Thursday, 5th December 2024

Sara Tendulkar: ತಂದೆಯ ಫೌಂಡೇಶನ್‌ಗೆ ನಿರ್ದೇಶಕಿಯಾದ ಸಾರಾ ತೆಂಡೂಲ್ಕರ್

ಮುಂಬಯಿ: ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್(Sara Tendulkar) ಅವರು ʼಸಚಿನ್ ತೆಂಡೂಲ್ಕರ್ ಫೌಂಡೇಶನ್‌ಗೆʼ(Sachin Tendulkar Foundation) ನಿರ್ದೇಶಕಿಯಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಸಚಿನ್‌ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿನ್‌, ‘ನನ್ನ ಮಗಳು ಸಾರಾ ತೆಂಡೂಲ್ಕರ್ ಇಂದು(ಬುಧವಾರ) ಅಧಿಕೃತವಾಗಿ ʼಸಚಿನ್ ತೆಂಡೂಲ್ಕರ್ ಫೌಂಡೇಶನ್‌ʼಗೆ ನಿರ್ದೇಶಕಿಯಾಗಿ ಸೇರಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಅತೀವ ಸಂತೋಷವಾಗಿದೆ. ಅವರು ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ರೀಡೆ, ಆರೋಗ್ಯ ರಕ್ಷಣೆಯ ಮೂಲಕ ಭಾರತವನ್ನು ಸಶಕ್ತಗೊಳಿಸುವ ಈ ಪ್ರಯಾಣವನ್ನು ಅವರು ಪ್ರಾರಂಭಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಶನ್ ‘ಶಿಕ್ಷಣ, ಕ್ರೀಡೆ ಮತ್ತು ಆರೋಗ್ಯ ಎಂಬ ಮೂರು ಕ್ಷೇತ್ರಗಳಲ್ಲಿ ಪ್ರತಿಷ್ಠಾನ ಕೆಲಸ ಮಾಡುತ್ತದೆ.

ಇತ್ತೀಚೆಗೆ, ಸಾರಾ ಅವರು ಉದಯಪುರದ ಹಳ್ಳಿಯೊಂದಕ್ಕೆ ತಾಯಿ ಅಂಜಲಿ ತೆಂಡೂಲ್ಕರ್ ಜತೆ ಭೇಟಿ ನೀಡಿ ಅಲ್ಲಿನ ಹಿಂದುಳಿದ ಸಮುದಾಯದ ಮಕ್ಕಳ ಜತೆ ಸಮಯ ಕಳೆದಿದ್ದರು. ಇದರ ಅನುಭವವನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೊಂದು ಅರ್ಥಪೂರ್ಣ ಅನುಭವವಾಗಿದೆ. ಹಿಂದುಳಿದ ಸಮುದಾಯಗಳಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ಚಿಕಿತ್ಸಾಲಯಗಳನ್ನು ಸ್ಥಾಪಿಸಿ ಚಿಕ್ಕ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರದ ಜತೆಗೆ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯʼ ಎಂದು ಹೇಳಿದ್ದರು. ಇದೀಗ ಸಾರಾ ತಂದೆಯ ಫೌಂಡೇಶನ್‌ಗೆ ನಿರ್ದೇಶಕಿಯಾಗಿದ್ದಾರೆ. ಈ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ AUS vs IND 2nd Test: ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?

ಸಾರಾ ತೆಂಡೂಲ್ಕರ್ ಅವರು ಇದೇ ವರ್ಷ ಲಂಡನ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸಚಿನ್‌ ಅವರು ತಮ್ಮ 24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.