Thursday, 5th December 2024

Devendra Fadnavis: ʻಮಹಾʼ ಗದ್ದುಗೆ ಫಡ್ನವೀಸ್‌ಗೆ ಫಿಕ್ಸ್‌; ಶಿಂಧೆ, ಪವಾರ್‌ ಜತೆ ಮಹತ್ವದ ಸಭೆ, ಸೀಟು ಹಂಚಿಕೆ ಬಗ್ಗೆ ಚರ್ಚೆ

Devendra Fadnavis

ಮುಂಬೈ: ಕಳೆದ ಕೆಲ ದಿನಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra CM) ಆಯ್ಕೆ ಕೊನೆಗೂ ಮುಕ್ತಾಯಗೊಂಡಿದೆ. ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ದೇವೇಂದ್ರ ಫಡ್ನವೀಸ್‌ (Devendra Fadnavis) ಅವರನ್ನು ಮಹಾರಾಷ್ಟ್ರದ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಡೆದಿದ್ದ ಮಹಾರಾಷ್ಟ್ರದ ವಿಧಾನ ಸಭೆ ಚುನಾವಣೆಯಲ್ಲಿ ಮಹಾಯಿತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿತ್ತು. ಫಲಿತಾಂಶ ಬಂದು ಹಲವು ದಿನಗಳಾಗಿದ್ದರೂ ಸಿಎಂ ಸ್ಥಾನ ಮಾತ್ರ ಘೋಷಣೆಯಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಶಿಂಧೆ (Eknath Shindhe) ಹಾಗೂ ಫಡ್ನವೀಸ್‌ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇತ್ತು. ಇದೀಗ ಫಡ್ನವೀಸ್‌ಗೆ ಮಹಾ ಗದ್ದುಗೆ ದೊರೆತಿದೆ.

ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಬಿಜೆಪಿ ಕೇಂದ್ರ ಪರಿವೀಕ್ಷಕ ವಿಜಯ್‌ ರೂಪಾನಿ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿಯಲ್ಲಿ ದೇವೆಂದ್ರ ಫಡ್ನವೀಸ್‌ರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಗುರವಾರ ಸಂಜೆ 5.30 ಕ್ಕೆ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಆಜಾದ್‌ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ನಾಳೆ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ನಾಳೆ ಏಕನಾಥ್‌ ಶಿಂಧೆ ಉಪಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹೇಳಲಾಗಿದೆ. ಆದರೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎನ್‌ಸಿಪಿ ಕೂಡ ಪ್ರಮುಖ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಅಜಿತ್‌ ಪವಾರ್‌ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಶಿಂಧೆ, ಪಾವಾರ್‌ ಭೇಟಿಯಾಗಲಿರುವ ಫಡ್ನವೀಸ್‌

ನೂತನವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ದೇವೇಂದ್ರ ಫಡ್ನವೀಸ್‌ ಇಂದು ಮಧ್ಯಾಹ್ನ 2 ಗಂಟೆಗೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿರುವ ಶಿಂಧೆ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಚಿವ ಸ್ಥಾನದ ಹಂಚಿಕೆಯ ಕುರಿತು ಚರ್ಚೆ ನಡೆಸಬಹುದು ಎಂದು ಊಹಿಸಲಾಗಿದೆ.

ಪ್ರಧಾನಿಗೆ ಧನ್ಯವಾದ ತಿಳಿಸಿದ ಫಡ್ನವೀಸ್‌

ಮೂರನೇ ಬಾರಿಗೆ ಮಹಾರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಫಡ್ನವೀಸ್‌ ತಮ್ಮ ಮೇಲೆ ನಂಬಿಕೆ ಇಟ್ಟು ಈ ಸ್ಥಾನವನ್ನು ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಶಿವಸೇನಾ ನಾಯಕ ಹಾಗೂ ಹಂಗಾಮಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

ಫಡ್ನವೀಸ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮಿಸಿದರು. ಅತ್ತ ಫಡ್ನವೀಸ್‌ ನಿವಾಸದಲ್ಲೂ ಸಂಭ್ರಮಾಚರಣೆ ಜೋರಾಗಿತ್ತು.

ಈ ಸುದ್ದಿಯನ್ನೂ ಓದಿ : Devendra Fadnavis: ದೇವೆಂದ್ರ ಫಡ್ನವೀಸ್‌ಗೆ ʻಮಹಾʼ CM ಪಟ್ಟ; ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಧಿಕೃತ ಘೋಷಣೆ