Explainer: ಸಿರಿಯಾ ಎಂಬ ಪುಟ್ಟ ದೇಶದ ಆಡಳಿತ ರಾತ್ರೋರಾತ್ರಿ ಮಗುಚಿ ಬಿದ್ದಿದೆ. ದಶಕಗಳ ಕಾಲ ಅಲ್ಲಿನ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಧ್ಯಕ್ಷ ಜನರ ಕೋಪಕ್ಕೆ (Syria Crisis) ತುತ್ತಾಗುವ ಭಯದಲ್ಲಿ ಕೈಗೆ ಸಿಕ್ಕ ಖಾಸಗಿ ವಿಮಾನ ಹತ್ತಿ ರಷ್ಯಾಕ್ಕೆ ಪರಾರಿಯಾಗಿದ್ದಾನೆ. ಒಂದು ಕಡೆ ಇಸ್ರೇಲ್, ಇನ್ನೊಂದು ಕಡೆ ಇರಾನ್, ಮತ್ತೊಂದೆಡೆ ಲೆಬನಾನ್ ಹಾಗೂ ಟರ್ಕಿ, ಮತ್ತೊಂದು ಕಡೆ ಸಮುದ್ರ. ಇಷ್ಟನ್ನು ಬೌಂಡರಿಯಾಗಿ ಇಟ್ಟುಕೊಂಡಿರುವ ಈ ಸಿರಿಯಾ, ಇಸ್ಲಾಮಿಕ್ ಭಯೋತ್ಪಾದನೆಗೆ ಇನ್ನೊಂದು ಹೆಸರಾಗಿರುವ ಐಸಿಸ್ ಸಂಘಟನೆಗೆ ಒಂದು ಕಾಲದಲ್ಲಿ ನೆಲೆಯಾಗಿತ್ತು. ಜಗತ್ತನ್ನೇ ನಡುಗಿಸಿದ್ದ ʼಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾʼ ಎಂಬ ಹೆಸರಿನಲ್ಲಿರುವ ಸಿರಿಯಾ ಇದೇನೇ. ಅಧ್ಯಕ್ಷ ಬಷರ್ ಅಲ್-ಅಸ್ಸಾದ್ (Bashar Al Assad) ವಿರುದ್ಧ ಭುಗಿಲೆದ್ದಿರುವ ಜನರ ಅಸಮಾಧಾನ ಮತ್ತು ಭಯೋತ್ಪಾದಕ ಪಡೆಗಳ ಅಬ್ಬರದ ನಡುವೆ ಇದೀಗ ರಾಜಧಾನಿ ಡಮಾಸ್ಕಸ್ ಬಂಡುಕೋರ ಪಡೆಗಳ ವಶವಾಗಿದೆ. ಇದೇ ಸುಸಮಯ ಅಂತ ಅಮೆರಿಕದ ವಿಮಾನಗಳು ಐಸಿಸ್ (ISIS) ಭಯೋತ್ಪಾದಕರ ತಾಣಗಳ ಮೇಲೆ ಬಾಂಬ್ಗಳ ಮಳೆ ಸುರಿಸ್ತಾ ಇವೆ. ಒಟ್ಟಾರೆ ಸಿರಿಯಾ ಈಗ ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಲ್ಲಿದೆ.
ಯಾರ ವಿರುದ್ಧ ಯಾರ ಯುದ್ಧ?
