ಕೊನೇ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಆಸೀಸ್​ ಸೋಲು ಕಂಡಿತ್ತು.

ಇದನ್ನೂ ಓದಿ KL Rahul: ‘ಕ್ರಮಾಂಕದ ಬಗ್ಗೆ ಚಿಂತಿಸಿಲ್ಲ’; ಆಡುವ ಬಳಗದಲ್ಲಿ ಚಾನ್ಸ್ ಸಿಕ್ಕರೆ ಸಾಕು ಎಂದ ರಾಹುಲ್

ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

ವಿರಾಟ್‌ ಕೊಹ್ಲಿ ಭಾರತ ಪರ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ. ಕೊಹ್ಲಿ 4 ಪಂದ್ಯಗಳನ್ನಾಡಿ 277 ರನ್‌ ಬಾರಿಸಿದ್ದಾರೆ. ಕೊಹ್ಲಿ ಬಳಿಕ ರೋಹಿತ್‌ ಶರ್ಮ 3 ಪಂದ್ಯವಾಡಿ 173 ರನ್‌ ಗಳಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ಒಂದೇ ಪಂದ್ಯವನ್ನಾಡಿ 155 ರನ್‌ ಗಳಿಸಿದ್ದಾರೆ.

ಅತಿ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ಗಳು

ಭಾರತ ಪರ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ದಾಖಲೆ ಸದ್ಯ ಆರ್‌.ಅಶ್ವಿನ್‌ ಹೆಸರಿನಲ್ಲಿದೆ. ಅಶ್ವಿನ್‌ 4 ಪಂದ್ಯಗಳಿಂದ 18 ವಿಕೆಟ್‌ ಕಿತ್ತಿದ್ದಾರೆ. ಅಕ್ಷರ್‌ ಪಟೇಲ್‌ 2 ಪಂದ್ಯಗಳಿಂದ 14 ವಿಕೆಟ್‌ ಪಡೆದಿದ್ದಾರೆ. ಉಮೇಶ್‌ ಯಾದವ್‌ 2 ಪಂದ್ಯವಾಡಿ 11 ವಿಕೆಟ್‌ ಕಲೆಹಾಕಿದ್ದಾರೆ.