Saturday, 23rd November 2024

ಯಕ್ಷಗಾನ ಸಾಹಿತ್ಯಕ್ಕೆ ಸಾಹಿತ್ಯ ಮೌಲ್ಯ ಯಾಕಿಲ್ಲ?

ಅಭಿವ್ಯಕ್ತಿ

ರವಿ ಮಡೋಡಿ

ಯಕ್ಷಗಾನವೆಂದರೆ ನಮಗೆ ನೆನಪಾಗುವುದು ಚಂಡೆ ಮದ್ದಲೆಗಳ ನಿನಾದ, ಭಾಗವತರ ಶೃತಿಬದ್ಧ ಹಾಡುಗಾರಿಕೆ, ಬಣ್ಣಗಳಲ್ಲಿ ಮೂಡುವ ಪಾತ್ರಗಳು, ಆಕರ್ಷಕವೆನಿಸುವ ವೇಷಭೂಷಣ, ಮಾತುಗಾರಿಕೆಯ ಸೊಗಸು, ಮನೋಲ್ಲಾಸ ನೀಡುವ ಹೆಜ್ಜೆ ಇತ್ಯಾದಿಗಳು.

ಬೇರೆ ಯಾವುದೇ ಕಲೆಗಳಲ್ಲಿ ಇಂತಹ ಒಂದೆರಡು ಅಂಶಗಳು ಮಾತ್ರ ಕಾಣಿಸಿದರೆ ಯಕ್ಷಗಾನದಲ್ಲಿ ಮಾತ್ರ ಸಮಷ್ಟಿಯಾಗಿ
ನಾಟ್ಯ ಶಾಸ್ತ್ರದ ಹಲವು ಅಂಶಗಳನ್ನು ಒಳಗೊಂಡ ಕಲೆಯಾಗಿ ರೂಪುಗೊಂಡಿದೆ. ಇದರ ಜೊತೆಗೆ ಗಮನಿಸಲೇ ಬೇಕಾದ ಮತ್ತೊಂದು ಅಂಶವೆಂದರೆ ಅದರ ಸಾಹಿತ್ಯ. ಇದು ಇಡೀ ರಂಗಭೂಮಿಯ ಮುಖ್ಯ ಜೀವಾಳವಾಗಿ ಪ್ರದರ್ಶನಕ್ಕೆ ಬೇಕಾದ ಪಠ್ಯವನ್ನು ಒದಗಿಸುತ್ತದೆ.

ಮಾತ್ರವಲ್ಲದೇ ಪ್ರದರ್ಶನದ ಆಶಯ ಗಳನ್ನು ಸಾಹಿತ್ಯದಿಂದ ಸ್ಫುಟಗೊಳಿಸುತ್ತದೆ. ಮೇಲ್ನೋಟಕ್ಕೆ ಸಾಹಿತ್ಯವು ರಂಗಭೂಮಿಯ ಸಂಗೀತ ನಾಟಕದಂತೆ ತೋರಿದರೂ ಕೂಡ ಗೇಯ ಕಾವ್ಯದ ಹಾಗೂ ಹಾಡುಗಬ್ಬದ ಲಕ್ಷಣಗಳನ್ನು ಹೊಂದಿದೆ. ಇಂತಹ ವೈಶಿಷ್ಟ್ಯವನ್ನು ಹೊಂದಿರುವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ವಲಯ ಸಾಹಿತ್ಯದ ಪ್ರಕಾರವೆಂದು ಗಂಭೀರವಾಗಿ ಪರಿಗಣಿಸದೇ ಇರುವುದು ಅಚ್ಚರಿಯನ್ನು ಉಂಟು ಮಾಡಿದೆ. ಈ ಬಗ್ಗೆ ಸಾಹಿತ್ಯಾಸಕ್ತರು ಇದರ ಸಾಹಿತ್ಯದ ಸಾಧ್ಯತೆ, ಸೌಂದರ್ಯ ಹಾಗೂ ವಸ್ತುನಿಷ್ಠತೆಯನ್ನು ಅವಲೋಕಿಸಬೇಕಿದೆ.