ಹಾಗೆ ನೋಡಿದರೆ ಸಿರಿಯಾದ ಅಂತರ್ಯುದ್ಧದ ಇತಿಹಾಸ ಸುದೀರ್ಘವಾಗಿದೆ. ದಶಕಗಳಿಂದ ಇಲ್ಲಿನ ಅಧಿಕಾರವನ್ನು ಬಷರ್ ಅಲ್ ಅಸ್ಸಾದ್ ಕುಟುಂಬ ಅನುಭವಿಸ್ತಾ ಇದೆ. ರಷ್ಯಾ ಮತ್ತು ಇರಾನ್ ಬೆಂಬಲದಿಂದ 2000ರ ಜುಲೈಯಲ್ಲಿ ಬಷರ್ ಅಲ್ ಅಸ್ಸಾದ್ ಅಧಿಕಾರಕ್ಕೆ ಬಂದಿದ್ದರು. ಹಲವು ವರ್ಷಗಳಿಂದ ಸರ್ವಾಧಿಕಾರ ನಡೆಸುತ್ತಿರುವ ಸಿರಿಯಾದಲ್ಲಿ ಪ್ರಜಾಪ್ರಭುತ್ವವೇ ಪಲಾಯನ ಮಾಡಿತ್ತು. ಮಿಲಿಟರಿಯ ನೆರವಿನಿಂದ ಬಷರ್ ಅಲ್ ಅಸಾದ್ ನಿರಂಕುಶ ಆಡಳಿತ ನಡೆಸ್ತಾ ಇದ್ದ. ಅರ್ಧ ಶತಮಾನ ಅಸ್ಸಾದ್ ಕುಟುಂಬ ಸಿರಿಯಾವನ್ನು ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿತ್ತು. ಪ್ರತಿಭಟಿಸಿದವರಿಗೆ ಸಾಮೂಹಿಕ ಸೆರೆವಾಸ, ಚಿತ್ರಹಿಂಸೆ, ನ್ಯಾಯಾಂಗ ಹತ್ಯೆಗಳು, ಜನರ ವಿರುದ್ಧದ ದೌರ್ಜನ್ಯಗಳು ಸಿಕ್ಕಾಪಟ್ಟೆ ನಡೆದವು. 2011ರ ಅರಬ್ ಸ್ಪ್ರಿಂಗ್ ಸಮಯದಲ್ಲಿಯೇ ಇಲ್ಲಿ ಸಿವಿಲ್ ವಾರ್ ಶುರುವಾಗಿತ್ತು. ಕೊನೆಗೂ ಅದು ಈ ದೇಶವನ್ನು ಧ್ವಂಸಗೊಳಿಸಿದ್ದಲ್ಲದೆ, ಉಗ್ರಗಾಮಿ ಗುಂಪು ಐಸಿಸ್ಗೆ ಜಿಹಾದಿಗಳನ್ನು ಹುಟ್ಟುಹಾಕುವ ಸ್ಥಳವಾಗಿ ಪರಿವರ್ತನೆಯಾಯ್ತು. ಐಸಿಸ್ ಅನ್ನು ನಾಶ ಮಾಡುವುದಕ್ಕೆ ಅಮೆರಿಕ ಸೇರಿದಂತೆ ಮಿತ್ರ ಪಡೆಗಳು ಸಿರಿಯಾ ಹಾಗೂ ಇರಾಕ್ ಮೇಲೆ ಅಟ್ಯಾಕ್ ಮಾಡಿದವು. ಇದು ಲಕ್ಷಾಂತರ ಮಂದಿ ನಿರಾಶ್ರಿತರನ್ನುಸೃಷ್ಟಿಸಿತು. ದೇಶದ ನೆಮ್ಮದಿ ಸರ್ವನಾಶವಾಯ್ತು.
ಬಶರ್ ಅಲ್-ಅಸ್ಸಾದ್ ಎಂಬ ರಾಕ್ಷಸ
ಬಷರ್ ಅಲ್ ಅಸ್ಸಾದ್ ಐದು ದಶಕಗಳಿಗೂ ಹೆಚ್ಚು ಕಾಲ ಸಿರಿಯಾದಲ್ಲಿ ಅಧಿಕಾರ ಅನುಭವಿಸಿದ ನಿರಂಕುಶ ರಾಜವಂಶದ ಎರಡನೇ ತಲೆಮಾರಿನವನು. ಲಂಡನ್ನಲ್ಲಿ ಮೆಡಿಕಲ್ ಸ್ಟಡಿ ಮಾಡಿ ನೇತ್ರಶಾಸ್ತ್ರಜ್ಞ. ಇವನ ತಂದೆ ಹಫೀಜ್ ಅಲ್-ಅಸ್ಸಾದ್ 1970ರಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಬಾತ್ ಪಾರ್ಟಿಯನ್ನು ಮುನ್ನಡೆಸಿದ್ದ. ತಂದೆಯ ಮರಣದ ನಂತರ ಅಸ್ಸಾದ್ ಅವಿರೋಧವಾಗಿ ಚುನಾವಣೆಯಲ್ಲಿ ಅಧಿಕಾರ ಪಡೆದ. ಅಲ್ಲಿಂದ 13 ವರ್ಷಗಳು ಅಂತರ್ಯುದ್ಧದ ಕಾಲ. ಅವನು ಮತ್ತು ಅವನ ಪಡೆಗಳು ತೀವ್ರವಾದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನಾಗರಿಕರ ವಿರುದ್ಧ ತೀವ್ರ ಕ್ರೌರ್ಯದ ಆರೋಪ ಹೊಂದಿವೆ. ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸಿದ್ದು, ವಿರೋಧಿಗಳ ಕಣ್ಮರೆ, ಅವರ ಹತ್ಯೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ನಾಗರಿಕ ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿದ್ದ. 2013ರಲ್ಲಿ ಘೌಟಾ ನಗರದಲ್ಲಿ ಸರಿನ್ ಗ್ಯಾಸ್ ದಾಳಿ ನಡೆಸಿ 1,400ಕ್ಕೂ ಹೆಚ್ಚು ಜನರನ್ನು ಇವನ ಮಿಲಿಟರಿ ಕೊಂದಿತ್ತು. 2011ರಿಂದ 2015ರವರೆಗೆ ಸುಮಾರು 13,000 ಜನರನ್ನು ಸೈದ್ನಾಯಾ ಜೈಲಿನಲ್ಲಿ ಕಾರಣವಿಲ್ಲದೆ ಈತ ಆಡಳಿತ ಗಲ್ಲಿಗೇರಿಸಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ವರದಿ ಹೇಳಿದೆ.
