Tuesday, 17th December 2024

Shot Dead: ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ; ವಾಕಿಂಗ್‌ ಮಾಡುತ್ತಿದ್ದ ಉದ್ಯಮಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ

Shot Dead

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ಶನಿವಾರ (ಡಿ. 7) ಬೆಳ್ಳಂಬೆಳಗ್ಗೆ ಶೂಟೌಟ್‌ ನಡೆದಿದ್ದು, ವಾಕಿಂಗ್‌ ಹೋಗುತ್ತಿದ್ದ 52 ವರ್ಷದ ಉದ್ಯಮಿಯೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ಸುನಿಲ್‌ ಜೈನ್‌ (Sunil Jain) ಎಂದು ಗುರುತಿಸಲಾಗಿದೆ. ಪೂರ್ವ ದಿಲ್ಲಿಯ ಶಹದಾರಾದಲ್ಲಿ ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದ ಅವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Shot Dead).

ʼʼಉದ್ಯಮಿ ಸುನಿಲ್‌ ಜೈನ್‌ ಎಂದಿನಂತೆ ಯಮುನಾ ಸ್ಫೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ವಾಕಿಂಗ್‌ ಮಾಡಿ ಹಿಂದಿರುಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ಮಳೆಗೆರೆದಿದ್ದಾರೆʼʼ ಎಂದು ಪೊಲೀಸರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ. ʼʼಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಸುನಿಲ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರುʼʼ ಎಂದು ಅವರು ವಿವರಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರಿಗೆ ಯಾರೂ ಶತ್ರುಗಳು ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಆಮ್‌ ಆದ್ಮಿ ಪಾರ್ಟಿ ಮುಖಂಡ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಅಮಿತ್‌ ಶಾ ದಿಲ್ಲಿಯ ಕಾನೂನು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ದಿಲ್ಲಿಯ ಕಾನೂನು ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಅಪರಾಧ ಚಟುವಟಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸಾರ್ವಜನಿಕರು ಈ ಬಗ್ಗೆ ಧ್ವನಿ ಎತ್ತಬೇಕುʼʼ ಎಂದು ಅವರು ಬರೆದುಕೊಂಡಿದ್ದಾರೆ.

ದಿಲ್ಲಿ ಸರ್ಕಾರದ ಸಚಿವ, ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ದಾಳಿಕೋರರು ಜೈನ್ ಮೇಲೆ 6-7 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ದಿಲ್ಲಿಯನ್ನು ʼಅಪರಾಧಗಳ ರಾಜಧಾನಿʼ ಎಂದು ಕರೆದಿದ್ದಾರೆ. ರಾಷ್ಟ್ರ ರಾಜಧಾನಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಇಲ್ಲಿನ ಪೊಲೀಸ್‌ ವ್ಯವಸ್ಥೆ ಕೇಂದ್ರ ಗೃಹ ಸಚಿವಾಲಯದ ನಿಯಂತ್ರನಕ್ಕೆ ಬರುತ್ತದೆ. ಹೀಗಾಗಿ ಎಪಿಸಿ ಬಿಜೆಪಿ ವಿರುದ್ದ ಆರೋಪ ಹೊರಿಸಿದೆ. ಫೆಬ್ರವರಿಯಲ್ಲಿ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆ ವೇಳೆ ದಿಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಎಪಿಪಿ ಪ್ರಮುಖ ಪ್ರಚಾರದ ವಿಷಯವನ್ನಾಗಿಸಲಿದೆ.

ಈ ಸುದ್ದಿಯನ್ನೂ ಓದಿ: Delhi Murder: ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ಮಾವ-ಸೋದರಳಿಯ ಶೂಟೌಟ್‌; ಬೆಚ್ಚಿ ಬೀಳಿಸಿದ ಡಬಲ್‌ ಮರ್ಡರ್‌! ವಿಡಿಯೋ ಇದೆ