ಸಾಹಿತ್ಯವೆಂದರೆ ಕೇವಲ ಅದು ಪದಗಳ ಸಮೂಹವಲ್ಲ. ಭಾಷೆಯನ್ನು, ಭಾವನೆಗಳನ್ನು, ಸೃಜನಶೀಲತೆಯನ್ನು, ಪಾಂಡಿತ್ಯ ವನ್ನು ಕೊಡುವ ಪ್ರಬಲ ಮಾಧ್ಯಮವೆಂದು ಕರೆಯಬಹುದಾಗಿದೆ. ಹಾಗಾದರೆ ಈ ಲಕ್ಷಣಗಳು ಯಕ್ಷಗಾನ ಸಾಹಿತ್ಯದಲ್ಲಿ ಇದೆಯೇ ಎಂದು ಕೇಳಿದರೆ ಇದೆ ಎಂದು ಖಚಿತವಾಗಿ ಹೇಳಬಹುದಾಗಿದೆ. ಇಲ್ಲಿ ಸಾಹಿತ್ಯವು ಎರಡು ವಿಭಾಗ ದಲ್ಲಿ ಹರವಿಕೊಂಡಿದೆ. ಒಂದು
ಯಕ್ಷಗಾನದ ಪ್ರದರ್ಶನಕ್ಕೆ ಬೇಕಾದ ಪರಿಧಿಯನ್ನು ಕಟ್ಟಿಕೊಡುವ ಪ್ರಸಂಗ ಸಾಹಿತ್ಯವಾದರೆ ಮತ್ತೊಂದು ಪ್ರದರ್ಶನಗಳಲ್ಲಿ  ಪ್ರಸಂಗದ ಸಾಹಿತ್ಯದ ಆಶಯಗಳನ್ನು ಮೌಖಿಕವಾಗಿ ಸಂಭಾಷಣೆಗಳ ಮೂಲಕವಾಗಿ ಅದನ್ನು ಸೃಜನಾತ್ಮಕವಾಗಿ ವಿನ್ಯಾಸ ಗೊಳಿಸುವ ವಿಧಾನ. ಈ ಎರಡು ಕೂಡ ಅಚ್ಚಗನ್ನಡದಲ್ಲಿಯೇ ಪ್ರತಿಪಾದಿಸುವುದು ವೈಶಿಷ್ಟ್ಯತೆ ಪಡೆಯುತ್ತದೆ.

ಜೊತೆಗೆ ಇಲ್ಲಿ ಕನ್ನಡ ಸಾಹಿತ್ಯ ವನ್ನು ಅತ್ಯಂತ ಉತ್ಕೃಷ್ಟವಾಗಿ ವಿಶದವಾಗಿ ಬಳಸುವುದನ್ನು ಗಮನಿಸಬೇಕಾಗಿದೆ. ಸಾಹಿತ್ಯ ಎನ್ನುವುದಕ್ಕೆ ಸಮಾಜದ ಪ್ರತಿಬಿಂಬ ಎನ್ನುವ ಅರ್ಥವಿದೆ. ಅದು ಸಮಾಜದ ಓರೆಕೋರೆ ಗಳನ್ನು ಒರೆಗೆ ಹಚ್ಚಿ ಅದರ ಹಿತವನ್ನು ಕಾಯುವುದು ಅದರ ಆಶಯಗಳಲ್ಲಿ ಒಂದಾಗಿದೆ. ವಸ್ತುನಿಷ್ಠತೆಯನ್ನು, ವಾಸ್ತವತೆಯನ್ನು ದೃಶ್ಯೀಕರಿಸುವ ಹಾಗೂ ಸದೃಢ ಸಮಾಜವನ್ನು ರೂಪಿಸುವ ಸಾಧನವಾಗಿದೆ. ಹಾಗೇ ನೋಡಿದರೆ ಯಕ್ಷಗಾನದ ಉದ್ದೇಶ ಕೂಡ ಇದೆ ಎಂದರೆ ತಪ್ಪಾಗಲಾರದು.

ಕೇವಲ ಇದು ಮನೋ ರಂಜನೆಗೆ ಇರುವ ಕಲಾ ಮಾಧ್ಯಮವಾಗದೆ ಮನೋವಿಕಾಸದ ವಿಚಾರವಾಗಿ ತನ್ನನ್ನು ಗುರುತಿಸಿ ಕೊಳ್ಳುತ್ತದೆ. ಸಮಾಜದ ಒಳಿತಿಗಾಗಿ ಪೌರಾಣಿಕ ನೆಲೆಯಲ್ಲಿ ಭಾರತೀಯ ತತ್ವಶಾಸ್ತ್ರದ ತಳಹದಿಯ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸುವ ಪ್ರಬಲ ದೃಶ್ಯ ಮಾಧ್ಯಮವೆಂದರೆ ಅತಿಶಯವಲ್ಲ.

