Thursday, 12th December 2024

Money Tips: ಮೊದಲ ಬಾರಿ ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಈ ಅಂಶಗಳನ್ನು ಮರೆಯದಿರಿ

Money Tips

ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚ ಹೆಚ್ಚಾಗುತ್ತಿದೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರವಂತೂ ದಿನ ಕಳೆದಂತೆ ದುಬಾರಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಜತೆಗೆ ಔಷಧದ ಬೆಲೆ, ಚಿಕಿತ್ಸಾ ವೆಚ್ಚ ಅಧಿಕವಾಗುತ್ತಿದೆ. ಒಂದು ವೇಳೆ ಅನಾರೋಗ್ಯ ಸಂಭವಿಸಿದರೆ ನಮ್ಮೆಲ್ಲ ಉಳಿತಾಯ ಚಿಕಿತ್ಸೆಗಾಗಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಇದೇ ಕಾರಣಕ್ಕೆ ಆರ್ಥಿಕ ತಜ್ಞರು ಉಳಿತಾಯದ ಜತೆಗೆ ಆರೋಗ್ಯ ವಿಮೆ (Health Insurance) ಮಾಡಿಸಬೇಕು ಎಂದು ಸಲಹೆ ನೀಡುತ್ತಾರೆ. ಆರೋಗ್ಯ ವಿಮೆ ಮಾಡಿಸುವ ಮುನ್ನ ಸಾಕಷ್ಟು ವಿಚಾರಗಳನ್ನು ನಾವು ಗಮನಿಸಬೇಕಾಗುತ್ತದೆ. ಇಲ್ಲದಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಇದು ಪ್ರಯೋಜನಕ್ಕೆ ಬಾರದೆ ಇರಬಹುದು. ಹೀಗಾಗಿ ನೀವು ಮೊದಲ ಬಾರಿ ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸುತ್ತಿದ್ದರೆ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕು ಎನ್ನುವ ವಿವರ ಇಲ್ಲಿದೆ (Money Tips).

‌ಸೂಕ್ತ ಆರೋಗ್ಯ ವಿಮೆ ಆಯ್ದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಬಹು ದೊಡ್ಡ ಸವಾಲೇ ಸರಿ. ಇನ್ಶೂರೆನ್ಸ್‌ ಒದಗಿಸುವ ಹಲವು ಕಂಪೆನಿಗಳ, ವಿವಿಧ ಪಾಲಿಸಿಗಳ ಮಧ್ಯೆ ನಮ್ಮ ಅಗತ್ಯಕ್ಕೆ ಅನುಗುಣವಾದ ಪ್ಲ್ಯಾನ್‌ ಆಯ್ದುಕೊಳ್ಳಬೇಕಾಗುತ್ತದೆ. ನಾವು ಆಯ್ಕೆ ಮಾಡುವ ಮುನ್ನ ಪಾಲಿಸಿ ಒಳಗೊಂಡಿರುವ ಷರತ್ತುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ.

ಗಮನಿಸಬೇಕಾದ ಅಂಶಗಳು

ಸೂಕ್ತ ಪಾಲಿಸಿ: ನೀವು ಆಯ್ದುಕೊಳ್ಳುವ ಪಾಲಿಸಿ ಆ್ಯಂಬುಲೆನ್ಸ್‌ ಶುಲ್ಕಗಳು, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು, ಹೆರಿಗೆ ಪ್ರಯೋಜನಗಳು, ನಗದುರಹಿತ ಚಿಕಿತ್ಸೆ, ಎಕ್ಸ್‌ರೇ ವೆಚ್ಚ ಮತ್ತು ದೈನಂದಿನ ಆಸ್ಪತ್ರೆ ಶುಲ್ಕಗಳು ಸೇರಿದಂತೆ ವಿವಿಧ ವೈದ್ಯಕೀಯ ಪರಿಸ್ಥಿತಿಗಳನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಗದಿತ ಕಾಯಿಲೆಯ ಚಿಕಿತ್ಸೆಗಾಗಿ ನೀವು ವಿಮೆ ಖರೀದಿಸುತ್ತಿದ್ದರೆ ಅಂತಹ ಪ್ಲ್ಯಾನ್‌ಗಳನ್ನು ಕೇಳಿ ತಿಳಿದುಕೊಳ್ಳಿ.

ಕುಟುಂಬ ಪ್ಲ್ಯಾನ್‌ ಆಯ್ದುಕೊಳ್ಳಿ: ಇನ್ನು ವೈಯಕ್ತಿಕ ಪಾಲಿಸಿಗಿಂತ ಇಡೀ ಕುಟುಂಬವನ್ನು ಒಳಗೊಂಡಿರುವ ಪಾಲಿಸಿ ಖರೀದಿಸುವುದು ಸೂಕ್ತ. ಪ್ರತಿಯೊಬ್ಬರ ಅಗತ್ಯಗಳಿಗೆ ಸರಿ ಹೊಂದುವ ಪ್ಯಾನ್‌ ಖರೀದಿಸುವುದು ಮುಖ್ಯ. ತುರ್ತು ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ವಿವಿಧ ಕಂಪೆನಿಗಳಲ್ಲಿ ಲಭ್ಯವಿರುವ ಪ್ಲ್ಯಾನ್‌ಗಳನ್ನು ಹೋಲಿಸಿ ನೋಡಿ ನಿಮಗೆ ಸೂಕ್ತವಾದುದನ್ನು ಆರಿಸಿ.