ರಾಜಧಾನಿ ಬಂಡುಕೋರರ ಪಾಲು
ಸದ್ಯ ಅಫಘಾನಿಸ್ತಾನದಲ್ಲಿ ಆದಂತೆಯೇ ಇಲ್ಲೂ ಆಗಿದೆ. ಬಂಡುಕೋರರು ಅರ್ಥಾತ್ ಭಯೋತ್ಪಾದಕರು ಅಸ್ಸಾದ್ ಸರ್ಕಾರವನ್ನು ಉರುಳಿಸಿದ್ದಾರೆ. ಬಂಡಾಯ ಹೋರಾಟಗಾರರು ರಾಜಧಾನಿ ಡಮಾಸ್ಕಸ್ ಅನ್ನು ವಿಮೋಚನೆಗೊಳಿಸಿದ್ದೇವೆ ಎಂದು ಸರ್ಕಾರಿ ಟಿವಿಯಲ್ಲಿ ಘೋಷಿಸಿದ್ದಾರೆ. ದೇಶಬಿಟ್ಟು ಪಲಾಯನ ಮಾಡಿರುವ ಅಸ್ಸಾದ್ ಮತ್ತು ಅವರ ಕುಟುಂಬ ಸದಸ್ಯರು ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್-ಜಲಾಲಿ ಮಾತ್ರ ರಾಜಧಾನಿಯಲ್ಲೇ ಉಳಿದುಕೊಂಡಿದ್ದಾರೆ. ಜನ ಆಯ್ಕೆ ಮಾಡುವ ನಾಯಕರಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ಜಲಾಲಿ ತಿಳಿಸಿದ್ದಾರೆ.
ಅಸ್ಸಾದ್ ಮಿತ್ರದೇಶಗಳು ನೆರವಿಗೆ ಬರಲಿಲ್ವಾ?
ಸರಕಾರ ದುರ್ಬಲಗೊಂಡ ಸಮಯ ನೋಡಿ ಬಂಡುಕೋರರು ದಾಳಿ ಮಾಡಿದ್ದಾರೆ. ಯಾಕೆಂದರೆ ಅಸ್ಸಾದ್ನ ಪ್ರಮುಖ ಮಿತ್ರರಾಷ್ಟ್ರಗಳು ಈಗ ತಮ್ಮದೇ ಘರ್ಷಣೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. 2022ರಿಂದ ಉಕ್ರೇನ್ ಜೊತೆಗೆ ರಷ್ಯಾ ಬಡಿದಾಡುತ್ತಿದೆ. ಅದು ಅದರ ಮಾನವಶಕ್ತಿ ಮತ್ತು ಮಿಲಿಟರಿ ಸಂಪನ್ಮೂಲಗಳನ್ನು ಹೀರಿಕೊಂಡಿದೆ. ಪ್ರಮುಖ ಮಿತ್ರರಾಷ್ಟ್ರ ಸಿರಿಯಾಕ್ಕೆ ಕೆಲವೇ ಕೆಲವು ಜೆಟ್ಗಳು ಮತ್ತು ಪಡೆಗಳನ್ನು ಕೊಟ್ಟಿದೆ. ಅದು ಸಾಕಾಗಲ್ಲ. ಇರಾನ್ ದೇಶ, ಕಳೆದ ವರ್ಷದಿಂದ ಇಸ್ರೇಲ್ನೊಂದಿಗಿನ ಯುದ್ಧ ಉಲ್ಬಣಗೊಂಡಿದ್ದರಿಂದ ಬಲಗುಂದಿದೆ. ಇಸ್ರೇಲಿ ದಾಳಿಗಳಿಂದಾಗಿ ಅದರ ಮುಖ್ಯ ಪ್ರಾಕ್ಸಿ ಯೋಧರ ಪಡೆ ಹೆಜ್ಬೊಲ್ಲಾ ನಾಶವಾಗಿದೆ. ಇದೇ ಚಾನ್ಸ್ ಅನ್ನು ಬಂಡುಕೋರರು ಬಳಸಿಕೊಂಡಿದ್ದಾರೆ.
