Tuesday, 17th December 2024

Syria Crisis: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ; ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಪಲಾಯನ

Syria Crisis

ಡಮಾಸ್ಕಸ್ (ಸಿರಿಯಾ): ಸಿರಿಯಾದಲ್ಲಿ ಅಂತರ್ಯುದ್ಧ ಭುಗಿಲೆದ್ದಿದ್ದು, ದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ. ಈ ಮಧ್ಯೆ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ (Bashar al-Assad) ಅವರ 24 ವರ್ಷಗಳ ಸರ್ವಾಧಿಕಾರಿ ಆಡಳಿತ ಕೊನೆಗೊಂಡಿದ್ದು, ಅವರು ದೇಶಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಸಿರಿಯಾದ ಸೇನಾ ಕಮಾಂಡ್ ಮಾಹಿತಿ ನೀಡಿದೆ. ಹಲವಾರು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವ ಬಂಡುಕೋರರು ರಾಜಧಾನಿ ಡಮಾಸ್ಕಸ್​ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ದೇಶ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ (Syria Crisis).

ಬಷರ್ ಅಲ್-ಅಸ್ಸಾದ್ ಮತ್ತು ಅವರ ಕುಟುಂಬ ಸದಸ್ಯರು ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ಇತ್ತ ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಬಂಡುಕೋರ ಗುಂಪುಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿವೆ. ಜನರು ಆಯ್ಕೆ ಮಅಡುವ ನಾಯಕರಿಗೆ ಬೆಂಬಲ ನೀಡುವುದಾಗಿ ಸಿರಿಯಾ ಪ್ರಧಾನಿ ಮೊಹಮ್ಮದ್‌ ಘಾಜಿ ಅಲ್‌-ಜಲಾಲಿ ತಿಳಿಸಿದ್ದಾರೆ.

ಬಂಡುಕೋರರು ಹೇಳಿದ್ದೇನು?

“ಇವತ್ತು (ಡಿ. 8) ಕರಾಳ ಯುಗದ ಅಂತ್ಯ ಹಾಗೂ ಸಿರಿಯಾದಲ್ಲಿ ಹೊಸ ಯುಗದ ಆರಂಭವನ್ನು ನಾವು ಘೋಷಿಸುತ್ತಿದ್ದೇವೆ” ಎಂದು ಬಂಡುಕೋರ ಪಡೆಗಳ ನೇತೃತ್ವ ವಹಿಸಿರುವ ಹಯಾತ್ ತಹ್ರಿರ್ ಅಲ್-ಶಾಮ್ ಬಣ ಹೇಳಿದೆ. ರಾಜಧಾನಿಯಲ್ಲಿ ಆತಂಕ ಆವರಿಸಿದ್ದು, ನಗರದಲ್ಲಿ ಗುಂಡಿನ ದಾಳಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಬಂಡುಕೋರ ಗುಂಪುಗಳಿಗೆ ಅಮೆರಿಕ ಮತ್ತು ಇರಾನ್ ಬೆಂಬಲವಿದೆ.

13 ವರ್ಷಗಳಿಂದ ಅಂತರ್ಯುದ್ಧ

ರಷ್ಯಾ ಮತ್ತು ಇರಾನ್‌ ಬೆಂಬಲದಿಂದ 2000ರ ಜುಲೈಯಲ್ಲಿ ಬಷರ್‌ ಅಲ್‌ ಅಸ್ಸಾದ್‌ ಅಧಿಕಾರಕ್ಕೆ ಬಂದಿದ್ದರು. ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದೆ. ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿರುವ ಕಾರಣ ಬಂಡುಕೋರರ ಸಂಘಟನೆ ಶಕ್ತಿಯುತವಾಗಿದ್ದು, ಸರ್ಕಾರ ಪತನವಾಗಿದೆ.

ಕೂಡಲೇ ದೇಶ ಬಿಡುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ಸದ್ಯ ಸಿರಿಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿದ್ದು, ಆದಷ್ಟು ಬೇಗ ಅಲ್ಲಿಂದ ವಾಪಸ್‌ ಆಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ. ಸಿರಿಯಾದಲ್ಲಿರುವ ಭಾರತದ ನಾಗರಿಕರಿಗೆ ಎಚ್ಚರಿಕೆಯನ್ನು ವಹಿಸುವಂತೆ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರ ಇರುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ನಾಗರಿಕರನ್ನು ಕೇಳಿಕೊಂಡಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೆ ಹೊರಟು ಬರಲು ಸೂಚನೆ ನೀಡಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ʼʼಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯರು ತಮ್ಮ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ)ಕ್ಕೆ ಕರೆ ಮಾಡಿ ಮತ್ತು ಇಮೇಲ್ ಐಡಿ hoc.damascus@mea.gov.inಗೆ ಸಂಪರ್ಕಿಸಿʼʼ ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Syria Crisis: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ; ಕೂಡಲೇ ದೇಶ ಬಿಡುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