ಉಜಿರೆ: ಧರ್ಮಸ್ಥಳದಲ್ಲಿ ಇದೇ 10ರಿಂದ 14ರವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಯುಟ್ಯೂಬ್ ಮತ್ತು ಫೇಸ್‍ಬುಕ್‍ನಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ನಡೆಯಲಿದೆ. ವಸ್ತು ಪ್ರದರ್ಶನ ರದ್ದುಗೊಳಿಸಲಾಗಿದೆ. ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು ನೋಡಬೇಕು ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿನಂತಿಸಿದ್ದಾರೆ.
13ರಂದು ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. 14ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಹಿರಿಯ ವಿದ್ವಾಂಸ ಡಾ.ಎಸ್.ರಂಗನಾಥ್ ಉದ್ಘಾಟಿಸಲಿದ್ದು, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸು ವರು. ರಾತ್ರಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದೆ.
ನಾಡಿನೆಲ್ಲೆಡೆಯಿಂದ ಭಕ್ತರು ಲಕ್ಷ ದೀಪೋತ್ಸವಕ್ಕೆ ಪಾದಯಾತ್ರೆಯಲ್ಲಿ ಬಂದು ಸೇವೆ ಮಾಡುತ್ತಾರೆ. ರೈತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಧಾನ್ಯಗಳನ್ನು ಅನ್ನದಾನಕ್ಕಾಗಿ ವಿನಿಯೋಗಿಸಲು ಕಾಣಿಕೆಯಾಗಿ ತಂದು ಅರ್ಪಿಸುತ್ತಾರೆ. ಧರ್ಮಸ್ಥಳದ ದೇವ ಸ್ಥಾನ, ಬೀಡು, ವಸತಿಛತ್ರಗಳು, ಉದ್ಯಾನ, ಪ್ರವೇಶದ್ವಾರ, ಬಾಹುಬಲಿ ಬೆಟ್ಟವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.