ಯಕ್ಷಗಾನ ಪ್ರಸಂಗ ಸಾಹಿತ್ಯವು ಕೇವಲ ರಂಗಭೂಮಿಗೆ ಬೇಕಾದ ಪಠ್ಯವಾಗಿ ಮಾತ್ರವೆಂದು ಗುರುತಿಸುವುದಕ್ಕೆ ಸಾಧ್ಯವಿಲ್ಲ. ಅದು ತನ್ನೊಳಗೆ ಸಾಹಿತ್ಯದ ಮೌಲ್ಯಗಳನ್ನು ಹೂರಣವಾಗಿಸಿಕೊಂಡಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಅದು ಕನ್ನಡ ಭಾಷೆ ಯನ್ನು ಬಳಸಿಕೊಳ್ಳುವ ರೀತಿ, ಕೊಡುವ ರಸಾನುಭವ ಇತ್ಯಾದಿಗಳು ಬೇರೆ ಉದ್ದೇಶಿತ ಸಾಹಿತ್ಯ ದಂತೆ ಸಿಗದೆಯಿದ್ದರೂ ಕೂಡ, ಇದನ್ನು ವಚನ,ದಾಸ, ಜನಪದ ಸಾಹಿತ್ಯದ ಪ್ರಕಾರಗಳಂತೆ ಪ್ರತ್ಯೇಕ ಸಾಹಿತ್ಯ ಪ್ರಕಾರವಾಗಿ ನೋಡುವ ಅಗತ್ಯತೆಗಳಿವೆ.

ತೀ ನಂ ಶ್ರೀಯವರ ‘ಭಾರತೀಯ ಕಾವ್ಯಮೀಮಾಂಸೆ ’ ಎನ್ನುವ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಕುವೆಂಪು ರವರು ಸಾಹಿತ್ಯ ವಿಮರ್ಶೆಯನ್ನು ಸಂಶೋಧನಾತ್ಮಕ, ವರ್ಣನಾತ್ಮಕ ಹಾಗೂ ದಾರ್ಶನಿಕವಾಗಿರಬೇಕೆಂದು ತಿಳಿಸುತ್ತಾರೆ. ಯಕ್ಷಗಾನ ಸಾಹಿತ್ಯದ ಉದ್ದೇಶ ಕಲಾತ್ಮಕ ದೃಷ್ಟಿಕೋನವಾಗಿರುವುದರಿಂದ ಇಲ್ಲಿ ಸಂಶೋಧನಾತ್ಮಕ ಅಂಶವನ್ನು ಬಿಡಬಹುದಾಗಿದೆ. ಆದರೆ ವಿಪುಲ ವಾಗಿ ಉಳಿದ ಅಂಶಗಳಾದ ವರ್ಣನಾತ್ಮಕ ಹಾಗೂ ದಾರ್ಶನಿಕ ಅಂಶಗಳನ್ನು ಬಳಸಿರುವುದನ್ನು ಸಾಹಿತ್ಯ ವಲಯ ಗಮನಿಸ ಬೇಕಾಗಿದೆ. ಪದ್ಯಗಳು ಕೊಡುವ ಒಳನೋಟಗಳು ಅಥವಾ ಧ್ವನ್ಯರ್ಥಗಳು ಸಾಹಿತ್ಯದ ಸೌಂದರ್ಯ ಹಾಗೂ ಮೌಲ್ಯಗಳನ್ನು ಉಳಿದ ಸಾಹಿತ್ಯದಂತೆ ಗೋಚರಿಸುತ್ತದೆ. ಉದಾಹರಣೆಗೆ ಇಲ್ಲಿ ಕೆಲವು ಯಕ್ಷಗಾನ ಸಾಹಿತ್ಯದ ಪದ್ಯಗಳನ್ನು ಗಮನಿಸೋಣ
ಮಧ್ಯಮಾವತಿ ತ್ರಿವುಡೆ(ಪ್ರಸಂಗ: ರಾಮ ನಿರ್ಯಾಣ. ಕವಿ: ಹೊಸ್ತೋಟ ಮಂಜುನಾಥ ಭಾಗವತ, ರಚನೆ: 21ನೇ ಶತಮಾನ)
ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು ಮತ್ತಿನ್ನಾವ ಫಲವಿದೆ ನೀತಿಯೊಂದೇ  ದೇವನೆನಿಸಿತು ಎನ್ನನು ॥

