ಡಮಾಸ್ಕಸ್ (ಸಿರಿಯಾ): ಉತ್ತರ ಸಿರಿಯಾ(Syria)ದಲ್ಲಿರುವ ಅಲೆಪ್ಪೊ ನಗರದ ಮೇಲೆ ಜಿಹಾದಿ ಪಡೆಗಳು ದಾಳಿ ನಡೆಸಿದ ಬಳಿಕ, ಈಗ ಸಿರಿಯಾದತ್ತ ಮತ್ತೊಮ್ಮೆ ಜಗತ್ತಿನ ದೃಷ್ಟಿ ನೆಟ್ಟಿದೆ. ಅಲೆಪ್ಪೊ ಇರುವ ಕಾರ್ಯತಂತ್ರದ ತಾಣ ಮತ್ತು ಅದು ಹೊಂದಿರುವ ಐತಿಹಾಸಿಕ ಮಹತ್ವಗಳ ಕಾರಣದಿಂದಾಗಿ ಅದು ವ್ಯಾಪಾರ, ಸಂಸ್ಕೃತಿ ಮತ್ತು ಈ ಪ್ರದೇಶದ ಮೇಲಿನ ನಿಯಂತ್ರಣಕ್ಕೆ ಮುಖ್ಯ ಸ್ಥಳವಾಗಿದ್ದು, ನವೆಂಬರ್ 27ರಂದು, ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ಉಗ್ರಗಾಮಿ ಗುಂಪಾದ ತಹ್ರಿರ್ ಅಲ್ ಶಮ್ ಮತ್ತು ಸಿರಿಯನ್ ನ್ಯಾಷನಲ್ ಆರ್ಮಿಗಳು ಉಗ್ರರು ಅಲೆಪ್ಪೊ ನಗರವನ್ನು ಗುರಿಯಾಗಿಸಿ, ದಾಳಿ ನಡೆಸಲಾರಂಭಿಸಿದೆ.
ಹೌದು, ಕಳೆದ 13 ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಸಿರಿಯಾ ಈಗ ಧಗಧಗ ಎಂದು ಉರಿಯುತ್ತಿದ್ದು, ಈ ದೇಶ ಅಂತರ್ಯುದ್ಧಕ್ಕೆ ಸಾಕ್ಷಿಯಾಗಿದೆ. ಕಳೆದ ಕೆಲ ದಿನಗಳಿಂದ ಈ ಯುದ್ಧ ಮತ್ತಷ್ಟು ಪಡೆದುಕೊಂಡಿದ್ದು, ಸದ್ಯದ ಬೆಳವಣಿಗೆ ಪ್ರಕಾರ, ಹಮಾ, ಅಲೆಪ್ಪೊ ನಗರದ ಬಳಿಕ ದಾರಾ ನಗರವನ್ನೂ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಾರಾ ನಗರದ ಮೇಲೆ ವಿವಿಧ ದಿಕ್ಕುಗಳಿಂದ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಪ್ರಾರಂಭಿಸಿದ ಹಿಂಸಾತ್ಮಕ ಮತ್ತು ಸತತ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಸರ್ಕಾರದ ಸಶಸ್ತ್ರ ಪಡೆಗಳು ವಿಫಲವಾಗಿದ್ದು, ಇದು ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರ ಭಾರೀ ಹೊಡೆತ ನೀಡಿದಂತಾಗಿದೆ.
ಸದ್ಯ ಸಿರಿಯಾದಲ್ಲಿ (Syria) ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ (Indian Government) ಕಳವಳ ವ್ಯಕ್ತಪಡಿದ್ದು, ಆದಷ್ಟು ಬೇಗ ಅಲ್ಲಿಂದ ವಾಪಸ್ ಆಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ(MEA) ಸೂಚನೆ ನೀಡಿದೆ.
ಸಿರಿಯಾದಲ್ಲಿ ಹಿಂಸಾಚಾರ ಮತ್ತು ಅಶಾಂತಿ ಹೆಚ್ಚುತ್ತಿದ್ದು, ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನಲೆಯಲ್ಲಿ ಅಲ್ಲಿನ ಭಾರತೀಯರ ಬಗ್ಗೆ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ಸಿರಿಯಾದಲ್ಲಿರುವ ಭಾರತದ ನಾಗರಿಕರಿಗೆ ಎಚ್ಚರಿಕೆಯನ್ನು ವಹಿಸುವಂತೆ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರ ಇರುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ನಾಗರಿಕರನ್ನು ಕೇಳಿಕೊಂಡಿದೆ. ಜೊತೆಗೆ ಡಿಸೆಂಬರ್ 6ರ ಮಧ್ಯರಾತ್ರಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದೆ.
ಹಾಗೇ ಸಿರಿಯಾಲ್ಲಿರುವ ಭಾರತೀಯ ನಾಗರೀಕರು ಈ ತಕ್ಷಣವೇ ಹೊರಟುಬರಲು ಸೂಚಿಸಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೆ ಹೊರಟು ಬರಲು ಸೂಚನೆ ನೀಡಿದೆ.
ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಭಾರತೀಯ ಪ್ರಜೆಗಳಿಗೆ ತುರ್ತು ಸಹಾಯವಾಣಿ ಸಂಖ್ಯೆ, ಇಮೇಲ್ ಐಡಿಯನ್ನು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಯಾವುದೇ ಕ್ಷಣದಲ್ಲಿ ಅಪಾಯ ಎದುರಾದರೂ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಕೋರಿದೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ, ‘ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯರು ತಮ್ಮ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್ನಲ್ಲಿಯೂ ಸಹ) ಮತ್ತು ನವೀಕರಣಗಳಿಗಾಗಿ ಇಮೇಲ್ ಐಡಿ hoc.damascus@mea.gov.inನಲ್ಲಿ ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ’ ಎಂದು ಹೇಳಿದೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಮಾತನಾಡಿದ್ದು, ಸಿರಿಯಾದ ಉತ್ತರದಲ್ಲಿ ಇತ್ತೀಚಿನ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಸದ್ಯ ಸಿರಿಯಾದಲ್ಲಿ ಸುಮಾರು 90 ಭಾರತೀಯರಿದ್ದು, ಅದರಲ್ಲಿ 14 ಮಂದಿ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶಾಂಗ ಸಚಿವಾಲಯ ಸುರಕ್ಷತೆ ಮತ್ತು ಭದ್ರತೆಗಾಗಿ ಭಾರತೀಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Shot Dead: ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ; ವಾಕಿಂಗ್ ಮಾಡುತ್ತಿದ್ದ ಉದ್ಯಮಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