ಹೈದರಾಬಾದ್ : ಟಾಲಿವುಡ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ತಮ್ಮ ಬಹುಕಾಲದ ಗೆಳೆಯ ಆಂಟನಿ ಥಟ್ಟಿಲ್ ( Antony Thattil) ಅವರೊಂದಿಗೆ ಡಿಸೆಂಬರ್ 12 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಅವರ ಮದುವೆಯ ಆಮಂತ್ರಣದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸದ್ಯ ವೈರಲ್ ಆಗಿರುವ ಆಮಂತ್ರಣ ಪತ್ರಿಕೆಯು ಅವರ ಕುಟುಂಬದ ಸದಸ್ಯರ ಹೆಸರುಗಳು ಮತ್ತು ಶುಭ ಸಮಾರಂಭದ ದಿನಾಂಕವನ್ನು ಒಳಗೊಂಡಿದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ, “ನಮ್ಮ ಮಗಳು ಡಿಸೆಂಬರ್ 12 ರಂದು ಮದುವೆಯಾಗುತ್ತಿದ್ದಾಳೆ ಎಂದು ತಿಳಿಸಲು ನಮಗೆ ತುಂಬಾ ಸಂತೋಷವಾಗಿದೆ. ನಿಮ್ಮ ಆಶೀರ್ವಾದವನ್ನು ನಾವು ಹೆಚ್ಚು ಗೌರವಿಸುತ್ತೇವೆ. ನೀವು ಬಂದು ಅವರಿಗೆ ಆಶೀರ್ವದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ನವ ಜೋಡಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಕೀರ್ತಿ ಪೋಷಕರಾದ ಜಿ ಸುರೇಶ್ ಕುಮಾರ್, ಮೇನಕಾ ಸುರೇಶ್ ಕುಮಾರ್, ರೇವತಿ ಸುರೇಶ್ ಮತ್ತು ನಿತಿನ್ ನಾಯರ್ ಹೇಳಿದ್ದಾರೆ.
ಇತ್ತೀಚೆಗೆ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಕೀರ್ತಿ ಸುರೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮದುವೆಯಾಗುತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆಂಟೋನಿ ಜತೆಗೆ ದೀಪಾವಳಿ ಆಚರಿಸುತ್ತಿರುವ ಫೋಟೊವನ್ನು ಕೀರ್ತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರ ಮುಖ ಕಾಣಿಸುತ್ತಿಲ್ಲ. ಅದಾಗ್ಯೂ ಅವರು ಬರೆದಿರುವ ಕ್ಯಾಪ್ಷನ್ ಅನುಮಾನಕ್ಕೆ ತೆರೆ ಎಳೆದಿದೆ. ʼʼ15 ವರ್ಷ ಮತ್ತು ಕೌಂಟಿಂಗ್. ಆಂಟೋನಿ ಮತ್ತು ಕೀರ್ತಿ ಎಂದೆಂದಿಗೂʼʼ ಎಂದು ಬರೆದುಕೊಂಡಿದ್ದರು. ಆ ಮೂಲಕ ಕೆಲವು ದಿನಗಳಿಂದ ಹರಿದಾಡುತ್ತಿರುವುದು ವದಂತಿಗೆ ಫುಲ್ ಸ್ಟಾಪ್ ಇಟ್ಟು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಡಿ. 11 ಮತ್ತು 12ರಂದು ಗೋವಾದಲ್ಲಿ ಮದುವೆ ನಡೆಯಲಿದೆ. ಇದಕ್ಕಾಗಿ ಕೀರ್ತಿ ಸುರೇಶ್ ಈಗಾಗಲೇ ಸಿದ್ದತೆ ಆರಂಭಿಸಿದ್ದಾರಂತೆ. ಈ ಮೂಲಕ 15 ವರ್ಷಗಳ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ.
ದುಬೈಯಲ್ಲಿ ಉದ್ಯಮಿಯಾಗಿರುವ ಅವರು ತಾಯ್ನಾಡಾದ ಕೊಚ್ಚಿಯಲ್ಲಿ ತಮ್ಮದೇ ಆದ ರೆಸಾರ್ಟ್ಗಳನ್ನು ಹೊಂದಿದ್ದಾರೆ. ಚೆನ್ನೈಯಲ್ಲಿಯೂ ಅವರದ್ದೇ 2 ಕಂಪೆನಿಗಳಿವೆ ಎಂದು ವರದಿಯೊಂದು ತಿಳಿಸಿದೆ. ಸುಮಾರು 15 ವರ್ಷಗಳಿಂದಲೂ ಕೀರ್ತಿ ಮತ್ತು ಆಂಟೋನಿ ಮಧ್ಯೆ ಗಾಢ ಗೆಳೆತನವಿದೆ. ಶಾಲಾ ದಿನಗಳಲ್ಲಿಯೇ ಇವರಿಬ್ಬರ ಮಧ್ಯೆ ಸ್ನೇಹ ಸಂಬಂಧ ಏರ್ಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ : Keerthy Suresh: ಹಸೆಮಣೆಗೇರಲು ಕೀರ್ತಿ ಸುರೇಶ್ ಸಜ್ಜು; ವರನ್ಯಾರು? ಮದುವೆ ಯಾವಾಗ?