ಜಗದೊಳಿಂತು ರಾಮ ನಿರ್ಯಾಣ ಪ್ರಸಂಗವು ರಾಮಾಯಣದ ಕೊನೆಯ ಭಾಗದ ಪ್ರಕರಣ. ರಾಮನ ಮಡದಿಯಾದ ಸೀತೆ ಮತ್ತೆ ಭೂಮಿಯನ್ನು ಸೇರುತ್ತಾಳೆ. ಅನುಜನಾದ ಲಕ್ಷ್ಮಣ ದೇಹಾಂತ ಶಿಕ್ಷೆಯನ್ನು ಅನುಭವಿಸುವುದಕ್ಕೆ ಸರಯೂ ನದಿಯನ್ನು ಪ್ರವೇಶಿಸುತ್ತಾನೆ. ಈಗ ಒಂದರ್ಥದಲ್ಲಿ ರಾಮ ತನ್ನವರನ್ನು ಕಳೆದುಕೊಂಡು ಒಂಟಿಯಾಗುತ್ತಾನೆ. ರಾಮ ತನ್ನ ಬದುಕನ್ನು ತಾನೇ ಮತ್ತೊಮ್ಮೆ ಪರಾಮರ್ಶಿಸಿಕೊಳ್ಳುತ್ತಾನೆ. ಇಲ್ಲಿಯವರೆಗೆ ಮಾನವನಾಗಿ ಈ ಭೂಮಿಯಲ್ಲಿ ಜನ್ಮವನ್ನು ತಳೆದೆ.

ಇಲ್ಲಿ ಅನುಭವಿಸಿದ ನೋವು, ನಲಿವು, ಕಷ್ಟ, ನಷ್ಟ, ಸುಖ,ದುಃಖ, ಸಂತೋಷ ಎಲ್ಲವುಗಳು ಈ ಜೀವನದಲ್ಲಿ ತುಂಬಿತ್ತು. ಈ ಜೀವನದ ಬಗ್ಗೆ ರಾಮನಿಗೆ ಸಂತೃಪ್ತ ಭಾವವಿತ್ತು. ತಾನು ಅನುಸರಿಸಿದ ನೀತಿಯ ಮಾರ್ಗಗಳು, ತನ್ನ ರಾಮರಾಜ್ಯ ದ ಕನಸುಗಳು ತನ್ನನ್ನು ಈ ಭೂಮಿಯಲ್ಲಿ ಪುರುಷೋತ್ತಮನ ಸ್ಥಾನಕ್ಕೆ ಏರಿಸಿ ಒಬ್ಬ ಮಾನವನನ್ನು ಕೂಡ ದೇವನಾಗಿಸಿತು ಎಂದು ಭಾವುಕ ವಾಗುತ್ತಾನೆ.

ಜತೆಗೆ ಸಂಬಂಧಗಳ ಬಗ್ಗೆ ಅಂತರಂಗದ ತುಮುಲ ರಾಮನಲ್ಲಿ ಪ್ರಕಟಗೊಳ್ಳುತ್ತದೆ. ಅವನಿಗೆ ಅವತಾರದ ಕೊನೆಯ ಕಾಲದಲ್ಲಿ ಈ ಮಾನವ ಸಂಬಂಧಗಳ ಬಂಧನದಿಂದ ಮುಕ್ತವಾಗುವುದಕ್ಕೆ ಕಷ್ಟ ವಾಗುತ್ತದೆ ಎನ್ನುವುದನ್ನು ಕವಿ ಕಾಣುತ್ತಾನೆ. ಜತೆಗೆ ಕವಿಯೂ
ಅಧ್ಯಾತ್ಮದ ದೃಷ್ಟಿಕೋನದ ಒಳನೋಟ ವನ್ನು ಈ ಪದ್ಯದಲ್ಲಿ ತಿಳಿಸುತ್ತ ಎಲ್ಲರ ಜೀವನದ ಕೊನೆಯ ಘಟ್ಟ ವೈರಾಗ್ಯವೆನ್ನು ವುದನ್ನು ಸಾರುತ್ತಾನೆ.