ಬಂಡುಕೋರರು ಯಾರು?
“ಸಿರಿಯಾದಲ್ಲಿ ಹೊಸ ಯುಗದ ಆರಂಭವನ್ನು ನಾವು ಘೋಷಿಸುತ್ತಿದ್ದೇವೆ” ಎಂದು ಬಂಡುಕೋರ ಪಡೆಗಳ ನೇತೃತ್ವ ವಹಿಸಿರುವ ಹಯಾತ್ ತಹ್ರಿರ್ ಅಲ್-ಶಾಮ್ ಬಣ ಹೇಳಿದೆ. ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿರುವ ಕಾರಣ ಬಂಡುಕೋರರ ಸಂಘಟನೆ ಶಕ್ತಿಯುತವಾಗಿದ್ದು, ಸರ್ಕಾರ ಪತನವಾಗಿದೆ. 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ (Abu Mohammed al-Golani) ಹಯಾತ್ ತಹ್ರಿರ್ ಅಲ್-ಶಾಮ್ ಮತ್ತಿತರ ಬಂಡುಕೋರ ಪಡೆಗಳ ನೇತೃತ್ವ ವಹಿಸಿದ್ದಾನೆ. ಇರುವುದರಲ್ಲೆಲ್ಲಾ ಅತ್ಯಂತ ಪವರ್ಫುಲ್ ಗುಂಪು ಅಂದರೆ ಇವನದೇ.
ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್ ಅಲ್-ಗೊಲಾನಿಯ ಎಚ್ಟಿಎಸ್ ಸಂಘಟನೆ ಈ ಹಿಂದೆ ಅಪಾಯಕಾರಿ ಭಯೋತ್ಪಾದಕ ಗುಂಪು ಅಲ್-ಖೈದಾ (Al-Qaeda)ದೊಂದಿಗೆ ಗುರುತಿಸಿಕೊಂಡಿತ್ತು. ಜಿಹಾದಿಯಾಗಿದ್ದ ಅಬು ಮೊಹಮ್ಮದ್ ಅಲ್-ಗೊಲಾನಿ ಇದೀಗ ರಾಷ್ಟ್ರ ನಿರ್ಮಾಣವನ್ನು ಪ್ರತಿಪಾದಿಸುವ ನಾಯಕನಾಗಿ ಬಿಂಬಿಸಲ್ಪಡುತ್ತಿದ್ದಾನೆ. ಮೂಲತಃ ಅಲ್-ಖೈದಾದ ನುಸ್ರಾ ಫ್ರಂಟ್ನ ಭಾಗವಾಗಿದ್ದ ಎಚ್ಟಿಎಸ್, ಸಿರಿಯಾದ ವಾಯುವ್ಯ ಇಡ್ಲಿಬ್ ಪ್ರಾಂತ್ಯದಲ್ಲಿ ನಿಯಂತ್ರಣ ಹೊಂದಿತ್ತು. ಈ ಸಂಘಟನೆ ಸ್ಥಳೀಯ ಬುಡಕಟ್ಟುಗಳು ಮತ್ತು ಸಮುದಾಯಗಳ ಬೆಂಬಲವನ್ನು ಪಡೆದು ಮತ್ತಷ್ಟು ಬಲಿಷ್ಠವಾಗಿದೆ.
ಬದಲಾದನೇ ಭಯೋತ್ಪಾದಕ?
