ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ (IND vs AUS) ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಪಂದ್ಯದ ಎರಡನೇ ದಿನ ಜಸ್‌ಪ್ರೀತ್ ಬುಮ್ರಾ (Jasprit Bumrah) ಬೌಲಿಂಗ್ ವೇಳೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ನೆಲಕ್ಕೆ ಉರುಳಿದರು.
ಆಸ್ಟ್ರೇಲಿಯಾ ತಂಡದ ಪ್ರಥಮ ಇನಿಂಗ್ಸ್‌ನ 81ನೇ ಓವರ್‌ನ ಆರಂಭಿಕ ಎರಡು ಎಸೆತಗಳಲ್ಲಿ ಜಸ್‌ಪ್ರೀತ್ ಬುಮ್ರಾ, ಟ್ರಾವಿಸ್ ಹೆಡ್ ಅವರನ್ನು ಬೀಟ್ ಮಾಡಿಸಿದ್ರುದ. ನಂತರ ಮೂರನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಬೌಂಡರಿ ಬಾರಿಸಿದರು. ಬಳಿಕ ನಾಲ್ಕನೇ ಎಸೆತದಲ್ಲಿಯೂ ಬುಮ್ರಾಗೆ ಟ್ರಾವಿಸ್ ಹೆಡ್ ಬೌಂಡರಿ ಹೊಡೆದರು. ಈ ವೇಳೆ ಜಸ್‌ಪ್ರೀತ್ ಬುಮ್ರಾ, ತಮ್ಮ ಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ನೆಲಕ್ಕೆ ಉರುಳಿದರು. ಈ ವೇಳೆ ಮೈದಾನಕ್ಕೆ ಆಗಮಿಸಿದ ಫಿಸಿಯೊ, ಜಸ್‌ಪ್ರೀತ್ ಬುಮ್ರಾ ಅವರ ಕಾಲನ್ನು ಪರಿಶೀಲನೆ ನಡೆಸಿದರು.
ಇದಾದ ಬಳಿಕ ಜಸ್‌ಪ್ರೀತ್ ಬುಮ್ರಾ 81ನೇ ಓವರ್ ಅನ್ನು ಪೂರ್ಣಗೊಳಿಸಿದರು. ಈ ವೇಳೆ ಕಾಮೆಂಟರಿ ಮಾಡುತಿದ್ದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ಜಸ್‌ಪ್ರೀತ್ ಬುಮ್ರಾ ತಮ್ಮ ತೊಡೆಯ ಭಾಗವನ್ನು ಕೈನಲ್ಲಿ ಹಿಡಿದಿದ್ದಾರೆಂದು ಹೇಳಿದ್ದರು. 81ನೇ ಓವರ್ ಅನ್ನು ಪೂರ್ಣಗೊಳಿಸಿದ ಬಳಿಕ ಜಸ್‌ಪ್ರೀತ್ ಬುಮ್ರಾ ಅವರು ಮೈದಾನದಲ್ಲಿ ಆರಾಮದಾಯಕವಾಗಿ ಕಂಡರು ಹಾಗೂ 83ನೇ ಓವರ್‌ನಲ್ಲಿಯೂ ಬೌಲ್ ಮಾಡಲು ಬಂದಿದ್ದರು ಹಾಗೂ ತಮ್ಮ ಬೌಲಿಂಗ್ ಸ್ಪೆಲ್ ಅನ್ನು ಪೂರ್ಣಗೊಳಿಸಿದ್ದರು.
ಇದಕ್ಕೂ ಮುನ್ನ ಮೆಕ್‌ಸ್ವೀನಿ ಅವರನ್ನು ಔಟ್ ಮಾಡುವ ಮೂಲಕ ಜಸ್‌ಪ್ರೀತ್ ಬುಮ್ರಾ ಎರಡನೇ ದಿನದಾಟವನ್ನು ಆರಂಭಿಸಿದ್ದರು. ನಂತರ ಅನುಭವಿ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರನ್ನು ಕೂಡ ಬುಮ್ರಾ ಔಟ್ ಮಾಡಿದ್ದರು. ಅಂತಮವಾಗಿ ಆಸ್ಟ್ರೇಲಿಯಾ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಬೌಲ್ ಮಾಡಿದ 23 ಓವರ್‌ಗಳಲ್ಲಿ 61 ರನ್‌ಗಳನ್ನು ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದ್ದರು.
ಟ್ರಾವಿಸ್ ಹೆಡ್ ಶತಕ
ಮಾರ್ನಸ್ ಲಾಬುಶೇನ್ 64 ರನ್‌ಗಳನ್ನು ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದರು. ನಂತರ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಟ್ರಾವಿಸ್ ಹೆಡ್ ದೀರ್ಘಾವಧಿ ಬ್ಯಾಟ್ ಮಾಡಿದರು. ಅವರು ಆಡಿದ 141 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 17 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಎಡಗೈ ಬ್ಯಾಟ್ಸ್‌ಮನ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಎಂಟನೇ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಟ್ರಾವಿಸ್ ಹೆಡ್ ಅವರನ್ನು ಮೊಹಮ್ಮದ್ ಸಿರಾಜ್ ಯಾರ್ಕರ್ ಹಾಕಿ ಕ್ಲೀನ್ ಬೌಲ್ಡ್ ಮಾಡಿದರು.
ಆಸ್ಟ್ರೇಲಿಯಾಗೆ ಭಾರಿ ಮುನ್ನಡೆ
ಅಂತಿಮವಾಗಿ ಆಸ್ಟ್ರೇಲಿಯಾ ತಂಡ 87.3 ಓವರ್‌ಗಳಿಗೆ 337 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆಯನ್ನು ಪಡೆಯಿತು. ಟೀಮ್ ಇಂಡಿಯಾ ಪರ ಬುಮ್ರಾ ಮತ್ತು ಸಿರಾಜ್ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ನಿತೀಶ್ ರೆಡ್ಡಿ ಮತ್ತು ಆರ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
ಈ ಸುದ್ದಿಯನ್ನು ಓದಿ: IND vs AUS: ಕಪಿಲ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್ ಬುಮ್ರಾ