ರಾಗ ಸುರುಟಿ ಏಕತಾಳ (ಪ್ರಸಂಗ: ಕೃಷ್ಣಸಂಧಾನ, ಕವಿ: ದೇವಿದಾಸ, ಕಾಲ: 17ನೇ ಶತಮಾನ) ಕೋಮಲಾಂಗಿ ಕೇಳೆ ಮದಗಜ ಗಾಮಿನಿ ಪಾಂಚಾಲೆ ॥

ಕಾಮುಕ ಕುರು ಭೂಕಾಂತನ ನಿಳಯಕೆ  ಸ್ವಾಾಮಿಯ ಧರ್ಮಜ ಸಂಧಿಗೆ ಕಳುಹುವ ॥

ಕೋಮಲಾಂಗಿ ॥ ॥
ಆತನ ದುಷ್ಕೃತವು ಮಗುಳಿ ನ್ನಾಾತನ ಪೊದ್ದುವುವು ॥
ಆತನೊಳನುವರವೇತಕೆ ನಮಗೆಂ
ದಾತನೊಳೈದೂರೀತನು ಬೇಡುವ ॥ ಕೋಮಲಾಂಗಿ ॥ ॥
ನಾವೆಲ್ಲವರಿದಕೆ ಒಪ್ಪಿಿಹೆ ವೀ ವಿಷಯೋತ್ಸವಕೆ ॥
ಭಾವಕಿ ನಿನ್ನಯ ಭಾವಗಳೇನೆನ
ಲಾ ವನಿತೆಯ ಮೊಗದಾವರೆ ಕಂದಿತು ॥
ಕೋಮಲಾಂಗಿ ॥ ॥

ಭಾಮಿನಿ
ಸಂಧಿಯೇ ಕಲಿಭೀಮ ನಿನಗಾ
ನಂದವೇ ಕುರುಭೂಪನೊಳು ಹಿತ
ಬಂದುದೇ ಧರ್ಮಜಗೆ ಪಾರ್ಥಗೆ ಹರಿಗೆ ಸನುಮತವೆ ॥
ಚಂದದೊಳಗಿನ್ನೊಮ್ಮೆ ನುಡಿ ಮೊದ
ಲೆಂದ ವಚನವ ಶಿವ ಶಿವಾ ನೀ
ವಿಂದು ಕೈಗೊಂಡಿರೆ ಯತಿತ್ವವನೆಂದು ಹೊರಳಿದಳು
ಕೃಷ್ಣ ಸಂಧಾನದ ಪ್ರಸಂಗ. ಧರ್ಮರಾಯನು

ಸಂಧಾನಕ್ಕೆಂದು ಕೃಷ್ಣನನ್ನು ಹಸ್ತಿನಾವತಿಗೆ ಕಳುಹಿಸುವುದಕ್ಕೆೆ ಸಜ್ಜಾಗುತ್ತಿರುವ ವಿಷಯವನ್ನು ಭೀಮನಿಂದ ತಿಳಿದ ದ್ರೌಪದಿಗೆ  ಒಮ್ಮೇಲೆ ಆಘಾತವಾಗುತ್ತದೆ. ಅವನಲ್ಲಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾಳೆ. ಭೀಮನು ಅಣ್ಣನವರಿಗೆ ನೀತಿಯಾದರೆ ನಿನ್ನ ಮನಕೊಪ್ಪಿದರೆ ಭೂತಳ ವನ್ನು ಕೌರವನಿತ್ತರೆ ತನ್ನ ಅಭ್ಯಂತರವಿಲ್ಲವೆಂದು ಕೃಷ್ಣನಿಗೆ ಹೇಳಿದ್ದೇನೆ ಎಂದು ವಿಡಂಭನೆಯಲ್ಲಿ ಹೇಳಿದಾಗ ದ್ರೌಪದಿ ತನ್ನ ಆಕ್ರೋಶವನ್ನು ಧರ್ಮರಾಯನ ಮೇಲೆ ತೋರಿಸುತ್ತಾಳೆ. ಜತೆಗೆ ಭೀಮನನ್ನು ನಿಂದಿಸುತ್ತಾಳೆ. ಆಗ
ಭೀಮ ಅಣ್ಣನ ವಿರುದ್ದವೇ ಸಿಡಿದೇಳುವ ನಾಟಕೀಯ ಸನ್ನಿವೇಶವನ್ನು ಪ್ರಸಂಗದ ಈ ಸನ್ನಿವೇಶದಲ್ಲಿ ಗಮನಿಸಬಹುದಾಗಿದೆ.