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ, ಅಲ್-ಗೊಲಾನಿ ಸಿರಿಯಾವನ್ನು ಪುನರ್ನಿರ್ಮಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದ. ಬಷರ್ ಆಡಳಿತದ ಪತನದ ನಂತರ ಈ ಸಂಘಟನೆಯನ್ನು ವಿಸರ್ಜಿಸುವುದಾಗಿ ತಿಳಿಸಿದ್ದ. ಸಿರಿಯಾದಲ್ಲಿನ ಏಕ ವ್ಯಕ್ತಿ ನಾಯಕತ್ವ ಕೊನೆಯಾಗಬೇಕು ಎಂದು ಪ್ರತಿಪಾದಿಸಿದ್ದ. 2016ರಲ್ಲಿ ಅಲ್-ಖೈದಾದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಅಲ್-ಗೊಲಾನಿ ತನ್ನ ಗುಂಪಿಗೆ ಜಬತ್ ಫತೇಹ್ ಅಲ್-ಶಾಮ್ ಮತ್ತು ನಂತರ ಹಯಾತ್ ತಹ್ರಿರ್ ಅಲ್-ಶಾಮ್ ಎಂದು ಮರುನಾಮಕರಣ ಮಾಡಿದ್ದ. ಪ್ರಸ್ತುತ ಸಿರಿಯಾವನ್ನು ಹೊಸ ದಿಕ್ಕಿನಲ್ಲಿ ಸಾಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಗೊಲಾನಿ ಹಿಂದಿನ ಹಿಂಸಾತ್ಮಕ ಸಿದ್ಧಾಂತಗಳಿಂದ ದೂರವಿದ್ದಾನೆ. ಆದರೂ ಸಿರಿಯಾ ಛಿದ್ರಛಿದ್ರವಾಗಿರುವುದರಿಂದ ಮತ್ತು ಅಂತಾರಾಷ್ಟ್ರೀಯ ಶಕ್ತಿಗಳು ಅದರ ಮೇಲೆ ಸದಾ ದಾಳಿ ಮಾಡಲು ಯತ್ನಿಸುತ್ತಿರುವುದರಿಂದ ದೇಶದ ಭವಿಷ್ಯ ಅನಿಶ್ಚಿತವಾಗಿದೆ.
ಮುಂದೇನು ಗತಿ?
ಅಸ್ಸಾದ್ನ ಮಿಲಿಟರಿಯನ್ನು ಈಗಬಂಡುಕೋರರ ಪಡೆಗಳು ವಿಸರ್ಜಿಸಿವೆ. ಆದರೆ, ಕ್ರೂರ ನಿರಂಕುಶಾಧಿಕಾರದಿಂದ ಬಳಲಿದ ಜನರಿಗೆ ಇದರ ಮುಂದಿನ ಹಂತ ಹೊಸ ಬೆಳಕಾಗಬಹುದೇ ಅಥವಾ ಮತ್ತೊಂದು ವಿಭಿನ್ನ ರೀತಿಯ ನಿರಂಕುಶ ಆಡಳಿತ ಬರಲಿದೆಯೇ ಎಂದು ಹೇಳುವುದು ಕಷ್ಟ. ಯಾಕೆಂದರೆ ಈಗಿನ ಬಂಡುಕೋರರಲ್ಲಿ ತೀವ್ರವಾದಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. “ಇದು ಸಂಪೂರ್ಣ ಇಸ್ಲಾಮಿಕ್ ದೇಶವಾಗಲಿದೆ” ಎಂದು ಗೋಲಾನಿ ಹೇಳಿದ್ದಾನೆ. ಅಂದರೆ ಪ್ರಜಾಪ್ರಭುತ್ವಕ್ಕೆ ಇಲ್ಲಿ ಜಾಗವಿಲ್ಲ ಎಂದರ್ಥ.
ಅಲ್ಲಿರುವ ಭಾರತೀಯರ ಗತಿಯೇನು?
ಸಿರಿಯಾದಲ್ಲಿ ಹದಗೆಟ್ಟಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಆದಷ್ಟು ಬೇಗ ಅಲ್ಲಿಂದ ವಾಪಸ್ ಆಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಭಾರತೀಯ ಪ್ರಜೆಗಳಿಗೆ ಸೂಚನೆ ನೀಡಿದೆ. ಸಿರಿಯಾದಲ್ಲಿರುವ ಭಾರತದ ನಾಗರಿಕರಿಗೆ ಎಚ್ಚರಿಕೆ ವಹಿಸುವಂತೆ ಮತ್ತು ಸುರಕ್ಷಿತ ನೆಲೆಗಳ ಬಳಿ ಇರುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಳಿಕೊಂಡಿದೆ.
ಇದನ್ನೂ ಓದಿ: Syria Crisis: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ; ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಪಲಾಯನ