-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ತಮನ್ನಾ ಬಾಟಿಯಾ (Tamannaah Bhatia) ಧರಿಸಿದ ಡೆನಿಮ್ ಬಾಡಿಕಾನ್ ಲಾಂಗ್ ಮೆರ್ಮೈಡ್ ಡ್ರೆಸ್ (Star Fashion) ಇದೀಗ ಟ್ರೆಂಡಿಯಾಗಿದೆ. ಸಾಮಾನ್ಯವಾಗಿ ಪ್ರತಿ ಬಾರಿಯ ವಿಂಟರ್ ಸೀಸನ್‌ನಲ್ಲೂ ಒಂದಲ್ಲ, ಒಂದು ಶೈಲಿಯ ಡೆನಿಮ್ ಡ್ರೆಸ್‌ಗಳು ಹೊಸ ರೂಪದಲ್ಲಿ ಡಿಸೈನ್‌ನಲ್ಲಿ ಆಗಮಿಸುತ್ತವೆ. ಇನ್ನು, ಎವರ್‌ಗ್ರೀನ್ ಫ್ಯಾಷನ್‌ವೇರ್‌ಗಳಾದ ಡೆನಿಮ್ ಜಾಕೆಟ್, ಜೀನ್ಸ್ ಪ್ಯಾಂಟ್, ಶಾರ್ಟ್ಸ್, ಡಂಗ್ರೀಸ್ ಹಾಗೂ ಮಿಡಿ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳು ಎಂದಿನಂತೆ ಚಾಲ್ತಿಯಲ್ಲಿರುತ್ತವೆ. ಅಲ್ಲದೇ, ಸೆಲೆಬ್ರೆಟಿಗಳು ಕೂಡ ಆಗಾಗ್ಗೆ ನಾನಾ ಶೈಲಿಯ ಪ್ರಯೋಗಾತ್ಮಕ ಡಿಸೈನ್‌ನ ಡೆನಿಮ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಹೀರ್.
ಡೆನಿಮ್ ಲಾಂಗ್ ಡ್ರೆಸ್ ಟ್ರೆಂಡ್ ಸೆಟ್ ಮಾಡಿದ ತಮನ್ನಾ
ಡೆನಿಮ್‌ನಲ್ಲೂ ಪ್ರಯೋಗಾತ್ಮಕ ಡಿಸೈನರ್‌ವೇರ್ ಧರಿಸಬಹುದು ಎಂಬುದಕ್ಕೆ ನಟಿ ತಮನ್ನಾ ಧರಿಸಿದ ಡೆನಿಮ್ ಬಾಡಿಕಾನ್ ಲಾಂಗ್ ಡ್ರೆಸ್ ಸರಿಯಾದ ಉದಾಹರಣೆ ಎನ್ನಬಹುದು. ಇವರು ಧರಿಸಿದ ಮೆರ್ಮೈಡ್ ಲಾಂಗ್ ಡೆನಿಮ್ ಡ್ರೆಸ್ ಫ್ಯಾಷನ್ ಪ್ರಿಯರನ್ನು ಸೆಳೆದಿರುವುದು ಮಾತ್ರವಲ್ಲ, ಈ ಸೀಸನ್‌ನ ಹಿಟ್ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಏನಿದು ಡೆನಿಮ್ ಬಾಡಿಕಾನ್ ಲಾಂಗ್ ಡ್ರೆಸ್?
ನೋಡಲು ಗೌನ್‌ನಂತೆ ಬಿಂಬಿಸುವ ಇವು, ಈ ಸೀಸನ್‌ಗೆ ಹೊಂದುವಂತಹ ಡಿಸೈನ್‌ನಿಂದ ವಿನ್ಯಾಸಗೊಂಡಿರುತ್ತವೆ. ಫುಲ್ ಸ್ಲೀವ್, ಲಾಂಗ್ ಲೆಂಥ್ ಹಾಗೂ ಬಾಡಿಕಾನ್ ಶೈಲಿಯಲ್ಲಿರುತ್ತವೆ. ಇದನ್ನು ಡೆನಿಮ್ ಬಾಡಿಕಾನ್ ಲಾಂಗ್ ಡ್ರೆಸ್ ಎನ್ನಲಾಗುತ್ತದೆ. ಬಹುತೇಕ ಡೆನಿಮ್ ಡ್ರೆಸ್‌ಗಳ ಫ್ಯಾಬ್ರಿಕ್ ಕೊಂಚ ದಪ್ಪನಾಗಿ ಇರುವುದರಿಂದ ಚಳಿಗಾಲದಲ್ಲಿ ಇವು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಡಿಸೈನರ್ ನಿಖಿತಾ. ಅವರ ಪ್ರಕಾರ, ಡೆನಿಮ್ ಲಾಂಗ್ ಡ್ರೆಸ್ ನೋಡಲು ಗೌನ್‌ನಂತೆಯೇ ಕಾಣಿಸುತ್ತವೆ. ಕೆಲವು ಮೆರ್ಮೈಡ್ ಡಿಸೈನ್, ಇನ್ನು ಕೆಲವು ಮ್ಯಾಕ್ಸಿ ಹಾಗೂ ಅಂಬ್ರೆಲ್ಲಾ ಟೈಟ್ & ಫ್ಲೇರ್ ಮಿಡಿಯಂತೆಯೂ ಕಾಣಿಸುತ್ತವೆ ಎನ್ನುತ್ತಾರೆ.
ವಿಂಟರ್ ಸೀಸನ್ ಫ್ಯಾಷನ್‌ನಲ್ಲಿ ಡೆನಿಮ್ ಡ್ರೆಸ್ ಆಯ್ಕೆ ಹೇಗೆ?
- ಬಾಡಿ ಫಿಟ್ ಡೆನಿಮ್ ಡ್ರೆಸ್‌ಗಳ ಆಯ್ಕೆ ಉತ್ತಮ, ಹಾಗೆಂದು ಸ್ಕಿನ್ ಟೈಟ್ ಆಗಿರಕೂಡದು.
- ಇದೀಗ ಫುಲ್ ಸ್ಲೀವ್ ಡೆನಿಮ್ ಡ್ರೆಸ್‌ಗಳು ಚಾಲ್ತಿಯಲ್ಲಿವೆ.
- ಸೆಲೆಬ್ರೆಟಿ ಲುಕ್‌ಗಾಗಿ ಗೌನ್ ಹಾಗೂ ಮೆರ್ಮೈಡ್ ಡಿಸೈನ್‌ನವನ್ನು ಚೂಸ್ ಮಾಡಬಹುದು.
- ಸಿಂಗಲ್ ಪೀಸ್ ಡೆನಿಮ್ ಡ್ರೆಸ್‌ಗಳು ಕಂಫರ್ಟಬಲ್ ಫೀಲ್ ನೀಡುತ್ತವೆ.
- ಶರ್ಟ್ ಸ್ಟೈಲ್ ಡೆನಿಮ್ ಡ್ರೆಸ್‌ಗಳು ಬಟನ್ ಹೊಂದಿರುತ್ತವೆ. ಇವು ವಿಂಟೆಜ್ ಲುಕ್ ನೀಡುತ್ತವೆ.
- ಆದಷ್ಟೂ ಲೈಟ್‌ವೈಟ್ ಡೆನಿಮ್ ಡ್ರೆಸ್ ಆಯ್ಕೆ ಮಾಡಿ.
- ಲಾಂಗ್ ಡೆನಿಮ್ ಡ್ರೆಸ್ ದೇಹವನ್ನು ಬೆಚ್ಚಗಿಡುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)