ಇಲ್ಲಿ ಮೇಲಿನ ಪದ್ಯಗಳು ಸ್ತ್ರೀ ವರ್ಣನೇ ಎಂದು ಅಥವಾ ಈ ಪದ್ಯದ ಸ್ಥಾಯಿಭಾವ ಶೃಂಗಾರವೆಂದು ತಿಳಿದುಕೊಂಡರೆ ತಪ್ಪು. ಇದರಲ್ಲಿ  ವಿಡಂಬನೆ, ವೀರ, ಕರುಣ ರಸವೇ ಇಲ್ಲಿ ಪ್ರಧಾನ. ಭೀಮನಲ್ಲಿ ಹೊಗೆಯಾಡುತ್ತಿದ್ದ ಅಸಮಧಾನಕ್ಕೆ ಬೆಂಕಿಯಲ್ಲಿಯೇ ಹುಟ್ಟಿದ ಯಜ್ಞಾಸೇನೆ ಗಾಳಿಯನ್ನು ಹಾಕಿ ಇನ್ನಷ್ಟು ಉರಿಯುವಂತೆ ಮಾಡುತ್ತಾಳೆ. ಅಗ್ನಿ ಮತ್ತು ವಾಯುವಿನ ತಳಹದಿಯ ಪಾತ್ರಗಳಾದ ಭೀಮ ಮತ್ತು ದ್ರೌಪದಿ ಪಾತ್ರಗಳನ್ನು ಒಬ್ಬರಿಗೊಬ್ಬರು ಪೂರಕ ವಾಗಿ ಪ್ರೇರಕವಾಗಿ ಇರುವುದನ್ನು ಕವಿ ಸೂಕ್ಷ್ಮವಾಗಿ
ಹೇಳುತ್ತಾನೆ. ಜತೆಗೆ ಈ ಸನ್ನಿವೇಶವು ದಾಂಪತ್ಯದ ಮುನಿಸು, ಸರಸ, ನೋವು, ಆಕ್ಷೇಪ, ಕ್ರೋಧ ಇತ್ಯಾದಿ ರಸಭಾವಗಳ ಮಿಶ್ರಣವಾಗಿದೆ.

ಯರಕಲ ಕಾಂಬೋಧಿ ಅಷ್ಟ(ಪ್ರಸಂಗ: ಆದಿನಾರಾಯಣ ದರ್ಶನ, ಕವಿ: ಶ್ರೀಧರ್ ಡಿ.ಎಸ್) ಪಾಲಗಡಲೊಳು ಪವಡಿಸಿದ ಕರು
ಣಾಲವಾಲನನು ವಿಶ್ವದ ಮೂಲಮೂರ್ತಿಯ ಸೇವಿಸುತಲಿಹ ಶ್ರೀಲತಾಂಗಿಯನು ಪಾರ್ಷದ ರೋಲಗಿಸುವ ಸ್ವಮೂರ್ತಿಗಣಗಳ
ಲೀಲೆ ಮೆರೆವುದನು ರಂಜಿಪ ನೀಲವಕ್ಷದಿ ಕೌಸ್ತುಭದ ಮಣಿ ಮಾಲೆ ಪೊಳೆವುದನು ಸುತ್ತಿಹ ವ್ಯಾಾಳಭೋಗವನಾಡಿಸುತ್ತಲಿ
ಮೇಲೆ ತೊನೆವುದನು ಬೆಳಗುವ  ಸಾಲು ಸಾವಿರ ಸ್ತಂಭ ಸೊಗಸಿನ  ಏಳು ಬಾಗಿಲ ದಾಟಿ ಬರುತಲಿ  ಕಾಲಯಂತ್ರನಿಯಂತ್ರತಂತ್ರನ
ಪಾಲನಾಪುರುಷನನು ಕಂಡರು ॥

ಇಡೀ ಒಂದು ಪದ್ಯದಲ್ಲಿ ಸಮಗ್ರವಾಗಿ ವೈಕುಂಠವನ್ನು ಚಿತ್ರಿಸಿರುವುದು ಈ ಪದ್ಯದ ವೈಶಿಷ್ಟ್ಯ. ಪ್ರಾಸನುಪ್ರಾಸದಲ್ಲಿ ಪೊಣಿಸಿ, ಅತ್ಯಂತ ಕಡಿಮೆ ಪದಗಳಲ್ಲಿ ವರ್ಣಿಸಿರು ವುದು ಯಕ್ಷಗಾನ ಸಾಹಿತ್ಯವು ಕನ್ನಡವನ್ನು ಉತ್ಕೃಷ್ಟವಾಗಿ ಬಳಸಿದ ವಿಧಾನವನ್ನು
ತಿಳಿಸುತ್ತದೆ. ಹೀಗೆ ಇಂತಹ ಸಾವಿರಾರು ರಚನೆಗಳನ್ನು ಯಕ್ಷಗಾನ ಸಾಹಿತ್ಯದಲ್ಲಿ ಪ್ರಯೋಗಿಸಿರುವುದನ್ನು ಕಾಣಬಹುದಾಗಿದೆ.

