ಅಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ (IND vs AUS) ಟೆಸ್ಟ್ ಸರಣಿ ಎಂದ ಮೇಲೆ ಆಟಗಾರರ ನಡುವೆ ಸ್ಲೆಡ್ಜಿಂಗ್ ಇದ್ದೇ ಇರುತ್ತದೆ. ಅದರಂತೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಈ ಟೆಸ್ಟ್ ಸರಣಿಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಕಾಣುತ್ತಿದ್ದಾರೆ. ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್, ಆಸೀಸ್ ಆಟಗಾರರಿಗೆ ಬೌಲಿಂಗ್ ದಾಳಿಯ ಜೊತೆಗೆ ಮಾತಿನಲ್ಲಿಯೂ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಪಂದ್ಯದ ಆರಂಭಿಕ ದಿನ ಮಾರ್ನಸ್ ಲಾಬುಶೇನ್ ಅವರ ವಿರುದ್ಧ ಕಿಡಿ ಕಾರಿದ್ದ ಮೊಹಮ್ಮದ್ ಸಿರಾಜ್, ಎರಡನೇ ದಿನವಾದ ಶನಿವಾರ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಕೆಣಕಿದ್ದಾರೆ. ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ಮೊಹಮ್ಮದ್ ಸಿರಾಜ್ ಆಸೀಸ್ ಆಟಗಾರನಿಗೆ ಯಾವುದೋ ಪದವನ್ನು ಬಳಸಿದರು. ಇದಕ್ಕೆ ಆಕ್ರೋಶಗೊಂಡ ಹೆಡ್ ಕೂಡ ಮಾತಿನ ತಿರುಗೇಟು ನೀಡಿದ್ದರು.
ಅಂದ ಹಾಗೆ ಪಂದ್ಯದ ಎರಡನೇ ದಿನ ಮಾರ್ನಸ್ ಲಾಬುಶೇನ್ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡಕ್ಕೆ ದೀರ್ಘಾವಧಿ ಕಾಡಿದ್ದು ಟ್ರಾವಿಸ್ ಹೆಡ್! ಈ ಹಿಂದೆ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ಅಪಾಯಕಾರಿಯಾಗಿದ್ದರು.
IND vs AUS: ಗಂಟೆಗೆ 181.6 kph ವೇಗದಲ್ಲಿ ಬೌಲಿಂಗ್ ನಡೆಸಿದರೇ ಸಿರಾಜ್?
ಅದರಂತೆ ಇದೀಗ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿಯೂ ಟ್ರಾವಿಸ್ ಹೆಡ್ ಟೀಮ್ ಇಂಡಿಯಾ ಬೌಲರ್‌ಗಳಿಗೆ ಬಲವಾಗಿ ಕಾಡಿದರು. ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಹಾಗೂ ನಿತೀಶ್ ರೆಡ್ಡಿ ಅವರನ್ನು ಟ್ರಾವಿಸ್ ಹೆಡ್ ಸಮರ್ಥವಾಗಿ ಎದುರಿಸಿದರು. ಎಷ್ಟೇ ರಣ ತಂತ್ರವನ್ನು ಪ್ರಯೋಗಿಸಿದರೂ ಆಸೀಸ್ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ
ಟ್ರಾವಿಸ್ ಹೆಡ್-ಮೊಹಮ್ಮದ್ ಸಿರಾಜ್ ನಡುವೆ ಮಾತಿನ ಚಕಮಕಿ
ಸ್ಪೋಟಕ ಬ್ಯಾಟ್ ಮಾಡಿದ ಟ್ರಾವಿಸ್ ಹೆಡ್ 140 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ 17 ಬೌಂಡರಿಗಳೊಂದಿಗೆ 140 ರನ್ ಗಳಿಸಿ 150ರ ಸನಿಹದಲ್ಲಿದ್ದರು. ಈ ವೇಳೆ 82ನೇ ಓವರ್‌ನ ಮೊದಲನೇ ಎಸೆತದಲ್ಲಿ ಬೌಂಡರಿ ಗಳಿಸಿದ ಬಳಿಕ ಮೂರನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಸಿಕ್ಸರ್ ಬಾರಿಸಿದ್ದರು. ಈ ವೇಳೆ ತೀವ್ರ ಒತ್ತಡದಲ್ಲಿದ್ದ ಮೊಹಮ್ಮದ್ ಸಿರಾಜ್, ಸ್ಲೋ ಯಾರ್ಕರ್ ಪ್ರಯೋಗ ಮಾಡಿದರು. ಇದನ್ನು ಅರಿಯುವಲ್ಲಿ ವಿಫಲರಾದ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೊಹಮ್ಮದ್ ಸಿರಾಜ್, ಟ್ರಾವಿಸ್ ಹೆಡ್ ಅವರಿಗೆ ಆಕ್ರಮಣಕಾರಿ ಪದಗಳನ್ನು ಬಳಸಿದರು. ಇದಕ್ಕೆ ಆಕ್ರೋಶಗೊಂಡ ಟ್ರಾವಿಸ್ ಹೆಡ್ ಕೂಡ ಮಾತಿನಲ್ಲಿ ತಿರುಗೇಟು ನೀಡಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
There was a bit happening here between Head and Siraj after the wicket 👀#AUSvIND pic.twitter.com/f4k9YUVD2k
— 7Cricket (@7Cricket) December 7, 2024
ಮೊಹಮ್ಮದ್ ಸಿರಾಜ್‌ರನ್ನು ಕೆಣಕಿದ ಆಸೀಸ್ ಫ್ಯಾನ್ಸ್
ಟ್ರಾವಿಸ್ ಹೆಡ್ ಹಾಗೂ ಮೊಹಮ್ಮದ್ ಸಿರಾಜ್ ಅವರ ನಡುವಣ ಹೈಡ್ರಾಮ ಇಲ್ಲಿಗೆ ಮುಗಿಯಲಿಲ್ಲ. ಬೌಲಿಂಗ್ ಮುಗಿಸಿದ ಬಳಿಕ ಬೌಂಡರಿ ಲೈನ್ ಬಳಿ ಫೀಲ್ಡ್ ಮಾಡಲು ಬಂದಿದ್ದ ಸಿರಾಜ್‌ಗೆ ಗ್ಯಾಲರಿಯಲ್ಲಿ ಕುಳಿತಿದ್ದ ಆಸೀಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು ಹಾಗೂ ಟೀಮ್ ಇಂಡಿಯಾ ವೇಗಿಯನ್ನು ಆಕ್ರಮಣಕಾರಿ ಮಾತುಗಳಿಂದ ಕೆಣಕಿದರು. ಈ ವೇಳೆ ಸಿರಾಜ್ ಕೂಡ ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಂಪೈರ್‌ಗಳ ಬಳಿ ಸಿರಾಜ್ ದೂರು ನೀಡಿದರು.
337 ರನ್ ಕಲೆ ಹಾಕಿದ ಆಸ್ಟ್ರೇಲಿಯಾ
ಟ್ರಾವಿಡ್ ಹೆಡ್ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 337 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಆತಿಥೇಯರು ಪ್ರಥಮ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆಯನ್ನು ಪಡೆದರು. ಈ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 4 ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮುನ್ನ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
ಈ ಸುದ್ದಿಯನ್ನು ಓದಿ: IND vs AUS: ಜಸ್‌ಪ್ರೀತ್ ಬುಮ್ರಾಗೆ ಗಾಯ? ಭಾರತ ತಂಡಕ್ಕೆ ಭಾರಿ ಆಘಾತ!