ಪ್ರೀಮಿಯಂ: ಮಾಸಿಕ, ವಾರ್ಷಿಕ ಸೇರಿದಂತೆ ಹಲವು ವಿಧದಲ್ಲಿ ಪ್ರೀಮಿಯಂ ಪಾವತಿಯ ಆಯ್ಕೆ ಲಭ್ಯ. ನಿಮ್ಮ ಆದಾಯಕ್ಕೆ ಹೊಂದಿಕೊಂಡಿರುವ ಪ್ರೀಮಿಯಂ ಆಯ್ದುಕೊಳ್ಳಿ.

ಕಾಯುವ ಅವಧಿ: ಆರೋಗ್ಯ ವಿಮಾ ಪಾಲಿಸಿಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆ, ಹೆರಿಗೆ ಪ್ರಯೋಜನಗಳು ಅಥವಾ ಕೆಲವು ಚಿಕಿತ್ಸೆಗಳಂತಹ ನಿರ್ದಿಷ್ಟ ವಿಚಾರಗಳಿಗೆ ಕಾಯುವ ಅವಧಿ ಹೊಂದಿರುತ್ತವೆ. ಈ ಕಾಯುವ ಸಮಯವು ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ. ಇವುಗಳನ್ನು ಕೇಳಿ ತಿಳಿದುಕೊಳ್ಳಿ.

ನವೀಕರಣದ ಆಯ್ಕೆ: ಯೋಜನೆಯು ಜೀವಮಾನದ ನವೀಕರಣವನ್ನು(Lifetime renewability) ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮಗೆ ವಯಸ್ಸಾದಂತೆ ಹೆಚ್ಚಿನ ವೆಚ್ಚದ ಹೊಸ ಪ್ಲ್ಯಾನ್‌ ಖರೀದಿಸದೆ ಅಸ್ತಿತ್ವದಲ್ಲಿ ಇರುವ ಪಾಲಿಸಿಯನ್ನು ನವೀಕರಿಸಬಹುದು.

ಹೊಸ ಸದಸ್ಯರ ಹೆಸರು ಸೇರಿಸುವಂತಿರಲಿ: ಕುಟುಂಬ ಸದಸ್ಯರಿಗಾಗಿ ನೀವು ಆರೋಗ್ಯ ವಿಮೆಯನ್ನು ಮಾಡಿಸುವುದಾದರೆ ಸುಲಭವಾಗಿ ಹೊಸ ಸದಸ್ಯರನ್ನು ಸೇರಿಸಬಹುದಾದ ಪ್ಲ್ಯಾನ್‌ ಅನ್ನು ಆರಿಸಿ.

ಇವನ್ನೂ ಪರಿಗಣಿಸಿ: ಆರೋಗ್ಯ ವಿಮೆ ಆಯ್ದುಕೊಳ್ಳುವ ಮುನ್ನ ನಿಮ್ಮ ವಯಸ್ಸು, ಕುಟುಂಬ ಸದಸ್ಯರ ಸಂಖ್ಯೆ, ಆರೋಗ್ಯ ಸ್ಥಿತಿ, ಆರೋಗ್ಯದ ಇತಿಹಾಸ, ಜೀವನ ವಿಧಾನ ಇತ್ಯಾದಿ ಪರಿಗಣಿಸಿ.

ಷರತ್ತುಗಳನ್ನು ಗಮನವಿಟ್ಟು ಓದಿ: ಆರೋಗ್ಯ ವಿಮೆ ಕ್ಲೈಮ್‌ ಮಾಡಲು ಹಲವು ಷರತ್ತುಗಳಿರುತ್ತವೆ. ಸಹಿ ಮಾಡುವ ಮುನ್ನ ಇವನ್ನು ಗಮನವಿಟ್ಟು ಓದಿ.

ಆ್ಯಡ್-ಆನ್ ಕವರ್‌ಗಳನ್ನು ಪರಿಗಣಿಸಿ: ಗಂಭೀರ ಕಾಯಿಲೆಗಳು, ಆಕಸ್ಮಿಕ ಗಾಯಗಳು ಅಥವಾ ಹೆರಿಗೆ ವೆಚ್ಚಗಳಿಗೆ ಹೆಚ್ಚುವರಿ ರಕ್ಷಣೆಯನ್ನು ಆರಿಸಿ.

ನಿಮ್ಮ ಪಾಲಿಸಿಯನ್ನು ನಿಯಮಿತವಾಗಿ ಪರಿಶೀಲಿಸಿ: ನಿಮ್ಮ ಅಗತ್ಯಗಳು ಮತ್ತು ಸಂದರ್ಭಗಳು ಬದಲಾದಂತೆ ನಿಮ್ಮ ಪಾಲಿಸಿಯನ್ನು ನವೀಕರಿಸಿ.

ಈ ಸುದ್ದಿಯನ್ನೂ ಓದಿ: Money Tips: 2 ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಈಗಲೇ ಒಂದನ್ನು ಕ್ಯಾನ್ಸಲ್‌ ಮಾಡಿ; ಇಲ್ಲದಿದ್ದರೆ ಕಾದಿದೆ ಭಾರಿ ದಂಡ