ಕಾವ್ಯಗಳ ರಚನೆಯಲ್ಲಿ ಛಂದಸ್ಸು ಪ್ರಧಾನವಾಗಿರುತ್ತದೆ. ಛಂದಸ್ಸನ್ನು ಬಿಟ್ಟರೆ ಕಾವ್ಯ  ಸಾಯುತ್ತವೆ. ಇಲ್ಲಿಯವರೆಗೆ ಯಕ್ಷಗಾನ ದಲ್ಲಿ 150ಕ್ಕೂ ಅಧಿಕ ಸಂಖ್ಯೆಯ ಛಂದಸ್ಸನ್ನು ಯಕ್ಷಗಾನ ಕವಿಗಳು ಬಳಸಿರುವುದನ್ನು ಸಂಶೋಧಕರು ಗುರುತಿಸುತ್ತಾರೆ. ಕೇವಲ ಕನ್ನಡ ಸಾಹಿತ್ಯದಲ್ಲಿ ಕಾಣುವ ವಾರ್ಧಕ, ಭಾಮಿನಿ, ದ್ವಿಪದಿ, ಕಂದ, ಪಟ್ಪದಿ ಇತ್ಯಾದಿಗಳ ಜೊತೆಗೆ ಹೊಸ ಛಂದಸ್ಸುಗಳನ್ನು ಯಥೇಚ್ಛವಾಗಿ ಯಕ್ಷಗಾನ ಕವಿಗಳು ಬಳಸಿರುವುದು ವಿಶೇಷವಾಗಿದೆ.

ಕೆಲವು ಶತಮಾನಗಳ ಹಿಂದೆ ರಚಿತವಾದ ಕೃಷ್ಣ ಸಂಧಾನ, ಭೀಷ್ಮ ವಿಜಯ ಇತ್ಯಾದಿ ಪ್ರಸಂಗಗಳು ಇಂದಿಗೂ ಕೂಡ ಅದು ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಅದರ ಸಾಹಿತ್ಯ. ಅಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಇತ್ಯಾದಿಗಳ ಬಗೆಗೆ ಇಂದಿಗೂ ಚರ್ಚೆಗಳಾಗಿ ಆ ಪ್ರಸಂಗಗಳು ನಿತ್ಯ ನೂತನದಂತೆ ಕಂಗೊಳಿಸುತ್ತದೆ. ಬಹುಶಃ ಇಲ್ಲಿ ನಡೆದಷ್ಟು ಚರ್ಚೆಗಳು ಬೇರೆ ಯಾವ ಸಾಹಿತ್ಯದಲ್ಲೂ ನಡೆದಂತೆ ಕಾಣಿಸುವುದಿಲ್ಲ. ಆದರೆ ಇದಾವುದೂ ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಸದೆ  ಇರುವುದು ಖೇದಕರ ವಿಚಾರ. ಕೇವಲ ನಾವು ಪ್ರಸಂಗದಲ್ಲಿನ ಸಾಹಿತ್ಯವನ್ನು ಮಾತ್ರ ಗ್ರಹಿಸಿದರೆ ಸಾಲುವುದಿಲ್ಲ. ಅದು ಕಟ್ಟಿಕೊಡುವ ಮೌಖಿಕ ಸಾಹಿತ್ಯವನ್ನು ಸಹ ಅವಲೋಕಿಸುವ ಅಗತ್ಯವಿದೆ.

ಒಂದು ಪ್ರದರ್ಶನದ ಪ್ರಸ್ತುತಿಯಲ್ಲಿ ಹೊತ್ತಿಗೆ ನೀಡಬಹುದಷ್ಟು ಆಶಯಗಳನ್ನು, ವಿಚಾರ ಗಳನ್ನು, ಒಳನೋಟವನ್ನು ಕೊಡುವ ಸಾಮರ್ಥ್ಯ ಯಕ್ಷಗಾನ ಪ್ರದರ್ಶನಗಳಲ್ಲಿ ಸಿಗುತ್ತದೆ ಎಂದರೆ ಆಶ್ಚರ್ಯ ವೆನಿಸುತ್ತದೆ. ಹಾಗಾಗಿಯೇ ಇದನ್ನು ಕೇವಲ ಕಲಾ
ವಿಮರ್ಶೆಯ ದೃಷ್ಟಿಕೋನದಿಂದ ನೋಡಿದರೆ ಮಾತ್ರ ಸಾಲದು, ಅದರ ಪ್ರಚುರಪಡಿಸುವ ಸಾಹಿತ್ಯ, ಬಳಸಿಕೊಳ್ಳುವ ವಿಧಾನಗಳು ಇತ್ಯಾದಿಗಳನ್ನು ಸಹ ಮೌಖಿಕ ಸಾಹಿತ್ಯವಾಗಿ ಹೊರಗಿನಿಂದ ನೋಡುವ ಅಗತ್ಯವಿದೆ.

ಒಂದು ಅಂದಾಜಿನ ಪ್ರಕಾರ ವಾರ್ಷಿಕ ವಾಗಿ ಸರಾಸರಿ ಸುಮಾರು 10 ಸಾವಿರ (ಕಳೆದ ಹತ್ತು ವರುಷಗಳಲ್ಲಿ) ಯಕ್ಷಗಾನ/ ತಾಳಮದ್ದಲೆ ಪ್ರದರ್ಶನ ಗಳು ಸಂಪನ್ನವಾಗಿದೆ. ಹಾಗಾದರೆ ಕಳೆದ 6-7 ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಿರುವ ಯಕ್ಷಗಾನ
ವು ಇಲ್ಲಿಯವರೆಗೆ ಒಟ್ಟು ಪ್ರದರ್ಶನಗಳನ್ನು ನೀಡಿರಬಹುದು? ಆ ಪ್ರದರ್ಶನಗಳಿಂದ ಸಮಾಜದಲ್ಲಿ ಆದ ಬದಲಾವಣೆಗಳೇನು? ಇದು ಕನ್ನಡ ಸಾಹಿತ್ಯವನ್ನು ಬಳಸಿಕೊಂಡು ಸೃಷ್ಟಿಸಿದ ತಲ್ಲಣಗಳೇನು? ಸಾಂಸ್ಕೃತಿಕ, ಕಲೆ ಹಾಗೂ ಭಾಷೆಯ ಬಗೆಗಿನ ಬೆಳೆಸಿದ ಸಂಸ್ಕಾರಗಳ ಪ್ರಭಾವಗಳೇನು? ಇಂದು ನಾವು ಕನ್ನಡ ಅಸ್ಮಿತೆಯ ಬಗೆಗೆ ಮಾತುಗಳನ್ನು ಆಡುತ್ತೇವೆ. ಆದರೆ ಯಕ್ಷಗಾನ
ಪ್ರದರ್ಶನಗೊಳ್ಳುವ ಪ್ರದೇಶಗಳಲ್ಲಿ ಕನ್ನಡ ಜೀವಂತವಾಗಿರುವುದಕ್ಕೆ ಹಾಗೂ ಶತಮಾನಗಳಿಂದ ಅದು ಸಂಸ್ಕಾರಯುತವಾಗಿ ಬೆಳೆಯುವುದಕ್ಕೆ ಯಕ್ಷಗಾನ ನೀಡಿದ ಕೊಡುಗೆಗಳೇನು? ಇಂಥ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಕಾಡುತ್ತದೆ.

ಇಂಥ ಪ್ರಶ್ನೆಗಳು ಮಡುಗಟ್ಟ ನಿಲ್ಲುವುದಕ್ಕೆ ಕನ್ನಡ ಸಾಹಿತ್ಯ ವಲಯ ಯಕ್ಷಗಾನದ ಬಗೆಗೆ ತಳೆದಿರುವ ನಿಲವು ಕಾರಣವಾಗಿದೆ.
ಹಾಡುಗಬ್ಬಗಳು, ನಾಟಕಗಳು ಕೂಡ ಸಾಹಿತ್ಯವೆಂದು ಕರೆಯಲ್ಪಡುವಾಗ ಅದೇ ಸಾಲಿನಲ್ಲಿಯೇ ನಿಲ್ಲುವ ಯಕ್ಷಗಾನದ ಸಾಹಿತ್ಯವನ್ನು ಕನ್ನಡ ಸಾಹಿತ್ಯ ವಲಯ ಪರಿಗಣಿಸದೇ ಇರುವುದು ಚರ್ಚಿಸುವ ವಿಷಯವಾಗಿದೆ.